ಗೋಲ್ ಗಪ್ಪಾ ತಿನ್ನುವರರಿಗೆ ಕಾದಿದೆ ಶಾಕ್: ಪರೀಕ್ಷೆಗೆ ಒಳಪಡಿಸುತ್ತಿರುವ ಆಹಾರ ಇಲಾಖೆ, ನಿರ್ಬಂಧ ಸಾಧ್ಯತೆ
ಕರ್ನಾಟಕದ ಆಹಾರ ಇಲಾಖೆ ಗೋಲ್ ಗಪ್ಪಾದ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಯೂರಿಯಾ ಮತ್ತು ಹಾರ್ಪಿಕ್ ಬಳಕೆಯ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗೋಲ್ ಗಪ್ಪಾ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪರಿಣಾಮವಾಗಿ, ಗೋಲ್ ಗಪ್ಪಾ ಪ್ರಿಯರಿಗೆ ಶಾಕ್ ಎದುರಾಗುವ ಸಾಧ್ಯತೆ ಇದೆ.
ಬೆಂಗಳೂರು, ಅಕ್ಟೋಬರ್ 28: ಕರ್ನಾಟಕದಲ್ಲಿ ಆಹಾರ ಗುಣಮಟ್ಟದ ವಿಚಾರದಲ್ಲಿ ಕಠಿಣ ನಿಲುವು ತಳೆದಿರುವ ಆಹಾರ ಇಲಾಖೆ, ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ, ರಾಸಾಯನಿಕ ಬಳಕೆಗೆ ಈಗಾಗಲೇ ನಿರ್ಬಂಧ ವಿಧಿಸಿದೆ. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ, ಮಾಲ್ಗಳಲ್ಲಿ ಫುಡ್ ಟೆಸ್ಟಿಂಗ್ ಕಿಟ್ ಇರಿಸಿ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದೆ. ಇದೀಗ ಜನಪ್ರಿಯ ತಿನಿಸು ಗೋಲ್ ಗಪ್ಪಾ ಮೇಲೆಯೂ ನಿರ್ಬಂಧದ ತೂಗುಗತ್ತಿ ಎದುರಾಗಿದೆ. ಇದರಿಂದ ಗೋಲ್ ಗಪ್ಪಾ ಪ್ರಿಯರಿಗೂ ಶಾಕ್ ಎದುರಾಗುವ ಸಾಧ್ಯತೆ ಇದೆ.
ಗೋಲ್ ಗಪ್ಪಾದ ಗುಣಮಟ್ಟದ ಮೇಲೆ ಅನೇಕ ದೂರುಗಳು ಕೇಳಿ ಬಂದ ಕಾರಣ ಗೋಲ್ ಗಪ್ಪಾ ಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಆಹಾರ ಇಲಾಖೆಯಿಂದ ಫುಡ್ ಟೆಸ್ಟಿಂಗ್ ಕಾರ್ಯಾಚರಣೆ ಮುಂದುವರಿದಿದ್ದು, ಗೋಲ್ ಗಪ್ಪಾವನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಕರ್ನಾಟಕದಾದ್ಯಂತ ಗೋಲ್ ಗಪ್ಪಾ ಮಾದರಿ ಸಂಗ್ರಹ
ಬೆಂಗಳೂರಿನಲ್ಲಿ ರ‍್ಯಾಂಡಮ್ ಆಗಿ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದಾದ್ಯಂತ 200 ಕ್ಕೂ ಹೆಚ್ಚು ಕಡೆ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಆರೋಗ್ಯದ ಮೇಲೆ ಗೋಲ್ ಗಪ್ಪಾ ಪರಿಣಾಮದ ಅಧ್ಯಯನ
ಗೋಲ್ ಗಪ್ಪಾಗೆ ಬಳಸುವ ಪೂರಿ ಹೇಗೆ ತಯಾರು ಮಾಡುತ್ತಾರೆ? ಅದಕ್ಕೆ ಏನೆಲ್ಲಾ ಪದಾರ್ಥ ಹಾಕಲಾಗುತ್ತದೆ? ಇದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಆಹಾರ ಇಲಾಖೆ ಮುಂದಾಗಿದೆ.
ಕಳೆದ ಎರಡು ದಿನಗಳಿಂದ ಗೋಲ ಗಪ್ಪಾ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ ನಡೆಸಿದೆ. ಸಂಗ್ರಹಿಸಿದ ಮಾದರಿಗಳನ್ನು ಇದೀಘ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಕೆಲವೇ ದಿನಗಳಲ್ಲಿ ಬರಲಿದೆ ವರದಿ ದೊರೆಯಲಿದೆ.
ಗೋಲ್ ಗಪ್ಪಾದಲ್ಲಿ ಯೂರಿಯಾ, ಹಾರ್ಪಿಕ್!
ಗೋಲ್ ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಗೊಬ್ಬರ ಹಾಗೂ ಹಾರ್ಪಿಕ್ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬೇರೆ ರಾಜ್ಯಗಳಲ್ಲಿ ಇತಂಹ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಕರ್ನಾಟಕ ಆಹಾರ ಹಾಗೂ ಗುಣಮಟ್ಟ ಇಲಾಖೆ ಎಚ್ಚೆತ್ತುಕೊಂಡಿದ್ದು, ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ಬೆಂಗಳೂರಿಗೆ ಬಂದಿದೆ ರ‍್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್: ಏನಿದರ ಮಹತ್ವ? ಇಲ್ಲಿದೆ ಮಾಹಿತಿ
ಆಹಾರದ ಗುಣಮಟ್ಟ ಹಾಗೂ ಸುರಕ್ಷತೆ ಖಾತರಿಪಡಿಸಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ “ರ‍್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್”ಗಳನ್ನು ಸ್ಥಾಪಿಸಿದ ಬೆನ್ನಲ್ಲೇ ಆಹಾರ ಇಲಾಖೆ ಗೋಲ್ ಗಪ್ಪಾ ವಿರುದ್ಧವೂ ಕಾರ್ಯಾಚರಣೆ ಆರಂಭಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ