ಬೆಂಗಳೂರಿನಲ್ಲಿ ಮಳೆ ಅವಾಂತರ: ತಮ್ಮ ಮನೆಗೂ ಕಂಟ್ರೋಲ್ ರೂಂ ಕನೆಕ್ಷನ್ ಕೇಳಿದ ಡಿಕೆಶಿ, ಸಮಸ್ಯೆ ಇದ್ರೆ 15533ಕ್ಕೆ ಕರೆ ಮಾಡಿ
ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ (ಜೂನ್ 02) ಸುರಿದ ಮಳೆ ಹಳೆಯ ದಾಖಲೆಗಳನ್ನು ಮುರಿದು ಮುನ್ನುಗ್ಗಿದೆ. 133 ವರ್ಷದ ದಾಖಲೆಯನ್ನು ಭಾನುವಾರದ ಮಳೆ ದಾಖಲೆಯನ್ನು ಮುರಿದಿದೆ. ಅಷ್ಟೊಂದು ಮಳೆಯಿಂದಾಗಿ ಭಾರೀ ಅವಾಂತರ ಸೃಷ್ಟಿಸಿದೆ. ಎಲ್ಲೊಂದರಲ್ಲಿ ಮರಗಳು ರಸ್ತೆಗೆ ಬಿದ್ದಿದ್ದು, ರಸ್ತೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಬಿಬಿಎಂಪಿ, BWSSB, ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಮಹತ್ವದ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಬೆಂಗಳೂರು, (ಜೂನ್ 03): ಭಾನುವಾರ(ಜೂನ್ 02) ಸಿಲಿಕಾನ್ ಸಿಟಿಯಲ್ಲಿ ಸುರಿದ ಭಾರೀ ಮಳೆ ಹಲವೆಡೆ ಜನಜೀವನ ಅಸ್ತವ್ಯಸ್ತ ಮಾಡಿದೆ. ಮುಂದಿನ ದಿನಗಳಲ್ಲೂ ಮಳೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಬಿಎಂಪಿ, ಬಿಡ್ಲ್ಯೂಎಸ್ಎಸ್ಬಿ, ಅಗ್ನಿ ಶಾಮಕ ಅಧಿಕಾರಿಗಳ ಜೊತೆ ಇಂದು(ಜೂನ್ 03) ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಪ್ರತಿ ವಾರ್ಡ್ಗಳಲ್ಲೂ ನೀರು ಹೋಗಲು ವ್ಯವಸ್ಥೆ, ಬಿದ್ದ ಮರಗಳ ತೆರವು ಸೇರಿದಂತೆ ಇನ್ನಿತರ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೇ 24 ಗಂಟೆಯೂ ಕಾರ್ಯನಿರ್ವಹಿಸಿಸುವ ಕಂಟ್ರೋಲ್ ರೂಂ ಕನೆಕ್ಷನ್ ತಮ್ಮ ಮನೆಗೂ ನೀಡುವಂತೆ ಸೂಚಿಸಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಮನೆಯಿಂದಲೇ ಕಂಟ್ರೀಲ್ ರೂಂ ಮಾನಿಟರ್ ಮಾಡಲು ಮುಂದಾಗಿದ್ದಾರೆ.
ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, 133 ವರ್ಷದ ಬಳಿಕ ಜೂನ್ನಲ್ಲಿ ಇಷ್ಟು ಪ್ರಮಾಣದ ಮಳೆ ಆಗಿದ್ದು, ಬೆಂಗಳೂರಿನ ಜನ ಬಹಳ ಸಂತೋಷದಿಂದ ಮಳೆ ಸ್ವೀಕರಿಸಿದ್ದಾರೆ. ಯಾರಿಗೂ ತೊಂದರೆ ಆಗಿಲ್ಲ, ಮೂವರಿಗೆ ಮಾತ್ರ ಗಾಯ ಆಗಿದೆ. 265 ಮರಗಳು ಬಿದ್ದಿವೆ, 95 ಮರಗಳನ್ನು ತೆರವು ಮಾಡಬೇಕಿದೆ. ಬೆಂಗಳೂರಿನಲ್ಲಿ 694 ದೂರುಗಳನ್ನ ಸಾರ್ವಜನಿಕರು ನೀಡಿದ್ದು, ಈ ಪೈಕಿ 694 ದೂರು ಪೈಕಿ 500 ದೂರುಗಳನ್ನು ಅಟೆಂಡ್ ಮಾಡಲಾಗಿದೆ. ನಗರದಲ್ಲಿ 24 ಗಂಟೆಯೂ ಕಂಟ್ರೋಲ್ ರೂಂ ಕೆಲಸ ಮಾಡುತ್ತೆ. ನನ್ನ ಮನೆಗೂ ಕನೆಕ್ಷನ್ ಕೊಡಿ ಎಂದು ಕೇಳಿದ್ದೇನೆ. ಎಲ್ಲಾ ಇಲಾಖೆಗಳು ಒಗ್ಗೂಡಿ ಕೆಲಸ ಮಾಡಲು ಸೂಚಿಸಿದ್ದೇನೆ ಎಂದರು ವಿವರಿಸಿದರು.
ಇದನ್ನೂ ಓದಿ: Bengaluru Rain: ಒಂದೇ ದಿನದಲ್ಲಿ 133 ವರ್ಷಗಳ ದಾಖಲೆ ಮುರಿದ ಬೆಂಗಳೂರು ಮಳೆ
ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆಗೆ ಕೆಲ ಹಳೇ ಮನೆಗಳು ಕುಸಿದಿವೆ. ಕುಸಿಯುವ ಹಂತದಲ್ಲಿರುವ ಮನೆಗಳನ್ನು ಸರ್ವೆ ಮಾಡಿ ನೋಟಿಸ್ ನೀಡಿ ಸ್ಥಳಾಂತರ ಮಾಡಲು ಸೂಚಿಸಿದ್ದೇನೆ. ಬೆಂಗಳೂರು ನಗರದಲ್ಲಿ ಮಳೆಗೆ 261 ವಿದ್ಯುತ್ ಕಂಬಗಳು ಬಿದ್ದಿವೆ. ಒಣಗಿದ ಮರಗಳನ್ನ ಗುರುತಿಸಿ ತೆರವು ಮಾಡಲು ಸೂಚಿಸಿದ್ದೇನೆ. ತೊಂದರೆ ಆಗುವ ಕಡೆ ನೀರು ಹೊರಹಾಕಲು ತಂಡ ರಚನೆಗೆ ಸೂಚಿಸಲಾಗಿದೆ. ಪ್ರತಿ ವಾರ್ಡ್ಗಳಲ್ಲೂ ನೀರು ಹೋಗಲು ವ್ಯವಸ್ಥೆಗೆ ಜೆಸಿಬಿ, ಟಿಪ್ಪರ್ ವಾಹನಗಳನ್ನು ಇರಿಸಿಕೊಳ್ಳುವಂತೆ ಹೇಳಿದ್ದೇನೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಎಲ್ಲರೂ ಸಮನ್ವಯದಿಂದ ಕೆಲಸ ಮಾಡಲು ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.
ನಿನ್ನೆ ರಾತ್ರಿ ದೊಡ್ಡ ಸಮಸ್ಯೆಯನ್ನ ಸಿಬ್ಬಂದಿಗಳು, ಅಧಿಕಾರಿಗಳು ನಿಭಾಯಿಸಿದ್ದಾರೆ. ಮೆಟ್ರೋ ಭಾಗದಲ್ಲೂ ಮರ ಬಿದ್ದಿತ್ತು, ಅದನ್ನ ತೆರವುಗೊಳಿಸಿದ್ದಾರೆ. ಮೆಟ್ರೋ, ಬಿಬಿಎಂಪಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಸೂಚಿಸಿದ್ದೇನೆ. ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸವೂ ಆಗುತ್ತೆ. ಸಮಸ್ಯೆ ಇದ್ದರೆ 15533ಗೆ ಕರೆ ಮಾಡಿ ದೂರು ನೀಡಬಹುದು. ಪಾಲಿಕೆ ಸದಸ್ಯರು ಇಲ್ಲದಿರುವುದಕ್ಕೆ ಸಮಸ್ಯೆ ಆಗ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಅಧಿಕಾರ ಇದ್ದರೆ ಮಾತ್ರ ಜನ ಸೇವೆ ಮಾಡಬೇಕು ಅಂತೇನಿಲ್ಲ. ಬಿಬಿಎಂಪಿ ಸದಸ್ಯರು ಇದ್ದಿದ್ದರೆ ಸಮಸ್ಯೆ ಆಗುತ್ತಿರಲಿಲ್ವಾ? ಎಲ್ಲರೂ ಜನ ಸೇವೆ ಮಾಡಬೇಕು ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ



