Devanuru Mahadeva: ನಾಡಿಗೆ ಕೇಡಿನ ಲಕ್ಷಣಗಳು: ಶಿಕ್ಷಣ ಸಚಿವರಿಗೆ ಮತ್ತೆ ಪತ್ರ ಬರೆದ ದೇವನೂರು ಮಹದೇವ
ಕೊನೆಯದಾಗಿ ತಮ್ಮಲ್ಲಿ ಒಂದು ವಿನಂತಿ- ಇದು ಮುಂದುವರಿಯಬಾರದು, ದಯವಿಟ್ಟು ಮುಂದುವರಿಯಬಾರದು ಎಂದು ದೇವನೂರು ಮಹದೇವ ಪತ್ರ ಮುಗಿಸಿದ್ದಾರೆ.
ಬೆಂಗಳೂರು: ಖ್ಯಾತ ಸಾಹಿತಿ ದೇವನೂರು ಮಹದೇವ (Devanuru Mahadeva) ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ. ‘ದೇವನೂರರಿಂದ ಯಾವುದೇ ಪತ್ರ ಬಂದಿಲ್ಲ’ ಎಂದಿದ್ದ ಸಚಿವರಿಗೆ, ‘ಈ ಹಿಂದೆ ಮೇ 26ರಂದು ನಾನು ಪತ್ರ ಬರೆದು ಕೊರಿಯರ್ ಮೂಲಕ ರವಾನಿಸಿದ್ದೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಕಡೆಗಣಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ‘ಇದು ಮುಂದುವರಿಯಬಾರದು, ದಯವಿಟ್ಟು ಮುಂದುವರಿಯಬಾರದು’ ಎಂದು ಆಗ್ರಹಿಸಿದ್ದಾರೆ. ಪತ್ರದ ಪ್ರತಿಯನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಹಾಗೂ ಆಯುಕ್ತರಾದ ಡಾ.ಆರ್.ವಿಶಾಲ್ ಅವರಿಗೂ ಕಳುಹಿಸಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ದೇವನೂರು ಮಹದೇವ ಬರೆದಿರುವ ಪತ್ರ ಹೀಗಿದೆ…
ಈ ಹಿಂದೆ ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿರುವ ನನ್ನ ಪಠ್ಯವನ್ನು ಕೈಬಿಡಬೇಕೆಂದು ತಮಗೆ ವಿನಂತಿಸಿ ದಿನಾಂಕ 26-05-2022ರಂದು ಪತ್ರ ಬರೆದು ಕೊರಿಯರ್ ಮುಖಾಂತರ ರವಾನಿಸಿದ್ದೆ. ಅದನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರವರಿಗೂ ಕಳಿಸಿದ್ದೆ. ಆ ಪತ್ರದಲ್ಲಿ ನಾನು ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ. ಹೀಗಿದ್ದೂ ನನ್ನ ಮನವಿಯನ್ನು ತಾವು ಪರಿಗಣಿಸದೆ, ಇತ್ತೀಚಿನ ತಮ್ಮ ಹೇಳಿಕೆಯಲ್ಲಿ ‘ಪರಿಷ್ಕೃತ ಮುದ್ರಣವೇ ಜಾರಿಗೆ ಬರುತ್ತದೆ’ ಎಂದಿದ್ದೀರಿ. ಕ್ಷಮಿಸಿ, ನಿಮ್ಮ ಈ ಧೋರಣೆ ದಬ್ಬಾಳಿ ಅನ್ನಿಸಿಬಿಟ್ಟಿತು.
ಮತ್ತೂ ಹೇಳಬೇಕಂದರೆ ಚತುರ್ವರ್ಣ ವಿರೋಧಿ ಬಸವಣ್ಣನ ಪಾಠವನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕತ್ತು ಹಿಚುಕಿರುವುದು, ಕುವೆಂಪು, ಅಂಬೇಡ್ಕರ್ ಅವರನ್ನು ಗೇಲಿ ಮಾಡುವ ಮನಸ್ಥಿತಿಯ ವ್ಯಕ್ತಿಯನ್ನೇ ಪಠ್ಯಪುಸ್ತಕ ಪರಿಷ್ಕರಣೆಗೆ ಅಧ್ಯಕ್ಷನನ್ನಾಗಿಸಿರುವುದು ಹಾಗೂ ಒಂದು ಒಕ್ಕೂಟ ಸರ್ಕಾರದಲ್ಲಿ ಆ ಒಕ್ಕೂಟದ ಅಂಗವಾಗಿರುವ ಕರ್ನಾಟಕ ರಾಜ್ಯವು ತನಗೂ ಒಂದು ಧ್ವಜವೂ ಬೇಕು ಎಂದು ದನಿ ಎತ್ತಿದ ಸಂದರ್ಭದಲ್ಲಿ ಆ ಪರಿಕಲ್ಪನೆಯನ್ನು ತನ್ನ ಲಂಗೋಟಿಗೆ ಹೋಲಿಕೆ ಮಾಡಿದ ಹೀನ ಅಭಿರುಚಿಯ ವ್ಯಕ್ತಿಯನ್ನು ಪಠ್ಯ ಪರಿಷ್ಕರಣೆ ಮಾಡಲು ಅಧ್ಯಕ್ಷನನ್ನಾಗಿಸಿರುವುದು ಮತ್ತು ಸಮರ್ಥಿಸುತ್ತಿರುವುದು, ಭಿನ್ನಾಭಿಪ್ರಾಯಗಳನ್ನು ಟೂಲ್ಕಿಟ್ ಎಂದು ರಾಜಕೀಯಗೊಳಿಸಿ ಪರಾರಿಯಾಗಲು ನೋಡುವುದು ಇವೆಲ್ಲ ಹಾಗೂ ನಾಡಿನ ಗಣ್ಯರು, ಮಠಾಧಿಪತಿಗಳು, ಲೇಖಕರು, ಪ್ರಜ್ಞಾವಂತರು ತಮ್ಮ ನೋವನ್ನು ವ್ಯಕ್ತಪಡಿಸಿ ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಿ ಎಂದು ಕೇಳಿಕೊಂಡರೂ ತಾವು ಅದನ್ನು ಕಾಲುಕಸ ಮಾಡಿ ಲೆಕ್ಕಸದಿರುವುದನ್ನು ನೋಡಿದಾಗ ಇದು ನಾಡಿಗೆ ಕೇಡಿನ ಲಕ್ಷಣಗಳು ಎಂದೆನಿಸುತ್ತದೆ.
ಕೊನೆಯದಾಗಿ ತಮ್ಮಲ್ಲಿ ಒಂದು ವಿನಂತಿ- ಇದು ಮುಂದುವರಿಯಬಾರದು, ದಯವಿಟ್ಟು ಮುಂದುವರಿಯಬಾರದು.
ಶಿಕ್ಷಣ ಸಚಿವರ ಮನೆಗೆ ಭದ್ರತೆ
ತಿಪಟೂರಿನಲ್ಲಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆಗೆ ಎನ್ಎಸ್ಯುಐ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿವಾಸಕ್ಕೆ ಭದ್ರತೆ ಮುಂದುವರಿಸಲಾಗಿದೆ. ಮನೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (DAR) ತುಕಡಿ ನಿಯೋಜಿಸಲಾಗಿದೆ. ತಿಪಟೂರು ನಗರದ ಕೆ.ಆರ್.ಬಡಾವಣೆಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಬಿ.ಹೆಚ್.ರಸ್ತೆಯಿಂದ ಬರುವ ವಾಹನಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 am, Fri, 3 June 22