ಮೊದಲ ಭೇಟಿಯಲ್ಲೇ ಪರಪ್ಪನ ಅಗ್ರಹಾರದಲ್ಲಿ ಎಲ್ಲರ ಬೆವರಿಳಿಸಿದ ನೂತನ ಡಿಜಿಪಿ ಅಲೋಕ್ ಕುಮಾರ್

ಕೈದಿಗಳಿಗೆ ರಾಜಾತಿಥ್ಯದಿಂದ ರಾಜ್ಯದಲ್ಲಿ ಸುದ್ದಿಯಲ್ಲಿರೋ ಪರಪ್ಪನ ಅಗ್ರಹಾರ ಜೈಲಿಗೆ ಬಂದಿಖಾನೆ ಡಿಜಿಪಿ ಅಲೋಕ್​​ ಕುಮಾರ್​​ ಭೇಟಿ ನೀಡಿದ್ದಾರೆ. ಜೈಲಿನ ಹೊರಾಂಗಣ ಸೇರಿ ಪ್ರತಿ ಬ್ಯಾರಕ್​​, ಅಡುಗೆ ಮನೆ, ಆಸ್ಪತ್ರೆ, ಬೇಕರಿಗಳಿಗೂ ವಿಸಿಟ್​​ ನೀಡಿ ಖಡಕ್​​ ಎಚ್ಚರಿಕೆ ನೀಡಿದ್ದಾರೆ. ಪಾರ್ಕಿಂಗ್​​ ವಿಚಾರವಾಗಿ ಅಧಿಕಾರಿಗಳನ್ನು ಈ ವೇಳೆ ಅವರು ತರಾಟೆಗೆ ಪಡೆದ ಪ್ರಸಂಗವೂ ನಡೆದಿದೆ.

ಮೊದಲ ಭೇಟಿಯಲ್ಲೇ ಪರಪ್ಪನ ಅಗ್ರಹಾರದಲ್ಲಿ ಎಲ್ಲರ ಬೆವರಿಳಿಸಿದ ನೂತನ ಡಿಜಿಪಿ ಅಲೋಕ್ ಕುಮಾರ್
ಪರಪ್ಪನ ಅಗ್ರಹಾರದಲ್ಲಿ ಅಲೋಕ್​​ ಕುಮಾರ್​​ ಪರಿಶೀಲನೆ.
Edited By:

Updated on: Dec 15, 2025 | 2:31 PM

ಆನೇಕಲ್​​, ಡಿಸೆಂಬರ್​​ 15: ಬಂದಿಖಾನೆ ಡಿಜಿಪಿಯಾಗಿ ನೇಮಕದ ಬಳಿಕ ಮೊದಲ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದಾರೆ. ಜೈಲಿನ ಚೆಕ್ ಪೋಸ್ಟ್ ಬಳಿ ಸಿಬ್ಬಂದಿಯಿಂದ ಮಾಹಿತಿ ಪಡೆದ ಡಿಜಿಪಿ, ಅಧಿಕಾರಿಗಳ ಜೊತೆ ಸೆಂಟ್ರಲ್ ಜೈಲಿನ ಸುತ್ತಮುತ್ತ ಓಡಾಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿ ಬ್ಯಾರಕ್​​ಗೂ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.

‘ಎಲ್ಲ ಬಂದ್​​ ಆಗ್ಬೇಕು’

ಜೈಲಿನ ಪ್ರತಿ ಬ್ಯಾರಕ್ ವಿಸಿಟ್ ಮಾಡಿರುವ ಅಲೋಕ್ ಕುಮಾರ್, ಕೈದಿಗಳ ಬಳಿಯು ಮಾಹಿತಿ ಕಲೆ ಹಾಕಿದ್ದಾರೆ. ಊಟ, ತಿಂಡಿ, ಶೌಚಾಲಯ ವ್ಯವಸ್ಥೆ ಬಗ್ಗೆ ಕೈದಿಗಳಿಗೆ ಡಿಜಿಪಿ ಪ್ರಶ್ನೆ ಕೇಳಿದ್ದು, ಮೊಬೈಲ್ ಬಳಕೆ ಮಾಡುತ್ತಿದ್ರೆ ಸಿಬ್ಬಂದಿ ವಶಕ್ಕೆ ನೀಡುವಂತೆ ತಾಕೀತು ಕೂಡ ಮಾಡಿದ್ದಾರೆ. ಕಳ್ಳಾಟ ಆಡಿದ್ರೆ ಕಠಿಣ ಕ್ರಮ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ. ಗಾಂಜಾ, ಬಿಡಿ ಸಿಗರೇಟ್ ಇನ್ಮೇಲೆ ಸಿಗಲ್ಲ. ಎಲ್ಲಾ ಬಂದ್ ಆಗಬೇಕು ಎಂದು ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಕಾರಾಗೃಹ ಇಲಾಖೆ ಡಿಜಿಪಿಯಾಗಿ ಅಲೋಕ್​​ ಕುಮಾರ್​​ ಅಧಿಕಾರ ಸ್ವೀಕಾರ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಿಂಚಿನ ಸಂಚಾರ ನಡೆಸಿರುವ ಡಿಜಿಪಿ ಅಡುಗೆ ಮನೆ, ಆಸ್ಪತ್ರೆಗೂ ವಿಸಿಟ್ ಮಾಡಿದ್ದಾರೆ. ವೈದ್ಯರು ಚಿಕಿತ್ಸೆ ಮಾತ್ರ ಕೋಡಬೇಕು. ಅದನ್ನು ಬಿಟ್ಟು ಮೊಬೈಲ್, ಗಾಂಜಾ ಸಾಗಾಣೆ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ನೇರವಾಗಿ ಹೇಳಿದ್ದಾರೆ. ಅಡುಗೆ ಮನೆಯ ಸಿಬ್ಬಂದಿಗೂ ಎಚ್ಚರಿಸಿರುವ ಅವರು, ಎಡಿಷನಲ್​​ ಆ್ಯಕ್ಟಿವಿಟಿಗಳು ಬಂದ್​​ ಆಗಬೇಕು ಎಂದಿದ್ದಾರೆ. ಜೈಲಿನ ಬೇಕರಿಗೂ ಡಿಜಿಪಿ ಭೇಟಿ ನೀಡಿದ್ದು, ಯೀಸ್ಟ್ನಿಂದ ವೈನ್ ತಯಾರಿಸಿದ್ರೆ ವೈಲೆಂಟ್ ಆಗಬೇಕಾಗುತ್ತೆ ಎಂದು ಗರಂ ಆದ ಪ್ರಸಂಗ ಕೂಡ ನಡೆದಿದೆ.

ಪೊಲೀಸ್ ಸಿಬ್ಬಂದಿಗೆ ತರಾಟೆ

ಪಾರ್ಕಿಂಗ್​​ ಅವ್ಯವಸ್ಥೆ ಬಗ್ಗೆ ಪೊಲೀಸ್ ಸಿಬ್ಬಂದಿಯನ್ನ ಇದೇ ವೇಳೆ ಡಿಜಿಪಿ ಅಲೋಕ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ಜಾಗವಿದ್ರೂ ಯಾಕೆ ಸಮರ್ಪಕವಾಗಿ ಅದನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ? ಜಾಗ ಸ್ವಚ್ಛ ಮಾಡಿ ವಾಹನಗಳ ಪಾರ್ಕಿಂಗ್​ಗೆ ಸರಿಯಾಗಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ. ಸುಮಾರು 50ಕ್ಕೂ ಅಧಿಕ ಅಧಿಕಾರಿಗಳ ಜೊತೆ ಅವರು ಜೈಲ್ ರೌಂಡ್ಸ್ ನಡೆಸಿದ್ದು, ಐಜಿಪಿ ದಿವ್ಯಾ, ಡಿಸಿಪಿ ನಾರಾಯಣ, ಮುಖ್ಯ ಅಧೀಕ್ಷಕ ಅಂಶುಕುಮಾರ್, ಕಮಾಂಡರ್​ ವೀರೇಶ್ ಕುಮಾರ್​, ಸಹಾಯಕ ಕಮಾಂಡರ್​ ಮಾದೇಶ ಸೇರಿದಂತೆ ಇತರ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:27 pm, Mon, 15 December 25