ಬೆಂಗಳೂರು: ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿಗೆ (Rahul Gandhi) ಇಡಿ ಸಮನ್ಸ್ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಕಾಂಗ್ರೆಸ್ ನಾಯಕರು ಇಂದು (ಜೂನ್ 13) ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಮಕ್ಕಳ ಸಮೇತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇಡಿ ಕಚೇರಿಗೆ ಮುತ್ತಿಗೆ ಹಾಕುವ ನಿಟ್ಟಿನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಿದ್ದಾರೆ. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ನೋಟಿಸ್ ಕೊಟ್ಟು ಕಿರುಕುಳ ನೀಡ್ತಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ನಾವಿದ್ದೇವೆ, ದೇಶದ ಜನರಿದ್ದಾರೆ ಎಂದು ಕಿಡಿಕಾರಿದರು.
ಲಾಲ್ಬಾಗ್ ಗೇಟ್ನಿಂದ ಕಾಂಗ್ರೆಸ್ ರ್ಯಾಲಿ ಹೊರಟಿದೆ. ಮೆರವಣಿಗೆಗೂ ಮುನ್ನಾ ಕಾರ್ಯಕರ್ತರು ಬಾರ್ ಕೋಲ್ ಚಳುವಳಿ ನಡೆಸಿದರು. ಮೋದಿ ವೇಷಧಾರಿಗೆ ಬಾರ್ ಕೋಲ್ನಿಂದ ಏಟು ಕೊಟ್ಟು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಮೆರವಣಿಗೆ ಹಿನ್ನೆಲೆ ಶಾಂತಿನಗರ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ಆಗಿದೆ. ಟ್ರಾಫಿಕ್‌ಜಾಮ್‌ನಿಂದ ಅಂಬ್ಯುಲೆನ್ಸ್ ವಾಹನಗಳ ಮಧ್ಯೆ ಸಿಲುಕಿತ್ತು. ಈ ವೇಳೆ ಸಾರ್ವಜನಿಕರು ಅಂಬ್ಯುಲೆನ್ಸ್ ವಾಹನಕ್ಕೆ ಅವಕಾಶ ಮಾಡಿಕೊಟ್ಟರು.
ಇದನ್ನೂ ಓದಿ: ಯುವಕ-ಯುವತಿ ನಡುವಿನ ಪ್ರೀತಿ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ, ಒಬ್ಬ ಮಹಿಳೆ ಅಸ್ಪತ್ರೆಗೆ ದಾಖಲು
ಧರಣಿಯಲ್ಲಿ ಯಾವುದೇ ಅಹಿಕತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಲಾಲ್ಬಾಗ್ ಸುತ್ತಮುತ್ತ ಪೊಲೀಸ್ ಭದ್ರತೆ ಇದೆ. ವಿಲ್ಸನ್ ಗಾರ್ಡನ್ ಸ್ಮಶಾನದ ಬಳಿ ರ್ಯಾಲಿ ತಡೆಯಲು ಪೊಲೀಸರು ಬ್ಯಾರಿಕೇಡ್ ಅಳವಡಿಕೆ ಮಾಡಿದ್ದಾರೆ. ಧರಣಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಹಿರಿಯ ನಾಯಕರು ಭಾಗಿಯಾಗಿದ್ದಾರೆ.
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ತಿದೆ. ಪ್ರತಿಪಕ್ಷಗಳನ್ನು ಹಣಿಯುವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಸೋನಿಯಾ, ರಾಹುಲ್ ಗಾಂಧಿಗೆ ದುರುದ್ದೇಶಪೂರಿತ ನೋಟಿಸ್ ನೀಡಲಾಗಿದೆ. ಖಂಡಿತವಾಗಿ ಈ ಹೋರಾಟವನ್ನು ನಾವು ಇಲ್ಲಿಗೆ ಬಿಡುವುದಿಲ್ಲ ಎಂದರು.
ಕಾಂಗ್ರೆಸ್ ನಿಮ್ಮ ತರ ಕುತಂತ್ರಿಗಳ ಪಕ್ಷ ಅಲ್ಲ;
ಸುಬ್ರಹ್ಮಣ್ಯ ಸ್ವಾಮಿ ತಲೆಕೆಟ್ಟ ಎಂಪಿ ಇದ್ದರು. ಅವರು ದೂರು ಕೊಟ್ಟಿದ್ದು. 2017 ರಲ್ಲಿ ವಿಚಾರಣೆ ಮಾಡಿ ಕೇಸ್ನಲ್ಲಿ ಏನೂ ಇಲ್ಲ ಅಂತ ಮುಕ್ತಮಾಡಲಾಗಿತ್ತು. ಮೋದಿಯವರೇ, ಅಮಿತ್ ಶಾ ನಿಮಗೆ ಅನುಭವ ಇಲ್ಲ. ಕಾಂಗ್ರೆಸ್ ನಿಮ್ಮ ತರ ಕುತಂತ್ರಿಗಳ ಪಕ್ಷ ಅಲ್ಲ. ಸೋನಿಯಾ ರಾಹುಲ್ ಮುಟ್ಟುವ ಪ್ರಯತ್ನ ಮಾಡಿದರೆ ಏನಾಗತ್ತದೆ ಎಂದು ಎಚ್ಚರಿಕೆ ಕೊಡುತ್ತಿದ್ದೇವೆ ಅಂತ ಬಿಕೆ ಹರಿಪ್ರಸಾದ್ ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ!
ಧರಣಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಡಿ ಇಲಾಖೆಯನ್ನ ವಿರೋಧ ಪಕ್ಷಗಳ ಮೇಲೆ ಛೂ ಬಿಡುತ್ತಿದ್ದಾರೆ. ಆರ್‌ಬಿಐ, ಸಿಬಿಐ, ಐಟಿ, ಕೈಗೊಂಬೆಗಳನ್ನಾಗಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡರು ಇಡೀ ದೇಶದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಮೆರವಣಿಗೆಯಲ್ಲಿ ಇಡಿ ಕಚೇರಿಗೆ ಹೋಗಿದ್ದಾರೆ. ಸೋನಿಯಾ, ರಾಹುಲ್‌ಗಾಂಧಿಗೆ ನೈತಿಕ ಬೆಂಬಲವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಕಾನೂನು ಇವರ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ. ನ್ಯಾಷನಲ್ ಹೆರಾಲ್ಡ್ ಉದ್ಭವಾಗಿದ್ದು, ಸ್ವತಂತ್ರದ ಹೋರಾಟಕ್ಕಾಗಿ. ಈ ದೇಶದ ಜನರಿಗೆ ಶಕ್ತಿ ತುಂಬಲು ಜಾರಿಗೆ ಬಂದಿತ್ತು ಎಂದು ಹೇಳಿದರು.
ದ್ವೇಷದ ರಾಜಕಾರಣ ಮಾಡಬೇಡಿ- ಸಿದ್ದರಾಮಯ್ಯ:
ನಮ್ಮ ನಾಯಕರು ನಿಮ್ಮ ಯಾವ ಬೆದರಿಕೆಗೂ ಹೆದರಲ್ಲ. ಬ್ರಿಟಿಷರ ಲಾಠಿಗೇ ಹೆದರದವರು ನಿಮಗೆ ಹೆದರುತ್ತೇವಾ? ನಮ್ಮ ಹೋರಾಟ ನಿರಂತರವಾಗಿ ಇರುತ್ತೆ. ನೀವು ನಿಮ್ಮ ಹುಚ್ಚು ಸಾಹಸ ಮುಂದುವರಿಸಿದ್ರೆ ತಕ್ಕ ಕಲಿಸುತ್ತಾರೆ. ದ್ವೇಷದ ರಾಜಕಾರಣ ಮಾಡಬೇಡಿ. ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳಿವೆ. ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಹೀಗೆ ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ವಾಗ್ದಾಳೀ ನಡೆಸಿದರು.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:43 am, Mon, 13 June 22