ಬೆಂಗಳೂರು, ಸೆಪ್ಟೆಂಬರ್ 13: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಸಂದೇಶ ಪೋಸ್ಟ್ ಮಾಡಿದ ಆರೋಪದಲ್ಲಿ ಬೆಂಗಳೂರಿನಲ್ಲಿ ಬಾಂಗ್ಲಾದೇಶ ಪ್ರಜೆ ಸಲಾಲುದ್ದೀನ್ ಸುಹೇಬ್ ಚೌಧರಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸಲಾಲುದ್ದೀನ್ ಸುಹೇಬ್, ಪಾಕಿಸ್ತಾನಿ ಐಎಸ್ ಏಜೆಂಟ್ ರೀತಿ ಬಿಂಬಿಸಿ ಪೋಸ್ಟ್ ಹಾಕಿದ್ದ. ಹೀಗಾಗಿ ಕೋಮು ಸೌಹಾರ್ದತೆಗೆ ಧಕ್ಕೆ, ಶಾಂತಿ ಕದಡುವ ಪ್ರಯತ್ನಿಸಿದ ಆರೋಪದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
‘‘ಸೋನಿಯಾಗಾಂಧಿ ಅಂತರ್ ಧರ್ಮ ವಿವಾಹವಾಗಿದ್ದಾರೆ. ಅವರು ಕ್ರಿಶ್ಚಿಯನ್ ಧರ್ಮವನ್ನೇ ಪಾಲನೆ ಮಾಡುತ್ತಿದ್ದಾರೆ. ಅಂತರ್ ಧರ್ಮದಲ್ಲಿ ಮದುವೆಯಾಗಿ ಭಾರತದ ಪೌರತ್ವ ಪಡೆದಿದ್ದಾರೆ’’ ಎಂದು ಸಲಾಲುದ್ದೀನ್ ಸುಹೇಬ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ.
ಇಷ್ಟೇ ಅಲ್ಲದೆ, ‘‘ರಾಹುಲ್ ಗಾಂಧಿ ವಿದೇಶಿ ಸ್ನೇಹಿತರ ಜೊತೆ ಸೇರಿಕೊಂಡು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾರೆ’’ ಎಂದು ಪೋಸ್ಟ್ ಮಾಡಿದ್ದ. ಇದನ್ನು ‘ದಿ ಜೈಪುರ್ ಡೈಲಾಗ್ಸ್’ ವೆಬ್ಸೈಟ್ ಮೂಲಕ ರಿಟ್ವೀಟ್ ಮಾಡಿಸಲಾಗಿತ್ತು.
ಈ ಮಧ್ಯೆ ಅದಿತಿ ಘೋಷ್ ಎಂಬುವವರು, ‘‘ರೀಪೋಸ್ಟ್ ಮಾಡಿ ಜನರಿಗೆ ತಲುಪಿಸಿ, ಕೋಮು ಸೌಹಾರ್ದ್ಯತೆಗೆ ಧಕ್ಕೆ ತರುತ್ತಿದ್ದಾರೆ’’ ಎಂದು ದೂರಿದ್ದರು. ಈ ಸಂಬಂಧ ವಕೀಲ ಶ್ರೀನಿವಾಸ್ ಎಂಬುವವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದಿನಾಂಕ 23.08.2024 ರಂದು ಬಾಂಗ್ಲಾದೇಶ ಮೂಲದವರಾದ ಸಲಾಲುದ್ದೀನ್ ಸುಹೇಬ್ ತಮ್ಮ ‘X’ ಅಕೌಂಟ್ ಹೆಸರಿನ @salaha_shoaib, ಟ್ವಿಟರ್ ಖಾತೆಯ ಲಿಂಕ್ ಮುಖಾಂತರ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬಗ್ಗೆ, ಟೀಟ್ ಮಾಡಿದ್ದಾನೆ. ಟ್ವೀಟ್ನಲ್ಲಿ ಸೋನಿಯಾ ಗಾಂಧಿ ಅಂತರ್ ಧರ್ಮ ಮದುವೆಯಾಗಿ ಭಾರತೀಯ ಪೌರತ್ನವನ್ನು ಹೊಂದಿದ್ದಾರೆ. ಅವರು ಕ್ರಿಶ್ಚನ್ ಧರ್ಮವನ್ನು ಪಾಲನೆ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನಿ ಐಎಸ್ಐ ಎಜೆಂಟ್ ರೀತಿ ಬಿಂಬಿಸಿ ಟ್ವಿಟ್ ಮಾಡಿರುತ್ತಾರೆ. ರಾಹುಲ್ ಗಾಂಧಿ ಅವರ ವಿದೇಶಿ ಸ್ನೇಹಿತರೊಂದಿಗೆ ಸೇರಿಕೊಂಡು ಒಬ್ಬ ಮಹಿಳೆಗೆ ಅತ್ಯಾಚಾರ ಮಾಡಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ ಎಂದು ಶ್ರೀನಿವಾಸ್ ಅವರು ನೀಡಿದ ದೂರಿನಲ್ಲಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಜ್ಞಾನಭಾರತಿ ವಿಶ್ವವಿದ್ಯಾಲಯ ಆವರಣದಲ್ಲೂ ಜಾರಿಯಾಗಲಿದೆ ಕಬ್ಬನ್ ಪಾರ್ಕ್ ಮಾದರಿ ಸಂಚಾರ ನಿಯಮ
ಹರಿಯಾಣ ಮತ್ತು ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ, ಪಕ್ಷವೊಂದರ ನಾಯಕರ ಗೌರವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮತ್ತು ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧರೆಯಾಗಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಕದಡುವ ರೀತಿಯಲ್ಲಿ ಟ್ವೀಟ್ ಮಾಡಿರುತ್ತಾರೆ. ಇದನ್ನು ಅದಿತಿ ಘೋಷ ರವರು ‘‘The Jaipur Dialogues” ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರಿಗೆ ತಲುವುವ ರೀತಿಯಲ್ಲಿ ಪ್ರಚಾರ ಮಾಡಿರುತ್ತಾರೆ. ಇದರಿಂದ ಅವರು ಸಹ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಗೌರವಕ್ಕೆ ಧಕ್ಕೆ ತರುವಂತೆ ಮಾಡಿದ್ದಲ್ಲದೆ, ಅಪಪ್ರಚಾರ ಮಾಡಲು ಕಾರಣಕರ್ತರಾಗಿರುತ್ತಾರೆ. ಇವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಶ್ರೀನಿವಾಸ್ ಮನವಿ ಮಾಡಿರುವುದನ್ನೂ ಎಫ್ಐಆರ್ ಉಲ್ಲೇಖಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ