ನೀರಿನ ಮೌಲ್ಯ ತಿಳಿಸಲು ʼನೀರು ಉಳಿಸಿ ಬೆಂಗಳೂರು ಬೆಳೆಸಿ’ ಅಭಿಯಾನಕ್ಕೆ ಚಾಲನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್

| Updated By: ಆಯೇಷಾ ಬಾನು

Updated on: Mar 14, 2024 | 12:54 PM

ಬೆಂಗಳೂರಿನಲ್ಲಿ ಹನಿ ನೀರಿಗೂ ಹಾಹಾಕಾರ ಎದ್ದಿದೆ. ಹೀಗಾಗಿ ನೀರಿನ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ʼನೀರು ಉಳಿಸಿ ಬೆಂಗಳೂರು ಬೆಳೆಸಿ’ ಎಂಬ ಅಭಿಯಾನವನ್ನು ಸರ್ಕಾರ ಹಮ್ಮಿಕೊಂಡಿದ್ದು ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ನೀರನ್ನು ಹೇಗೆ ಉಳಿಸ ಬೇಕು, ಮುಂದಿ‌ ಪೀಳಿಗೆಗೆ ಹೇಗೆ ಉಪಯುಕ್ತವಾಗಿಸಬೇಕು ಎಂದು ಆಲೋಚನೆ ಮಾಡಬೇಕು ಎಂದು ತಿಳಿಸಿದ್ದಾರೆ.

ನೀರಿನ ಮೌಲ್ಯ ತಿಳಿಸಲು ʼನೀರು ಉಳಿಸಿ ಬೆಂಗಳೂರು ಬೆಳೆಸಿ’ ಅಭಿಯಾನಕ್ಕೆ ಚಾಲನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us on

ಬೆಂಗಳೂರು, ಮಾರ್ಚ್​.14: ಬೆಂಗಳೂರಿನಲ್ಲಿ ಯಾವ ಏರಿಯಾಗೆ ಹೋದರೂ, ಯಾವ ವಾರ್ಡ್​ಗೆ ಹೋದರೂ ನೀರಿನ ಸಮಸ್ಯೆ ಎದ್ದು ಕಾಣುತ್ತಿದೆ (Drinking Water Crisis). ಹಲವೆಡೆ ವಾರಕ್ಕೆ 2 ದಿನ ಮಾತ್ರ ಕಾವೇರಿ ನೀರು ಬರುತ್ತಿದೆ. ಬೋರ್​ವೆಲ್​ಗಳ ನೀರು ಕೂಡ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಬೆಂಗಳೂರು ನಿವಾಸಿಗರು ಕಂಗಾಲಾಗಿದ್ದಾರೆ. ಇಂತಹ ಬರ ಸಮಯದಲ್ಲಿ ಜನರು ನೀರಿನ ಮೌಲ್ಯ ಅರಿಯಲಿ, ನೀರನ್ನು ಸರಿಯಾದ ಪ್ರಮಾಣದಲ್ಲಿ ಬಳಸಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ‘ ʼನೀರು ಉಳಿಸಿ ಬೆಂಗಳೂರು ಬೆಳೆಸಿ’ ಅಭಿಯಾನಕ್ಕೆ ಚಾಲನೆ ನೀಡಿದೆ. ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ‘ನೀರು ಉಳಿಸಿ’ ಅಭಿಯಾನಕ್ಕೆ ಚಾಲನೆ ನೀಡಿದರು.

ಇನ್ನು ನಗರದ ಬರದ ಬಗ್ಗೆ ಮಾತನಾಡಿದ ಅವರು, 6,900 ಬೋರ್​ವೆಲ್​ ಬತ್ತಿ ಹೋಗಿದೆ. 9,000 ಬೋರ್​ವೆಲ್​ಗಳು ಚಾಲ್ತಿಯಲ್ಲಿವೆ. ಹೊಸ ಬೋರ್​ವೆಲ್​ ಕೊರೆಯಲು ಅನುಮತಿ ನೀಡುತ್ತಿದ್ದೇವೆ. ಇನ್ನೊಂದು ಹೊಸ ಬೋರ್​ವೆಲ್​ ಕೊರೆಯುವಾಗ BWSSB ಪರ್ಮಿಷನ್ ತೆಗೆದುಕೊಳ್ಳಬೇಕು. ಅವರಿಗೆ ಎಷ್ಟು ನೀರು ಬೇಕು ಅದನ್ನು ಬಳಸಿ ಉಳಿದ ನೀರನ್ನು ಸರ್ಕಾರಕ್ಕೆ ಕೊಡಬೇಕು. ಬಳಿಕ ಯಾವುದಕ್ಕೆ ಹಂಚಿಕೆ ಮಾಡಬೇಕು ಎಂಬುದನ್ನು ನಿಗಮ ಡಿಸೈಡ್ ಮಾಡುತ್ತೆ. ದೂರದ ಆಲೋಚನೆ ಇಟ್ಕೊಂಡು ಮೇಕೆ ದಾಟು ಹೋರಾಟ ಮಾಡಿದ್ದೆ. ನೀರನ್ನು ಹೇಗೆ ಉಳಿಸ ಬೇಕು, ಮುಂದಿ‌ ಪೀಳಿಗೆಗೆ ಹೇಗೆ ಉಪಯುಕ್ತವಾಗಿಸಬೇಕು ಎಂದು ಆಲೋಚನೆ ಮಾಡಿದ್ದೇವೆ. ಯುದ್ಧದ ರೀತಿಯಲ್ಲಿ ನಾವು ನೀರಿಗಾಗಿ ಯೋಜನೆ ರೂಪಿಸಬೇಕಿದೆ. ಟ್ಯಾಂಕರ್ ಮಾಫಿಯಾಕ್ಕೆ ನಿಯಂತ್ರಣ ಹೇರುವ ಕೆಲಸ ಆಗಿದೆ. 110 ಹಳ್ಳಿಗಳಿಗೂ ನೀರನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದರು.

ಡಿಕೆ ಶಿವಕುಮಾರ್ ಪೋಸ್ಟ್

ಇದನ್ನೂ ಓದಿ: ಬೆಂಗಳೂರಿನ ಕಲ್ಯಾಣ ಮಂಟಪಗಳಿಗೂ ತಟ್ಟಿದ ನೀರಿನ ಅಭಾವ: ಮದುವೆಗಳಿಗೆ ನೀರು ಹೊಂದಿಸಲು‌ ಮಾಲೀಕರ ಪರದಾಟ

ಇನ್ನು ಬಿಜೆಪಿ ಕೆಲ ಹಾಲಿ ಸಂಸದರಿಗೆ ಟಿಕೆಟ್​ ಕೈತಪ್ಪಿದ ವಿಚಾರ ಮಾತನಾಡಿದ ಡಿಕೆ ಶಿವಕುಮಾರ್, 10 ಹಾಲಿ‌ ಸಂಸದರಿಗೆ ಟಿಕೆಟ್ ಮಿಸ್ ಆಗುತ್ತೆ ಅಂದಿದ್ದೆ. ಈಗ ಆರು ಸಂಸದರಿಗೆ ಬಿಜೆಪಿ ಟಿಕೆಟ್ ಮಿಸ್ ಆಗಿದೆ. ನನ್ನ ಹೇಳಿಕೆಗೆ ನಾನು ಬದ್ಧ ಆಗಿರುತ್ತೇನೆ ಎಂದರು. ಕಾದು ನೋಡಿ‌ ಏನಾಗುತ್ತೆ ಅಂತ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ಏನು ಹೇಳಲ್ಲ. ಕಾದು ನೋಡಿ ಎಂದರು.

ತಮಿಳುನಾಡಿಗೆ ನೀರು ಬಿಟ್ಟ ಬಗ್ಗೆ ಬಿಜೆಪಿ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಬಿಜೆಪಿಯವರಿಗೆ ನಮ್ಮ ಸರ್ಕಾರದ ಯಶಸ್ಸು ತಡೆಯಲು ಆಗ್ತಾ ಇಲ್ಲ. ತಮಿಳುನಾಡು ನೀರು ಕೇಳಿಲ್ಲ. ನಾವ್ಯಾಕೆ ನೀರು ಬಿಡೋಣ. ಬರಗಾಲ ಇದ್ರು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದೇವೆ. ನಮ್ಮ ಅಧಿಕಾರಿಗಳು ಇದಕ್ಕೆ ಸಹಕರಿಸುತ್ತಿದ್ದಾರೆ. ಇದನ್ನು ತಡೆಯಲು ಬಿಜೆಪಿಗೆ ಆಗುತ್ತಿಲ್ಲ. ಸುಮ್ಮನೆ ಟ್ವೀಟ್ ಮಾಡಿ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:50 pm, Thu, 14 March 24