Covid Vaccine: ಕರ್ನಾಟಕದಲ್ಲಿರುವ 31 ಲಕ್ಷ ಮಕ್ಕಳಿಗೆ ಕೊವಿಡ್ ಲಸಿಕೆ ಪಡೆಯಲು ಅರ್ಹತೆ
ಕರ್ನಾಟಕದಲ್ಲಿ 15ರಿಂದ 18 ವರ್ಷ ವಯೋಮಿತಿಯ ಸುಮಾರು 31.75 ಲಕ್ಷ ಮಕ್ಕಳಿದ್ದು, ಕೊರೊನಾ ಲಸಿಕೆ ಪಡೆಯಲು ಇವರೆಲ್ಲರೂ ಅರ್ಹತೆ ಪಡೆದಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ 15ರಿಂದ 18 ವರ್ಷ ವಯೋಮಿತಿಯ ಸುಮಾರು 31.75 ಲಕ್ಷ ಮಕ್ಕಳಿದ್ದು, ಕೊರೊನಾ ಲಸಿಕೆ (Covid Vaccine) ಪಡೆಯಲು ಇವರೆಲ್ಲರೂ ಅರ್ಹತೆ ಪಡೆದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ಮೂಡಲಪಾಳ್ಯದ ಬಿಬಿಎಂಪಿ ಶಾಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಈ ವಯೋಮಿತಿಯ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಮೊದಲ ಡೋಸ್ ಲಸಿಕೆ ಪಡೆದ 28 ದಿನಗಳ ನಂತರ ಇವರಿಗೆ 2ನೇ ಡೋಸ್ ಲಸಿಕೆ ಪಡೆಯಲು ಅರ್ಹತೆ ಬರಲಿದೆ.
ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ ಶಾಸಕರು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿಗಳು ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದು, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಯೋಜನೆಯಿಂದ ಕೆಲಸ ಮಾಡಲು ಬೇಕಿರುವ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಿದ್ಧತೆ ಪೂರ್ಣಗೊಳಿಸಿದ್ದಾರೆ.
ಮಕ್ಕಳಿಗೆ ಲಸಿಕೆ ಕೊಡುವ ಅಭಿಯಾನಕ್ಕೆ ಚಾಲನೆ ಸಿಗುವ ಸೋಮವಾರದಂದು ಸುಮಾರು 6 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗುವುದು. ರಾಜ್ಯದಲ್ಲಿ ಪ್ರಸ್ತುತ 16 ಲಕ್ಷ ಕೊವ್ಯಾಕ್ಸಿನ್ ಡೋಸ್ಗಳಿವೆ. ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಲಸಿಕಾ ಅಭಿಯಾನಗಳು ನಡೆಯಲಿವೆ ಎಂದು ಸರ್ಕಾರ ತಿಳಿಸಿದೆ. ಈ ಸಂಸ್ಥೆಗಳು ಲಸಿಕಾ ಅಭಿಯಾನಕ್ಕೆ ಸಿಬ್ಬಂದಿ ಮತ್ತು ಮೂಲಸೌಕರ್ಯಗಳ ಬೆಂಬಲ ನೀಡಲಿವೆ.
ಶಾಲೆಗಳಲ್ಲಿ ಲಸಿಕೆ ತೆಗೆದುಕೊಳ್ಳಲು ಸಾಧ್ಯವಾಗದ ಮಕ್ಕಳು ಸಮೀಪದ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು. ಕೊಮಾರ್ಬಿಡಿಟಿ ಲಕ್ಷಣಗಳಿರುವ ಮಕ್ಕಳಿಗೆ ಆಸ್ಪತ್ರೆಗಳಲ್ಲಿ ವೈದ್ಯರ ನಿಗಾವಣೆಯಲ್ಲಿ ಲಸಿಕೆ ನೀಡಲಾಗುವುದು. ಆನ್ಲೈನ್ ಕ್ಲಾಸ್ ಮಾಡುತ್ತಿರುವ ಶಾಲೆಗಳು ಲಸಿಕಾ ಅಭಿಯಾನಕ್ಕಾಗಿ ದಿನ ನಿಗದಿ ಮಾಡಿಕೊಳ್ಳಬಹುದಾಗಿದೆ. ಔಪಚಾರಿಕ ಶಿಕ್ಷಣವನ್ನು ನಿಲ್ಲಿಸಿರುವ ಮಕ್ಕಳ ಸಮೀಪದ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1187 ಜನರಿಗೆ ಕೊರೊನಾ ದೃಢ; 6 ಮಂದಿ ಸಾವು ಇದನ್ನೂ ಓದಿ: Covid 3rd Wave: ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಭೀತಿ: ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ, ಲಾಕ್ಡೌನ್ ಸುಳಿವು ಕೊಟ್ಟ ಸಚಿವ ಅಶೋಕ್