ಬೆಂಗಳೂರು, ಜುಲೈ 27: ಬೆಂಗಳೂರಿನ ಬಿಬಿಎಂಪಿಯನ್ನು ಈಗ ಗ್ರೇಟರ್ ಬೆಂಗಳೂರು ಅಥಾರಿಟಿ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಪ್ರತಿಪಕ್ಷಗಳು ವಿರೋಧಿಸುತ್ತಿರುವುದರಿಂದ ಸರ್ಕಾರ ಇವತ್ತು ಸರ್ವ ಪಕ್ಷ ಸಭೆ ನಡೆಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಗ್ರೇಟರ್ ಬೆಂಗಳೂರು ವಿಧೇಯಕ ಮಂಡನೆಯಾದ ಬೆನ್ನಲ್ಲೇ, ಡಿಸಿಎಂ ಡಿಕೆ ಶಿವಕುಮಾರ್ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋ ಕೆಲಸ ಮಾಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ, ‘ನಾಗರೀಕರ ಧ್ವನಿ, ಅದೇ ಸರ್ಕಾರದ ಧ್ವನಿ’ ಎಂಬ ಪರಿಕಲ್ಪನೆಯಡಿ ಬೆಂಗಳೂರು ನಗರಾಭಿವೃದ್ಧಿ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಸರ್ವ ಪಕ್ಷ ಸಭೆ ಕರೆದಿದ್ದರು. ಇದರಲ್ಲಿ ಬೆಂಗಳೂರಿನ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರು ಭಾಗಿಯಾದರು. ವಿಪಕ್ಷ ನಾಯಕ ಆರ್ ಅಶೋಕ್, ಶಾಸಕ ಎಸ್ಟಿ ಸೋಮಶೇಖರ್ ಕೂಡ ಭಾಗಿಯಾದರು. ಸಭೆಯಲ್ಲಿ ಟ್ರಾಫಿಕ್, ಕುಡಿಯುವ ನೀರು, ಮೆಟ್ರೋ, ರಸ್ತೆ, ಎಲಿವೇಟೆಡ್ ಕಾರಿಡಾರ್ ಸೇರಿದಂತೆ ಹತ್ತು ಹಲವು ವಿಷಯಗಳ ಕುರಿತು ಚರ್ಚೆಯಾಗಿದೆ.
ಸಭೆಯಲ್ಲಿ, ಗ್ರೇಟರ್ ಬೆಂಗಳೂರು ವಿಚಾರವಾಗಿ ಅಶ್ವತ್ಥ್ ನಾರಾಯಣ ಗಾಬರಿಯಾಗುವುದು ಬೇಡ. ವಿಧೇಯಕದ ಸಂಪೂರ್ಣ ಮಾಹಿತಿ ನಿಮ್ಮ ಕೈಯಲ್ಲಿದೆ. ಪ್ರತಿ ಪದವನ್ನೂ ಪರಿಶೀಲಿಸಿ. ಬೆಂಗಳೂರಿನ ಭವಿಷ್ಯದ ಹಿತ ಕಾಯಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಗ್ರೇಟರ್ ಬೆಂಗಳೂರಿನಲ್ಲಿ ಕೈಗೊಂಡಿದ್ದೇವೆ. ನೀವು ಚರ್ಚೆ ಮಾಡಿ, ನಿಮ್ಮ ಸಲಹೆ ಸೂಚನೆ ಪರಿಗಣಿಸುತ್ತೇವೆ ಎಂದು ಡಿಸಿಎಂ ಕೋರಿದರು.
ಜೊತೆಗೆ ವಿರೋಧ ಪಕ್ಷದ ನಾಯಕರು ಇಲ್ಲೇ ಇದ್ದು, ನಿಮ್ಮ ಪಕ್ಷದಿಂದ ಸಮಿತಿಗೆ ಹೆಸರು ಶಿಫಾರಸ್ಸು ಮಾಡಿದರೆ ಇಂದೇ ಸಮಿತಿ ರಚಿಸಿ ಅದನ್ನು ಅಧಿಕೃತವಾಗಿ ಘೋಷಣೆ ಮಾಡಬಹುದು ಅಂತ ಹೇಳಿದರು.
ಇದನ್ನೂ ಓದಿ: ಇನ್ಮುಂದೆ ಎಲ್ಲೇ ಮೆಟ್ರೋ ಮಾಡಿದ್ರೂ ಡಬಲ್ ಡೆಕ್ಕರ್ ಮಾಡಲು ತಿರ್ಮಾನ: ಡಿಕೆ ಶಿವಕುಮಾರ್
ಇನ್ನು, ಯಶವಂತಪುರ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್, ಗ್ರೇಟರ್ ಬೆಂಗಳೂರು ಅಥಾರಿಟಿ ನಿರ್ಧಾರವನ್ನು ಸ್ವಾಗತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ