AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಜೀವಕ್ಕೆ ಕುತ್ತು ತಂದ ಖಾಸಗಿ ಅಪಾರ್ಟ್ಮೆಂಟ್​ನ ಯಡವಟ್ಟು: ವಾಲಿದ ಹತ್ತಾರು ಮನೆಗಳು

ಸೇವಾನಗರದ ವಾರ್ಡ್ ನಂಬರ್ 103 ರಲ್ಲಿ ನಿರ್ಮಾಣ ಹಂತದ ಖಾಸಗಿ ಅಪಾರ್ಟ್ಮೆಂಟ್ ಮಾಡಿರುವ ಯಡವಟ್ಟಿನಿಂದ ಸ್ಥಳೀಯ ನಿವಾಸಿಗಳ ಮನೆಗಳು ಕುಸಿಯುವ ಭೀತಿ ಜೊತೆಗೆ ಪ್ರಾಣಕಳೆದುಕೊಳ್ಳುವ ಆತಂಕ ಎದುರಾಗಿದೆ.

ಬೆಂಗಳೂರಿನಲ್ಲಿ ಜೀವಕ್ಕೆ ಕುತ್ತು ತಂದ ಖಾಸಗಿ ಅಪಾರ್ಟ್ಮೆಂಟ್​ನ ಯಡವಟ್ಟು: ವಾಲಿದ ಹತ್ತಾರು ಮನೆಗಳು
ಅಪಾರ್ಟ್ಮೆಂಟ್​ನಿಂದ ಬಿರುಕು ಬಿಟ್ಟಿರುವ ಮನೆ ಗೋಡೆಗಳು
TV9 Web
| Updated By: ವಿವೇಕ ಬಿರಾದಾರ|

Updated on:Dec 16, 2022 | 11:10 PM

Share

ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಖಾಸಗಿ ಅಪಾರ್ಟ್ಮೆಂಟ್ (Apartment) ಮಾಡಿರುವ ಯಡವಟ್ಟಿನಿಂದ ಹತ್ತಾರು ಮನೆಗಳು ವಾಲಿದ್ದು, ಬಿಬಿಎಂಪಿ (BBMP) ನಿರ್ಲಕ್ಷ್ಯಕ್ಕೆ ಸ್ಥಳೀಯ ನಿವಾಸಿಗಳ ಮನೆಗಳು ಕುಸಿಯುವ ಭೀತಿ ಜೊತೆಗೆ ಪ್ರಾಣಕಳೆದುಕೊಳ್ಳುವ ಆತಂಕ ಎದುರಾಗಿದೆ.

ಶಿವಾಜಿನಗರ (Shivajinagar) ವ್ಯಾಪ್ತಿಯ ಪುಲಕೇಶಿನಗರದ ಮಾರುತಿ ಸೇವಾನಗರದ ವಾರ್ಡ್ ನಂಬರ್ 103 ರಲ್ಲಿ ಖಾಸಗಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲಾಗುತ್ತಿದೆ. ಈ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವ ಕಾರಣ ಈ ಎಲ್ಲ ಅವಾಂತರಕ್ಕೆ ಕಾರಣವಾಗಿದೆ.‌ ಅಪಾರ್ಟ್ಮೆಂಟ್ ನಿರ್ಮಾಣ ಮಾಡುವಾಗ ನೆಲದಿಂದ ಸುಮಾರು 30 ಅಡಿಯಷ್ಟು ಆಳ, ಮಣ್ಣು ತೆಗದಿರುವ ಕಾರಣ ಅಕ್ಕಪಕ್ಕದಲ್ಲಿದ್ದ ಮನೆಗಳು ಕುಸಿಯುತ್ತೀವೆ. ಹೀಗಾಗಿ ಅಕ್ಕಪಕ್ಕದ ಹತ್ತಕ್ಕೂ ಹೆಚ್ಚು ಮನೆಗಳಿಗೆ ಗಂಭೀರವಾಗಿ ಹಾನಿಯಾಗಿದ್ದು, ಕೆಲ ನಿವಾಸಿಗಳು ಭಯದಲ್ಲೇ ಮನೆ ತೊರೆದಿದ್ದಾರೆ.

ಇನ್ನು ಕೆಲವರು ಸ್ವಂತ ಮನೆಯನ್ನು ಬಿಟ್ಟು ಎಲ್ಲಿಗೆ ಹೋಗುವುದು ಅಂತ ಪ್ರತಿದಿನ ಜೀವಭಯದಲ್ಲಿ ದಿನ ದೂಡುತ್ತಿದ್ದಾರೆ. ಸಾಲದಕ್ಕೆ ಅಪಾರ್ಟ್ಮೆಂಟ್ ನಿರ್ಮಾಣದ ವೇಳೆ ಬರುವ ಶಬ್ದದಿಂದ ಮನೆಯಲ್ಲಿ ಇರುವುದಕ್ಕೆ ಆಗುತ್ತಿಲ್ಲ. ಕೆಲಸದ ವೇಳೆ ಬರುವ ಧೂಳಿನಿಂದ ಮಕ್ಕಳ ಆರೋಗ್ಯವು ಸರಿಯಿಲ್ಲ ಅಂತ ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

ಇನ್ನೂ ಈ ಸಂಬಂಧ ಈಗಾಗಲೇ ಬಿಬಿಎಂಪಿ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಘಟನೆ ತಿಳಿದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಪ್ರಾಣಭಯದಲ್ಲಿರುವ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಅಂತ ನೋಟಿಸ್ ಕೊಟ್ಟು ರಸ್ತೆಗೆ ಬ್ಯಾರಿಕೇಡ್ ಹಾಕಿ ಕೈತೊಳೆದುಕೊಂಡಿದ್ದಾರೆ. ಆದರೆ ಇಂದಿನವರೆಗೂ ನಿರ್ಮಾಣ ಹಂತದ ಅಪಾರ್ಟ್ಮೆಂಟ್ ಕೆಲಸವನ್ನು ಸ್ಥಗಿತ ಮಾಡಿಲ್ಲ. ಬದಲಾಗಿ ಮನೆಯಲ್ಲಿರುವ ಜನರನ್ನು ಮಾತ್ರ, ಮನೆ ಖಾಲಿ ಮಾಡಿ ಅಂತಿದ್ದಾರೆ. ಭೂಮಿಯ ಮಣ್ಣು ಸರಿ ಇಲ್ಲ ಅಂತ ಗೊತ್ತಿದ್ದರೂ ಒಂಬತ್ತು ಹಂತದ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿದ್ದಾರೆ. ಆದ್ರು ಬಿಬಿಎಂಪಿ ಅಧಿಕಾರಿಗಳು ಅಪಾರ್ಟ್ಮೆಂಟ್​​ನ ಮಾಲೀಕರ ವಿರುದ್ಧ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಬಿಬಿಎಂಪಿಯ ಎಲ್ಲ ಅಧಿಕಾರಿಳಿಗೆ ಕಂಪ್ಲೆಂಟ್ ಮಾಡಿದ್ರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ಇದನ್ನೂ ಓದಿ: 2023ರ ವಿಧಾನಸಭೆ ಚುನಾವಣೆ ತಯಾರಿ: ಹೈದರಾಬಾದ್​​ನಿಂದ ಬೆಂಗಳೂರಿಗೆ ಬಂದ ಮತಯಂತ್ರಗಳು

ಹೀಗಾಗಿ ಸುತ್ತಮುತ್ತಲಿನ 150 ಕ್ಕೂ ಹೆಚ್ಚು ಸ್ಥಳೀಯರು ಹಿರಿಯರು ಮತ್ತು ಮಕ್ಕಳಿಗೆ ಯಾವಾಗ ಏನಾಗಲಿದಿಯೋ ಅನ್ನೋ ಆತಂಕದಲ್ಲೇ ದಿನದೂಡುವ ಪರಿಸ್ಥಿತಿ ಎದುರಾಗಿದೆ.‌ ಇಂದು ಬಿರುಕು ಬಿಟ್ಟಿರುವ ಮನೆಗಳನ್ನು ಸರಿಪಡಿಸುವ ಕುರಿತು ನೋಟಿಸ್ ಕೊಟ್ಟು ಹೋಗಿದ್ದಾರೆ. ಆದರೆ ಆ ಅಪಾರ್ಟ್ಮೆಂಟ್ ನಿಂದ ಸಮಸ್ಯೆ ತಪ್ಪಿದ್ದಲ್ಲ ಅಂತ ಸ್ಥಳೀಯರು ಗೋಗರೆಯುತ್ತಿದ್ದಾರೆ.

ಈ ಕುರಿತಾಗಿ ವಲಯ ಆಯುಕ್ತ ರವೀಂದ್ರ ಅವರನ್ನು ಪ್ರಶ್ನಿಸಿದ್ದಕ್ಕೆ ಈ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಬಿಬಿಎಂಪಿಯ ಮುಖ್ಯ ಕಚೇರಿಯಿಂದಲೇ ಪ್ಲಾನ್ ಸ್ಯಾಂಕ್ಷನ್ ಆಗಿದೆ. ಆದರೆ ಕಟ್ಟಡ ಕಟ್ಟುವ ಬಿಲ್ಡರ್ ಅಕ್ಕಪಕ್ಕದ ಜಾಗದಲ್ಲಿ ಸೆಟ್ ಪ್ಯಾಕ್​ಗಳನ್ನು ನೋಡಿಕೊಳ್ಳಬೇಕಿತ್ತು. ಆದರೆ ಅವರು 30 ಅಡಿ ಮಣ್ಣು ಅಗೆದಿರುವುದು ಈ ಸಮಸ್ಯೆಯಾಗಿದೆ. ನಮ್ಮ ಅಧಿಕಾರಿಗಳು ಈ ಕುರಿತಾಗಿ ತಿಳಿಸಿದ್ದಾರೆ. ಸಂಭಂದಪಟ್ಟ ಮಾಲೀಕರಿಗೂ ನೋಟಿಸ್ ಕೊಡಲಾಗಿದೆ. ಸದ್ಯ ಯಾವುದೇ ಸಮಸ್ಯೆಗಳು ಆಗದಂತೆ ಬಿರುಕು ಬಿಟ್ಟಿರುವ ಮನೆಗಳಿಂದ ಸ್ಥಳೀಯರು ಮನೆ ಖಾಲಿ ಮಾಡುವಂತೆ ತಿಳಿಸಿದ್ದೇವೆ. ಈಗ ಎರಡು ಮನೆಗಳು ಖಾಲಿ ಮಾಡಿದ್ದಾರೆ. ಸದ್ಯ 30 ಅಡಿಯ ಗುಂಡಿಯನ್ನು ಮುಚ್ಚುವುದರ ಜೊತೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೇವೆ. ಒಂದು ವೇಳೆ ನಾವು ಕೊಟ್ಟಂತಹ ಸೂಚನೆಗಳನ್ನು ತೆಗೆದುಕೊಳ್ಳದಿದ್ದರೇ ಸಂಭಂದಪಟ್ಟವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಇನ್ನು ಈ ಕುರಿತಾಗಿ ಅಪಾರ್ಟ್ಮೆಂಟ್ ಮಾಲೀಕ ಸಚಿನ್ ಶೆಟ್ಟಿ ಅವರನ್ನು ಪ್ರಶ್ನಿಸಿದ್ದಕ್ಕೆ, ಬಿಬಿಎಂಪಿ ಅಧಿಕಾರಿಗಳು ಪರೀಶಿಲನೆ ಮಾಡಿದ್ದಾರೆ. ಸದ್ಯ ರಿಟೈನಿಂಗ್ ಕೆಲಸವನ್ನು ಮುಗಿಸುವುದಕ್ಕೆ ಹೇಳಿದ್ದಾರೆ. ಈ ರಿಟೈನಿಂಗ್ ಕೆಲಸ ಮಾಡದಿದ್ದರೇ ಇಡೀ ಬಿಲ್ಡಿಂಗ್ ಬಿದ್ದು ಹೋಗಲಿದೆ. ಹಾಗಾಗಿ ಈ ಕೆಲಸವನ್ನು ಮುಗಿಸುತ್ತಿದ್ದೇವೆ. ಇದಕ್ಕೆ ಅಕ್ಕಪಕ್ಕದ ನಿವಾಸಿಗಳ ಪರ್ಮಿಷನ್ ಸಹ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಒಟ್ಟಿನಲ್ಲಿ ಅಪಾರ್ಟ್ಮೆಂಟ್ ಮಾಲೀಕರು ಮಾಡಿದ ಯಡವಟ್ಟಿನಿಂದ ನೂರಾರು ಕುಟುಂಬಗಳು ಬೀದಿಗೆ ಬೀಳುವುದಲ್ಲದೇ ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೆ ಖಂಡಿತವಾಗಿಯೂ ದೊಡ್ಡ ಅಪಾಯವಂತು ಕಟ್ಟಿಟ್ಟಬುತ್ತಿ.

ಪೂರ್ಣಿಮಾ ಟಿವಿ9 ಬೆಂಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:34 pm, Fri, 16 December 22