ದೀಪಾವಳಿ: ಬೆಂಗಳೂರಿನಲ್ಲಿ ಪಟಾಕಿ ಖರೀದಿಗೆ ಮುಗಿಬಿದ್ದ ಜನ, ದರ ಎಷ್ಟಿದೆ? ಇಲ್ಲಿದೆ ವಿವರ

| Updated By: ಗಣಪತಿ ಶರ್ಮ

Updated on: Oct 28, 2024 | 7:32 AM

ಬೆಂಗಳೂರಿನಲ್ಲಿ ದೀಪಗಳ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.‌ ಇದರ ಬೆನ್ನಲ್ಲೇ ಪಟಾಕಿ ಖರೀದಿಸಲು ಬೆಂಗಳೂರಿಗರು ಕುಟುಂಬ ಸಮೇತ ಪಟಾಕಿ ಸ್ಟಾಲ್​ಗಳಿಗೆ ಭೇಟಿ ಕೊಡುತ್ತಿದ್ದಾರೆ. ಬೆಂಗಳೂರಿನ ಸ್ಟಾಲ್​ಗಳಲ್ಲಿ ಯಾವ್ಯಾವ ಪಟಾಕಿಗಳು ಲಭ್ಯವಿವೆ? ದರ ಎಷ್ಟಿದೆ ಎಂಬ ವಿವರ ಇಲ್ಲಿದೆ.

ದೀಪಾವಳಿ: ಬೆಂಗಳೂರಿನಲ್ಲಿ ಪಟಾಕಿ ಖರೀದಿಗೆ ಮುಗಿಬಿದ್ದ ಜನ, ದರ ಎಷ್ಟಿದೆ? ಇಲ್ಲಿದೆ ವಿವರ
ಬೆಂಗಳೂರಿನಲ್ಲಿ ಪಟಾಕಿ ಖರೀದಿಗೆ ಮುಗಿಬಿದ್ದ ಜನ
Follow us on

ಬೆಂಗಳೂರು, ಅಕ್ಟೋಬರ್ 28: ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ದೀಪಾವಳಿ ಕೂಡ ಒಂದು. ಈ ಹಬ್ಬವನ್ನು ಬೆಂಗಳೂರಿನಲ್ಲಿಯೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವರ್ಷ ಕೂಡ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದ್ದು, ಹಬ್ಬಕ್ಕೆ ಮೆರಗು ಕೊಡುವ ಪಟಾಕಿಗಳನ್ನು ಖರೀದಿಸಲು ಜನರು ಕುಟುಂಬ ಸಮೇತ ಪಾಟಾಕಿ ಅಂಗಡಿಗಳಿಗೆ ಧಾವಿಸುತ್ತಿದ್ದಾರೆ.‌

ಬೆಂಗಳೂರಿನ 456 ಮೈದಾನಗಳಲ್ಲಿ ಪಟಾಕಿ ಸ್ಟಾಲ್

ದೀಪಾವಳಿ ಹಬ್ಬದ ಸಲುವಾಗಿ ಬೆಂಗಳೂರಿನ 456 ಮೈದಾನಗಳಲ್ಲಿ ಪಟಾಕಿ ಸ್ಟಾಲ್ ತೆರೆಯಲು ವ್ಯಾಪರಸ್ಥರಿಗೆ ಬಿಬಿಎಂಪಿ ಅನುವು ಮಾಡಿಕೊಟ್ಟಿದೆ. ಹೀಗಾಗಿ ನಗರದ ಏಳು ವಲಯಗಳ ಎಲ್ಲಾ ಗ್ರೌಂಡ್​ಗಳಲ್ಲಿಯೂ ಪಟಾಕಿ ಸ್ಟಾಲ್​ಗಳನ್ನು ತೆರೆಯಲಾಗುತ್ತಿದ್ದು, ಮತ್ತೊಂದೆ ಪಟಾಕಿ ಗೋದಾಮುಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ. ಕಳೆದ ವರ್ಷ ಪಟಾಕಿಯಿಂದಾಗಿ ಅಗ್ನಿ ದುರಂತ ಸಂಭವಿಸಿತ್ತು. ಈ ಬಾರಿ ಘಟನೆ ಮರುಕಳಿಸದಂತೆ ಕಠಿಣ ನಿಯಮಗಳನ್ನು ರೂಪಿಸಲಾಗಿದೆ.

ಅವಘಡ ತಡೆಗೆ ಕಠಿಣ ನಿಯಮ

ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸೂಚಿಸಲಾಗಿದೆ. ನಿಯಮಗಳಿಗೆ ಅನುಗುಣವಾಗಿ ಪಟಾಕಿ ಸ್ಟಾಲ್ ತೆರೆಯಲಾಗಿದ್ದು, ಹಸಿರು ಪಟಾಕಿಗಳ ಮಾರಾಟಕ್ಕಷ್ಟೇ ಅನುಮತಿ ನೀಡಲಾಗಿದೆ.

ಬೆಲೆ ತುಸು ದುಬಾರಿ

ಕಳೆದ ವರ್ಷಕ್ಕೆ ಹೋಲಿಕೆ ಈ ವರ್ಷ ಪಟಾಕಿ ಬೆಲೆ ಕೊಂಚ ಜಾಸ್ತಿಯಾಗಿದೆ. ಇನ್ನು ಈ ವರ್ಷ ಕೂಡ ಹೆಚ್ಚು ಹಸಿರು ಪಟಾಕಿಗಳಿಗಷ್ಟೇ ವ್ಯಾಪಾರಸ್ಥರು ಒತ್ತು ನೀಡಿದ್ದಾರೆ.

ಯಾವ ಪಟಾಕಿಗೆ ಎಷ್ಟು ದರ?

  • ಸುಸುರಬತ್ತಿ – 100 ರೂ.
  • ಸ್ಟಾಂಡರ್ಡ್ – 1200 ರೂ.
  • ಫ್ಲವರ್ ಪಾಟ್ -660 ರೂ.
  • ನೆಲಚಕ್ರ – 350 ರೂ.
  • ಲಕ್ಷ್ಮಿ ಪಟಾಕಿ – 1500- 2000 ರೂ.
  • ಬಿಜಿಲಿ ಪಟಾಕಿ – 250 – 350 ರೂ.

ದರ ಹೆಚ್ಚಾದರೂ ಕಡಿಮೆಯಾಗಿಲ್ಲ ಖರೀದಿ!

ಪಟಾಕಿಗಳ ಬೆಲೆ ಜಾಸ್ತಿಯಾದರೂ ಕೂಡ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಕಳೆದ ಮೂರು ವರ್ಷಗಳಿಂದ ಹಸಿರು ಪಟಾಕಿಗಳಿಗಷ್ಟೇ ಒತ್ತು ನೀಡಲಾಗುತ್ತಿದ್ದು, ಜನ ಕೂಡ ಹಸಿರುಪಟಾಕಿ ಇರುವ ಚಿಹ್ನೆಗಳನ್ನು ನೋಡಿಯೇ ಖರೀದಿಸುತ್ತಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ನಾಗಸಂದ್ರ ಮಾದಾವರ ಮಾರ್ಗ ಕಾರ್ಯಾಚರಣೆ ಮತ್ತೆ ವಿಳಂಬ: ಪ್ರಯಾಣಿಕರಿಂದ ಆಕ್ರೋಶ

ಒಟ್ಟಿನಲ್ಲಿ ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಲ್ಲಿ ಭರದ ಸಿದ್ಧತೆ ಶುರುವಾಗಿದೆ. ಪಟಾಕಿ ಬೆಲೆ ದುಬಾರಿಯಾದರೂ, ಅದನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ