
ಬೆಂಗಳೂರು, ಜುಲೈ 15: “ಕಷ್ಟಪಟ್ಟು ಗಳಿಸಿದ ಆಸ್ತಿಯ ಸಂಪೂರ್ಣ ಹಕ್ಕು ಅದರ ಮಾಲೀಕರಿಗೇ ಸೇರಬೇಕು. ಆಸ್ತಿ ಖರೀದಿ ಮತ್ತು ನಿರ್ವಹಣೆಯಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಮ್ಮ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬುಧವಾರ ವಿಕಾಸಸೌಧದಲ್ಲಿ ನಡೆದ ‘ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಕರಡು ವಿಧೇಯಕ 2026’ ಕುರಿತಾದ ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗಿನ ಮಹತ್ವದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ಈ ಮಹತ್ವದ ಸಂವಾದ ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಕೆ.ಜೆ. ಜಾರ್ಜ್, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಅಪಾರ್ಟ್‌ಮೆಂಟ್ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಜೀವ್ ಗೌಡ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
“ಜನರು ಕಷ್ಟಪಟ್ಟು ತಲೆಯ ಮೇಲೆ ಸೂರು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಮಾಲೀಕರು ಆಸ್ತಿಯನ್ನು ಯಾವುದೇ ಅಡೆತಡೆಯಿಲ್ಲದೆ ಅನುಭವಿಸಬೇಕು ಎನ್ನುವುದು ನಮ್ಮ ಆಶಯ. ಇದಕ್ಕಾಗಿ ರಾಜ್ಯದಲ್ಲಿ ಮನೆ ಬಾಗಿಲಿಗೆ ಇ-ಖಾತಾ ನೀಡುವ ಕ್ರಾಂತಿಕಾರಿ ವ್ಯವಸ್ಥೆ ತರಲಾಗಿದೆ. ಬೆಂಗಳೂರಿನ 40 ಲಕ್ಷ ಆಸ್ತಿಗಳ ಪೈಕಿ ಈಗಾಗಲೇ 26 ಲಕ್ಷ ಆಸ್ತಿಗಳಿಗೆ ಇ-ಖಾತಾ ಮಾಡಿಕೊಡಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಎಸ್‌ಟಿಪಿ (STP) ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ನಿವಾರಣೆಗೆ ಸುಧಾರಣೆ ತರಲಾಗಿದ್ದು, ಕೆಲವು ಡೆವಲಪರ್‌ಗಳು ಸೃಷ್ಟಿಸುವ ಗೊಂದಲಗಳನ್ನು ಬಗೆಹರಿಸಿ, ಮಾಲೀಕರಿಗೆ ದಾಖಲಾತಿಗಳ ಸರಾಗ ವರ್ಗಾವಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಸಿಎಂ ಭರವಸೆ ನೀಡಿದ್ದಾರೆ.
ಆಸ್ತಿ ಕೊಳ್ಳುವವರಿಗೆ ಅನುಕೂಲ ಕಲ್ಪಿಸಲು ಈ ನೂತನ ವಿಧೇಯಕವನ್ನು ತರಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕಾನೂನಿನ ಚೌಕಟ್ಟಿನಲ್ಲಿರುವ ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಆಗಸ್ಟ್ 6 ರವರೆಗೆ ನಗರಾಭಿವೃದ್ಧಿ ಸಚಿವರಿಗೆ ಬರೆದು ಕಳುಹಿಸಬಹುದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಆಡಳಿತ ವಿಕೇಂದ್ರೀಕರಣ ಹಾಗೂ ಈಸ್ ಆಫ್ ಬಿಸಿನೆಸ್‌ಗಾಗಿ ನಗರದಲ್ಲಿ ಐದು ಪ್ರತ್ಯೇಕ ಕಾರ್ಪೊರೇಷನ್‌ಗಳನ್ನು ರಚಿಸಲಾಗಿದೆ. ಬೆಂಗಳೂರಿನಲ್ಲಿ ಹೈ-ರೈಸ್ (ಎತ್ತರದ) ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದ್ದು, ರಸ್ತೆ ವಿಸ್ತರಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿ 132 ಕಿಲೋಮೀಟರ್ ಉದ್ದದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪೆರಿಫೆರಲ್ ವರ್ತುಲ ರಸ್ತೆ) ನಿರ್ಮಾಣವಾಗುತ್ತಿದ್ದು, ಭೂಸ್ವಾಧೀನಕ್ಕಾಗಿ ರೈತರಿಗೆ ದೇಶದಲ್ಲೇ ಗರಿಷ್ಠ ಪರಿಹಾರ ನೀಡಲಾಗುತ್ತಿದೆ. ಇದರೊಂದಿಗೆ ಹಳೆಯ ಕಟ್ಟಡಗಳ ಮರು ಅಭಿವೃದ್ಧಿ (Re-development) ವಿಚಾರದಲ್ಲಿರುವ ಸಮಸ್ಯೆಗಳ ನಿವಾರಣೆಗೆ ಹಾಗೂ ಬಡವರು ಮನೆ ಕಟ್ಟಿಕೊಳ್ಳಲು ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ ಕಾಂಗ್ರೆಸ್ ಮನೆಯಲ್ಲಿ ಗರಿಗೆದರಿಂದ ಸಂಪುಟ ವಿಸ್ತರಣೆ ಕಸರತ್ತು: ಆರ್. ಅಶೋಕ್ ಲೇವಡಿ
ದಾವೋಸ್ ಪ್ರವಾಸದ ವೇಳೆ ವಿಶ್ವದ ಪ್ರಮುಖ ಹೂಡಿಕೆದಾರರು ಬೆಂಗಳೂರಿನಲ್ಲಿ ಬಂಡವಾಳ ಹೂಡಲು ತೀವ್ರ ಆಸಕ್ತಿ ತೋರಿಸಿದ್ದಾರೆ. ಮುಂಬೈಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಆಸ್ತಿಗಳ ದರ ನಿಯಂತ್ರಣದಲ್ಲಿದೆ. ಹೀಗಾಗಿ ವಿಶ್ವದ ನಾಯಕರು ನಮ್ಮ ನಗರದತ್ತ ನೋಡುತ್ತಿದ್ದಾರೆ. ಭವಿಷ್ಯದಲ್ಲಿ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣವೂ ಬರಲಿದ್ದು, ಉದ್ಯಮ ಜಗತ್ತಿನ ಪ್ರಮುಖ ಕೇಂದ್ರವಾಗಲಿದೆ. ನಗರದ ರಸ್ತೆ ಗುಂಡಿ ಮುಚ್ಚಲು ಈಗಾಗಲೇ 4000 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಸಿಎಂ ವಿವರಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ