ಮುನಿರತ್ನ ಮೇಲೆ ಮೊಟ್ಟೆ ಎಸೆತ: ಡಿಕೆ ಶಿವಕುಮಾರ್, ಡಿಕೆ ಸುರೇಶ್ ಕುಮ್ಮಕ್ಕಿನಿಂದಲೇ ಕೃತ್ಯ ಎಂದ ಬಿಜೆಪಿ ಶಾಸಕ

| Updated By: Ganapathi Sharma

Updated on: Dec 25, 2024 | 2:10 PM

ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಿಜೆಪಿ ಶಾಸಕ ಮುನಿರತ್ನ ಮೇಲೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ. ಈ ಘಟನೆಯಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಮುನಿರತ್ನ ಬೆಂಬಲಿಗರು ತಮ್ಮ ಕಾರಿಗೆ ಹಾನಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಕೂಡ ಆರೋಪಿಸಿದ್ದಾರೆ.

ಮುನಿರತ್ನ ಮೇಲೆ ಮೊಟ್ಟೆ ಎಸೆತ: ಡಿಕೆ ಶಿವಕುಮಾರ್, ಡಿಕೆ ಸುರೇಶ್ ಕುಮ್ಮಕ್ಕಿನಿಂದಲೇ ಕೃತ್ಯ ಎಂದ ಬಿಜೆಪಿ ಶಾಸಕ
ಮುನಿರತ್ನ ಮೇಲೆ ಮೊಟ್ಟೆ ಎಸೆತ
Follow us on

ಬೆಂಗಳೂರು, ಡಿಸೆಂಬರ್ 25: ಆರ್​ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಮೇಲೆ ಬೆಂಗಳೂರಿನ ನಂದಿನಿ ಲೇಔಟ್​​ ಠಾಣಾ ವ್ಯಾಪ್ತಿಯಲ್ಲಿ ಮೊಟ್ಟೆ ಎಸೆಯಲಾಗಿದೆ. ಲಕ್ಷ್ಮೀದೇವಿ ನಗರ ವಾರ್ಡ್​ನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ, ಕಂಠೀರವ ಸ್ಟುಡಿಯೋ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ. ಮುನಿರತ್ನ ಮೇಲೂ ಮೊಟ್ಟೆ ಎಸೆಯಲಾಗಿದೆ. ತಮ್ಮ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮುಂದಾಗಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ.

ಸ್ಥಳಕ್ಕೆ ನಂದಿನಿ ಲೇಔಟ್ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಂತರ ರಸ್ತೆಯಲ್ಲೇ ಕುಳಿತು ಶಾಸಕ ಮುನಿರತ್ನ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.

ಮೂವರು ಪೊಲೀಸ್ ವಶಕ್ಕೆ

ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ನಂದಿನಿ ಲೇಔಟ್​ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಏತನ್ಮಧ್ಯೆ, ಮುನಿರತ್ನ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ಕಾರನ್ನು ಜಖಂಗೊಳಿಸಿರುವ ಆರೋಪ ಕೇಳಿಬಂದಿದೆ. ಸ್ಥಳದಿಂದ ಬಿಜೆಪಿ ಶಾಸಕ ಮುನಿರತ್ನ ತೆರಳಿದ ಬಳಿಕ ಕಾಂಗ್ರೆಸ್​ ಕಾರ್ಯಕರ್ತರು, ಮುನಿರತ್ನ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, 2-3 ಕಾರುಗಳು ಜಖಂಗೊಂಡಿವೆ. ಹಲವರು ಗಾಯಗೊಂಡಿದ್ದಾರೆ.

ಕೊಲೆ ಬೆದರಿಕೆ ಇದ್ದರೂ ಗನ್ ಮ್ಯಾನ್ ನೀಡಿಲ್ಲ: ಮುನಿರತ್ನ

ಘಟನೆ ಬಗ್ಗೆ ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ ಮುನಿರತ್ನ, ಕೊಲೆಗೆ ಯತ್ನ ನಡೆಯುತ್ತದೆ ಎಂದು ಪೊಲೀಸರು ನನಗೆ ಹೇಳಿದ್ದರು. ಅದಾದ ತಕ್ಷಣವೇ ಈ ಘಟನೆ ಸಂಭವಿಸಿದೆ. ಈ ಹಿಂದೆಯೂ, ‘ರಾಜೀನಾಮೆ ಕೊಡಿ, ರಾಜೀನಾಮೆ ಕೊಟ್ರೆ ಜೀವ ಉಳಿಯುತ್ತೆ’ ಎಂದು ಬೆದರಿಕೆ ಹಾಕಿದ್ದರು. ಬೆದರಿಕೆ ಬಗ್ಗೆ ಪೊಲೀಸರು, ರಾಜ್ಯಪಾಲರು, ಪ್ರಧಾನಿ ಕಚೇರಿಗೆ ಪತ್ರದ ಮೂಲಕ ದೂರು ನೀಡಿದ್ದೇನೆ ಎಂದು ತಿಳಿಸಿದರು.

ನನ್ನ ಮೇಲೆ ಹಲ್ಲೆಗೆ ಡಿಕೆಶಿ, ಸುರೇಶ್ ರೇಟ್ ಫಿಕ್ಸ್ ಮಾಡಿದ್ದಾರೆ: ಮುನಿರತ್ನ

ಕೊಲೆ ಬೆದರಿಕೆ ಹಿನ್ನೆಲೆ ಗನ್​ಮ್ಯಾನ್​ ಕೇಳಿದ್ದೆ, ಆದರೂ ಕೊಡಲಿಲ್ಲ. ಈ ಘಟನೆಗೆ ಡಿಸಿಎಂ ಡಿಕೆ ಶಿವಕುಮಾರ್​, ಡಿಕೆ ಸುರೇಶ್​, ಹನುಮಂತರಾಯಪ್ಪ, ಕುಸುಮಾ ಅವರೇ ಕಾರಣ ಎಂದು ಮುನಿರತ್ನ ಆರೋಪಿಸಿದ್ದಾರೆ. ನನ್ನ ಶರ್ಟ್​ ಹರಿದು ಹಾಕಿದರೆ 20 ಲಕ್ಷ ರೂ., ಮಸಿ ಬಳಿದರೆ 10 ಲಕ್ಷ ರೂ. ಹೀಗೆ ಒಂದೊಂದು ರೀತಿ ರೇಟ್​ ಫಿಕ್ಸ್ ಮಾಡಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ.

ಆರೋಪಕ್ಕೆ ಡಿಕೆ ಸುರೇಶ್ ತಿರುಗೇಟು

ಮೊಟ್ಟೆ ಎಸೆತ ಪ್ರಕರಣ ಸಂಬಂಧ ಬೆಳಗಾವಿಯಲ್ಲಿ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ನನ್ನ ಮೇಲೆ ಸುಳ್ಳು ಆರೋಪ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಮುನಿರತ್ನ ನಾಯ್ಡು ವ್ಯಕ್ತಿತ್ವ ಏನು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಮುನಿರತ್ನ ತಾವೇ ಗೂಂಡಾಗಳನ್ನು ಬಿಟ್ಟು ಹೀಗೆ ಮಾಡಿಸಿಕೊಂಡಿದ್ದಾರೆ. ಕಾಂಗ್ರೆಸ್​ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಬೇರೆಯವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮುನಿರತ್ನ ಕಾಂಗ್ರೆಸ್​ ಕಾರ್ಯಕರ್ತರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ನನ್ನ ಮೇಲೆ ಸುಳ್ಳು ಆರೋಪ‌ ಮಾಡುತ್ತಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದರು.

ನ್ಯಾಯ ಕೇಳಲು ಹೋದವರ ಮೇಲೆ ಹಲ್ಲೆ: ಕಾಂಗ್ರೆಸ್ ಕಾರ್ಯಕರ್ತರ ಆರೋಪ

ಮುನಿರತ್ನ ಬೆಂಬಲಿಗರಿಂದ ಕಾಂಗ್ರೆಸ್ ಕಾರ್ಯಕರ್ತರ ಕಾರು ಜಖಂ ಆರೋಪ ಸಂಬಂಧ ಬಿಜೆಪಿ ಶಾಸಕರ ವಿರುದ್ಧ ದೂರು ನೀಡಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದಾರೆ. ಸದ್ಯ, ನಂದಿನಿ ಲೇಔಟ್​ನಲ್ಲಿ ಜಮಾಯಿಸಿರುವ ಕಾಂಗ್ರೆಸ್​ ಕಾರ್ಯಕರ್ತರು ಮುನಿರತ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಿಟಿ ರವಿ ಬಂಧನ: ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿದ್ದಕ್ಕೆ ಖಾನಾಪುರ ಸಿಪಿಐ ಅಮಾನತು, ಬಂದ್​ಗೆ ಕರೆ

ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಹಲವು ಆರೋಪಗಳು ಇವೆ. ಅವರು ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದಿತ್ತು. ನ್ಯಾಯ ಕೇಳಲು ಹೋದರೆ ದೌರ್ಜನ್ಯ ಮಾಡಿದ್ದಾರೆ. ಮುನಿರತ್ನ ಬೆಂಬಲಿಗರು ನಮ್ಮ ವಾಹನಗಳಿಗೆ ಹಾನಿ ಮಾಡಿದ್ದಾರೆ. ಮುನಿರತ್ನ ಹಾಗೂ ಬೆಂಬಲಿಗರ ವಿರುದ್ಧ ದೂರು ಕೊಡುತ್ತೇವೆ ಎಂದು ಘಟನಾ ಸ್ಥಳದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:04 pm, Wed, 25 December 24