ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ. 26ರಂದು ರೈತ ಸಂಘಟನೆಗಳಿಂದ ವಿಧಾನಸೌಧ ಚಲೋ
ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಯಿಂದ ಕೆಎಸ್ಆರ್ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೂ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಲಿದೆ. ಸುಮಾರು 1ಲಕ್ಷಕ್ಕೂ ಹೆಚ್ಚು ರೈತರು ಭಾಗಿ ಸಾಧ್ಯತೆಯಿದೆ.
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.26ರಂದು ರೈತ ಸಂಘಟನೆಗಳಿಂದ ವಿಧಾನಸೌಧ ಚಲೋ ಪ್ರತಿಭಟನೆ ಮಾಡಲಾಗುತ್ತಿದೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಳಗ್ಗೆ 11 ಗಂಟೆಯಿಂದ ಕೆಎಸ್ಆರ್ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೂ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಲಿದೆ. ಸುಮಾರು 1ಲಕ್ಷಕ್ಕೂ ಹೆಚ್ಚು ರೈತರು ಭಾಗಿ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇನ್ನು ಪ್ರತಿಭಟನಾ ರ‍್ಯಾಲಿ ಕುರಿತಾಗಿ ಸೆ.25ರಂದು ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಗಾಂಧಿಭವನದಲ್ಲಿ ಬೆಳಗ್ಗೆ 11 ಗಂಟೆಗೆ ದುಂಡು ಮೇಜಿನ ಸಭೆ ನಡೆಯಲಿದೆ.
ರೈತರ ಬೇಡಿಕೆಗಳೇನು?
- ಪ್ರಸಕ್ತ ಸಾಲಿನ ಕಬ್ಬಿನ ಎಪ್.ಆರ್.ಪಿ. ದರ ಕನಿಷ್ಠ 3,500ರೂ ನಿಗದಿಯಾಗಬೇಕು.
- ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರದಿಂದ, ವಿದ್ಯುತ್ ಖಾಸಗೀಕರಣ ಕಾಯ್ದೆ ಮಾಡುವುದನ್ನು ಕೈಬಿಡಬೇಕು.
- ರೈತರ ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಡಾ . ಎಂ.ಎಸ್ . ಸ್ವಾಮಿನಾಥನ್ ವರದಿಯಂತೆ ಖಾತರಿ ಬೆಲೆ ಶಾಸನ ಜಾರಿಯಾಗಬೇಕು.
- ಮೂರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಹೋರಾಟ ಮಾಡಿದ 750 ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ಕೂಡಲೇ ಪರಿಹಾರ ಕೊಡಬೇಕು.
- ಕೊರೊನಾ ಲಾಕ್‌ಡೌನ್ ಸಂಕಷ್ಟ, ಮಳೆಹಾನಿ, ಅತಿವೃಷ್ಟಿ, ಬೆಳೆ ನಷ್ಟ, ಮೂರುವರೆ ಲಕ್ಷ ರೈತರ ಆತ್ಮಹತ್ಯೆ ಪರಿಗಣಿಸಿ ದೇಶದ ರೈತರ ಸಾಲ ಮನ್ನಾ ಆಗಬೇಕು.
- ಕೃಷಿ ಉಪಕರಣಗಳು, ಕೃಷಿ ಉತ್ಪನ್ನಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ. ರದ್ದುಗೊಳಿಸಬೇಕು.
- ಫಸಲ್ ಭೀಮಾ ಬೆಳೆ ವಿಮೆ ಯೋಜನೆಯ ಮಾನದಂಡ ಬದಲಾಗಬೇಕು.
- ಅತಿವೃಷ್ಟಿ ಮಳೆ ಹಾನಿ ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಸಿಗುವಂತಾಗಬೇಕು.
- ಅತಿವೃಷ್ಟಿ ಸಮಸ್ಯೆಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಸಾಲ ವಸೂಲಾತಿ ನಿಲ್ಲಬೇಕು.
- ಇರುವ ಸಾಲದ ಮೇಲೆ ಶೇಕಡ 25 ರಷ್ಟು ಹೆಚ್ಚುವರಿ ಸಾಲ ನೀಡಬೇಕು.
- ರಾಜ್ಯದಲ್ಲಿ ಜಾರಿ ಮಾಡಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು.
- ಬ್ಯಾಂಕುಗಳು ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ನೋಡಿ ಸಾಲ ಕೊಡುತ್ತೇವೆ ಎನ್ನುವುದನ್ನು ಕೈಬಿಡಬೇಕು.
5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶ ಪಡಿಸಿದ ರೈತ:
ಚಿಕ್ಕಮಗಳೂರು: 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಮೇಲೆ ರೈತ ಟ್ರ್ಯಾಕ್ಟರ್ ಚಲಾಯಿಸಿರುವಂತಹ ಘಟನೆ ಜಿಲ್ಲೆ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ. ಮಳೆಯಿಂದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು, ಈರುಳ್ಳಿ ಸೈಜ್ ಬೆಳ್ಳುಳ್ಳಿಯಂತಿದೆ ಎಂದು ರೈತ ಮನನೊಂದು ಹೀಗೆ ಮಾಡಿದ್ದಾರೆನ್ನಲಾಗುತ್ತಿದೆ. ಸುಮಾರು 3-4 ಲಕ್ಷ ಖರ್ಚು ಮಾಡಿ ರೈತ ಮಂಜುನಾಥ್ ಈರುಳ್ಳಿ ಬೆಳೆದಿದ್ದ. ಈರುಳ್ಳಿ ಕಿತ್ತರೆ ಕೂಲಿಗೂ ಆಗೋದಿಲ್ಲ ಎಂದು ಟ್ರ್ಯಾಕ್ಟರ್ ಚಾಲನೆ ಮಾಡಲಾಗಿದೆ. ಹಣ ಬೇಡ ಕಿತ್ಕೊಂಡ್ ಹೋಗಿ ಅಂದ್ರು ಕೀಳೋರು ಯಾರೂ ಇಲ್ಲ. ಹಾಗಾಗಿ ಮನನೊಂದು ಈರುಳ್ಳಿ ಬೆಳೆ ಮೇಲೆ ಟ್ರ್ಯಾಕ್ಟರ್ ಚಾಲನೆ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:52 pm, Fri, 23 September 22