ಬೆಂಗಳೂರಿನಲ್ಲಿ ಡೀಪ್ಫೇಕ್ ವಂಚನೆ ಹೆಚ್ಚಳ: ಇದನ್ನು ಹೇಗೆ ಮಾಡ್ತಾರೆ ಗೊತ್ತಾ?
ಕಳೆದ ತಿಂಗಳಲ್ಲಿ ನಗರದಲ್ಲಿ ಡೀಪ್ ಫೇಕ್ ತಂತ್ರಜ್ಞಾನವನ್ನು ಬಳಸಿ ನಡೆಯುತ್ತಿರುವ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ವಂಚಕರು APK ಲಿಂಕ್‌ಗಳನ್ನು ಕಳುಹಿಸಿ ವೈಯಕ್ತಿಕ ಮಾಹಿತಿಯನ್ನು ಪಡೆದು, AI ಬಳಸಿ ಅಶ್ಲೀಲ ವಿಡಿಯೋಗಳನ್ನು ರಚಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಪೊಲೀಸರು ಜನರಿಗೆ ಜಾಗೃತಿ ಮೂಡಿಸಲು ಡೆಮೋ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಜಾಗರೂಕರಾಗಿರುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರು, ಜನವರಿ 08: ಕಳೆದ ಒಂದು ತಿಂಗಳಿಂದ ನಗರದಲ್ಲಿ ಡೀಪ್ಫೇಕ್ ಸೈಬರ್ ವಂಚನೆ ಕೇಸ್ಗಳು (Cyber Crime) ಹೆಚ್ಚಾಗುತ್ತಿವೆ. ದೂರು ಕೊಡಲು ಹಿಂದೇಟು ಹಾಕುತ್ತಿದ್ದರೂ 1930 ನಂಬರ್ಗೆ ನಿರಂತರ ಕರೆಗಳು ಬರುತ್ತಿವೆ. ಎಐ ತಂತ್ರಜ್ಞಾನ ಬಳಸಿ ಅಶ್ಲೀಲವಾಗಿ ಫೋಟೋ, ವಿಡಿಯೋ ಮೂಲಕ ಕಿಡಗೇಡಿಗಳು ವಂಚನೆಗೆ ಪ್ಲಾನ್ ಮಾಡುತ್ತಿದ್ದಾರೆ. ಹಾಗಾಗಿ ಈ ವಂಚನೆಗಳಿಂದ ಎಚ್ಚರವಿರುವಂತೆ ನಗರ ಪೊಲೀಸರು ವಿಡಿಯೋ ಮಾಡುವ ಮೂಲಕ ಅಲರ್ಟ್ ಇರುವಂತೆ ಮನವಿ ಮಾಡಿದ್ದಾರೆ.
ಏನಿದು ಡೀಪ್ಫೇಕ್? ಹೇಗೆ ವಂಚನೆ ಮಾಡುತ್ತಾರೆ?
ಡೀಪ್ಫೇಕ್ ತಂತ್ರಜ್ಞಾನದ ಮೂಲಕ ಸಾಕಷ್ಟು ಜನರು ವಂಚನೆಗೆ ಒಳಗಾಗಿರುವುದು ವರದಿಯಾಗಿದೆ. ಮೊದಲಿಗೆ ನಿಮ್ಮ ಮೊಬೈಲ್ಗಳಿಗೆ ಎಪಿಕೆ (APK) ಅನ್ನೋ ಒಂದು ಸಾಫ್ಟ್ವೇರ್ ಮಾದರಿ ಲಿಂಕ್ ಬರುತ್ತೆ. ಅದನ್ನು ನೀವು ಒತ್ತಿದ ಕೂಡಲೇ ನಿಮ್ಮ ವ್ಯಯಕ್ತಿಕ ಡೇಟಾ ಸೈಬರ್ ಖದೀಮರ ಪಾಲಾಗುತ್ತೆ. ವಾಟ್ಸಪ್ ಚಾಟ್, ಕಾಂಟ್ಯಾಕ್ಟ್ ನಂಬರ್, ಫೋಟೋಗಳು ಅವರಿಗೆ ಸಿಗುತ್ತೆ.
ಇದನ್ನೂ ಓದಿ: ಸೈಬರ್ ವಂಚನೆಗೆ ಹೊಸ ದಾರಿ: ಮನೆಗೆ ಬರುತ್ತೆ ಕೂಪನ್, ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆಯಲ್ಲಿನ ಹಣ ಮಾಯ
ಆಗ ನಿಮ್ಮ ಫೋಟೋಗಳನ್ನು ತಗೊಂಡು ಎಐ ಮೂಲಕ ಅರೆನಗ್ನ, ನಗ್ನ ಫೋಟೋಗಳಾಗಿ ಮಾಡುತ್ತಾರೆ. ಹೆಣ್ಣು ಮಕ್ಕಳ ಫೋಟೋಗಳನ್ನು ಮತ್ತೊಬ್ಬ ಪುರುಷನ ಅಥವಾ ನಿಮ್ಮ ಸ್ನೇಹಿತರ ಜೊತೆ ಇರುವ ಹಾಗೆ ಮಾಡುತ್ತಾರೆ. ಬಳಿಕ ಎಐ ಫೋಟೋ ಹಾಗೂ ವಿಡಿಯೋಗಳನ್ನು ನಿಮ್ಮ ತಂದೆ, ತಾಯಿ, ಅಣ್ಣ, ತಂಗಿ ಹಾಗೂ ಕುಟುಂಬಸ್ಥರ ನಂಬರ್ಗೆ ಕಳಿಹಿಸುತ್ತೇವೆ ಅಂತ ಮೆಸೇಜ್, ಕಾಲ್ ಮಾಡುತ್ತಾರೆ. ಬಳಿಕ 10-20 ಸಾವಿರ ರೂ. ಹಣ ಕೊಡಿ ಅಂತ ಬೇಡಿಕೆ ಇಡುತ್ತಾರೆ.
ವಂಚಕರ ಈ ಬೆದರಿಕೆ ಹೆದರಿದ ಕೆಲವರು ಸಾಲ ಮಾಡಿಯಾದರೂ ಹಣ ಕೊಟ್ಟರೆ, ಇನ್ನು ಕೆಲವರು ಕಂಗಾಲಾಗಿದ್ದಾರೆ. ಇದು ಒಂದು ತಹರ ವಂಚನೆ ಆದರೆ ವಿಡಿಯೋ ಕಾಲ್ ಮೂಲಕ ಮತ್ತೊಂದು ರೀತಿಯ ವಂಚನೆ ಮಾಡಲಾಗುತ್ತಿದೆ. ನಿಮ್ಮ ಮಗಳೋ, ಮಗನ ರೀತಿಯಲ್ಲಿ ಎಐನಿಂದ ವಿಡಿಯೋ ಕಾಲ್ ಮಾಡುತ್ತಾರೆ.
ಇದನ್ನೂ ಓದಿ: Cyber Crime: ಡಿಜಿಟಲ್ ಅರೆಸ್ಟ್ ಮೂಲಕ ಬೆಂಗಳೂರಿನ ಟೆಕ್ಕಿಗೆ 11 ಕೋಟಿ ರೂ. ವಂಚನೆ
ನನ್ನ ಪರ್ಸ್, ಮೊಬೈಲ್ ಕಳುವಾಗಿದೆ ಅಂತ ವಿಡಿಯೋ ಕಾಲ್ ಮಾಡುತ್ತಾರೆ. ಆಗ ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಾರೆ. ಈಗ ಕಳೆದ ಒಂದು ತಿಂಗಳಲ್ಲಿ ನಗರದಲ್ಲಿ ಈ ರೀತಿಯ ವಂಚನೆ ಕೇಸ್ಗಳು ಹೆಚ್ಚಾಗಿವೆ. ಹೀಗಾಗಿ ಪೊಲೀಸರು ಹೇಗೆಲ್ಲಾ ಚೀಟ್ ಮಾಡ್ತಾರೆ ಅಂತ ಡೆಮೋ ವಿಡಿಯೋ ಮಾಡಿದ್ದಾರೆ. ಅದರಲ್ಲಿ ಡೀಪ್ಫೇಕ್ ಅಂದ್ರೆ ಏನು? ಹೇಗೆಲ್ಲಾ ಐಎ ಮೂಲಕ ಫೋಟೋ, ವಿಡಿಯೋ ಕಾಲ್ ಮಾಡುತ್ತಾರೆ. ವಂಚಕರ ಪ್ಲಾನ್ ಹೇಗಿರುತ್ತೆ ಅಂತ ನಗರ ಪೊಲೀಸರು ವಿಡಿಯೋ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ಅಲರ್ಟ್ ಇರುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.