ಜ್ಞಾನಭಾರತಿ ವಿಶ್ವವಿದ್ಯಾಲಯ ಆವರಣದಲ್ಲೂ ಜಾರಿಯಾಗಲಿದೆ ಕಬ್ಬನ್ ಪಾರ್ಕ್ ಮಾದರಿ ಸಂಚಾರ ನಿಯಮ

| Updated By: Ganapathi Sharma

Updated on: Sep 13, 2024 | 7:51 AM

ಬೆಂಗಳೂರಿನ ಜ್ಞಾನಭಾರತಿ ವಿಶ್ವವಿದ್ಯಾಲಯ ಆವರಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಓಡಾಟ ಹೆಚ್ಚಾಗುತ್ತಿದೆ. ನಿರಂತರ ವಾಹನಗಳ ಓಡಾಟ, ವೇಗವಾಗಿ ಸಂಚರಿಸುವ ವಾಹನಗಳಿಂದ ಬೆಂಗಳೂರು ವಿವಿ ಅಪಘಾತಗಳ ಹಬ್ ಆಗುತ್ತಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಪರದಾಡುವಂತಾಗಿದೆ. ಹೀಗಾಗಿ ವಿವಿ ಹೊಸ ಪ್ಲ್ಯಾನ್ ಮೊರೆ ಹೋಗಿದೆ. ಅದೇನೆಂಬ ವಿವರ ಇಲ್ಲಿದೆ.

ಜ್ಞಾನಭಾರತಿ ವಿಶ್ವವಿದ್ಯಾಲಯ ಆವರಣದಲ್ಲೂ ಜಾರಿಯಾಗಲಿದೆ ಕಬ್ಬನ್ ಪಾರ್ಕ್ ಮಾದರಿ ಸಂಚಾರ ನಿಯಮ
ಜ್ಞಾನಭಾರತಿ ವಿಶ್ವವಿದ್ಯಾಲಯ ಆವರಣ
Follow us on

ಬೆಂಗಳೂರು, ಸೆಪ್ಟೆಂಬರ್ 13: ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ವಾಹನಗಳ ಸಂಚಾರ ಏರಿಕೆಯಾಗುತ್ತಲೇ ಇದೆ. ಇದರಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೈಯಲ್ಲಿ ಜೀವ ಹಿಡಿದುಕೊಂಡೇ ಕ್ಯಾಂಪಸ್​ನಲ್ಲಿ ಓಡಾಡಬೇಕಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದರು. ಸಾರ್ವಜನಿಕ ವಾಹನ ಓಡಾಟಕ್ಕೆ ಬ್ರೇಕ್ ಹಾಕುವ ಬಗ್ಗೆ ಆಗ್ರಹವೂ ಕೇಳಿಬಂದಿತ್ತು. ಅಪಘಾತಗಳ ಸಂಖ್ಯೆ ಸಹ ಹೆಚ್ಚಾದ ಕಾರಣ ಸರ್ಕಾರಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದು ಮನವಿ ಕೂಡಾ ಮಾಡಿದ್ದರು. ಈ ಬಳಿಕ ಪೊಲೀಸ್ ಇಲಾಖೆ ಜ್ಞಾನಭಾರತಿ ಕ್ಯಾಂಪಸ್​​ನಲ್ಲಿ ವಾಹಗಳ ಓಡಾಟ ಕುರಿತು ಅಧ್ಯಯನ ಮಾಡಿ ಒಂದು ವರದಿ ಕೂಡಾ ನೀಡಿದ್ದು, ಈಗ ವಿವಿ ಇದರನ್ವಯ ಹೊಸ ನಿಯಮ ಜಾರಿಗೆ ಚಿಂತನೆ ನಡೆಸಿದೆ.

ಪೊಲೀಸ್ ಇಲಾಖೆಗೆ ವರದಿ ಸಲ್ಲಿಕೆ ಬೆನ್ನಲ್ಲೇ ಈಗ ಹೊಸ ನಿಯಮ ಜಾರಿಗೆ ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಅತಿ ಹೆಚ್ಚು ದಟ್ಟಣೆ ಪ್ರದೇಶವಾಗಿರುವ ಕಬ್ಬನ್ ಪಾರ್ಕ್​​ನಲ್ಲಿ ಜಾರಿ ಮಾಡಿರುವ ನಿಯಮವನ್ನು ಬೆಂಗಳೂರು ವಿವಿ ಆವರಣದಲ್ಲಿಯೂ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಹೇಗಿರಲಿದೆ ಸಂಚಾರ ನಿಯಮ?

ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆಗಳ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಿ, ವಿವಿ ಕಾರ್ಯಚರಣೆಯ ಅವಧಿಯಲ್ಲಿ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ.

ವಿವಿ ಕ್ಯಾಂಪಸ್​​ನಲ್ಲಿ ನಿತ್ಯ ಸಾವಿರಾರು ಬೃಹತ್ ವಾಹನಗಳ ಸಂಚಾರ ವಿದ್ಯಾರ್ಥಿಗಳ ಓಡಾಟಕ್ಕೆ ಸಂಕಷ್ಟ ತಂದಿದೆ. ಬೈಕ್, ಕಾರು ಆಟೋ, ಬಸ್ ಕ್ಯಾಂಪಸ್​ನಲ್ಲಿ ಸಂಚಾರ ಮಾಡುತ್ತಿದ್ದು, ಕ್ಯಾಂಪಸನಲ್ಲಿ ಓಡಾಡುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಯದಲ್ಲಿಯೇ ಓಡಾಡಬೇಕಿದೆ. ನಿತ್ಯ ಹಾಸ್ಟೆಲ್, ಕ್ಲಾಸ್ ಹಾಗೂ ಮುಖ್ಯ ಕ್ಯಾಂಪಸ್​ ರಸ್ತೆಯಲ್ಲಿ ಆಚೀಚೆ ದಾಡಲು ಪರದಾಡುವ ಸ್ಥಿತಿ ಎದುರಾಗಿದೆ. ಹೀಗಾಗಿ ಹೊಸ ನಿಯಮಕ್ಕೆ ಮುಂದಾಗಲಾಗಿದೆ.

ಕೆಲಸದ ಸಮಯದಲ್ಲಿ ನಿರ್ಬಂಧ ಹಾಕಿ ರಜಾ ದಿನಗಳ ಸಮಯದಲ್ಲಿ ಹಾಗೂ ವಿವಿಯ ಕೆಲಸದ ಸಮಯದ ಬಳಿಕ ಸಂಜೆ ಓಡಾಟಕ್ಕೆ ಅವಕಾಶದ ಬಗ್ಗೆ ಕೂಡಾ ಚಿತಂನೆ ನಡೆದಿದೆ. ಇನ್ನೊಂದು ವಾರದಲ್ಲಿ ಸರ್ಕಾರದ ಹಂತದಲ್ಲಿ ಚರ್ಚೆ ನಡೆದ ಬಳಿಕ ನಿಯಮ ಜಾರಿಯಾಗಲಿದೆ ಎಂದು ಕುಲಪತಿ ಜಯಕರ್ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಕಟ್ಟೆಚ್ಚರ: ವಿಮಾನ ನಿಲ್ದಾಣದಲ್ಲಿ ಶಂಕಿತರ ಟೆಸ್ಟಿಂಗ್, ಸ್ಕ್ರೀನಿಂಗ್, ಟ್ರ್ಯಾಕಿಂಗ್ ಶುರು

ಕಳೆದ ವರ್ಷವಷ್ಟೇ ವಿವಿ ಆವರಣದಲ್ಲಿ ವಿದ್ಯಾರ್ಥಿನಿ ಅಪಘಾತಕ್ಕೆ ಬಲಿಯಾಗಿದ್ದರು. ಆ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೆ ವಾಹನಗಳ ಸಂಚಾರ ಏರಿಕೆಯಾಗಿ ಸಮಸ್ಯೆ ತಂದೊಡಿತ್ತು. ಹೀಗಾಗಿ ಸರ್ಕಾರ ಹಾಗೂ ವಿವಿ ಪರ್ಯಾಯ ಕ್ರಮಕ್ಕೆ ಮುಂದಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ