ತೇಜಸ್ವಿ ಸೂರ್ಯ ಬಗ್ಗೆ ಕೇಳಬೇಡಿ, ಆತ ವೇಸ್ಟ್ ಮೆಟೀರಿಯಲ್: ಸುರಂಗ ರಸ್ತೆ ವಿರೋಧಿಸಿದ್ದಕ್ಕೆ ಡಿಕೆ ಶಿವಕುಮಾರ್ ತಿರುಗೇಟು
ಬೆಂಗಳೂರು ಸುರಂಗ ಮಾರ್ಗ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಂಸದ ತೇಜಸ್ವಿ ಸೂರ್ಯ ನಡುವಣ ವಾಕ್ಸಮರ ತೀವ್ರಗೊಂಡಿದೆ. ತೇಜಸ್ವಿ ಸೂರ್ಯ ‘ವೇಸ್ಟ್ ಮೆಟೀರಿಯಲ್’ ಎಂದು ಡಿಕೆಶಿ ತೀವ್ರವಾಗಿ ಟೀಕಿಸಿದ್ದಾರೆ. ಸೂರ್ಯಗೆ ಅನುಭವವಿಲ್ಲ. ಅವರದ್ದು ಖಾಲಿ ಟ್ರಂಕ್ ಎಂದು ಡಿಕೆಶಿ ಲೇವಡಿ ಮಾಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 30: ಸಂಸದ ತೇಜಸ್ವಿ ಸೂರ್ಯ (Tejasvi Surya) ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದಾಗ ಕೆರಳಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ತೀಕ್ಷ್ಣವಾಗಿ ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ತೇಜ್ವಸಿ ಸೂರ್ಯ ‘ವೇಸ್ಟ್ ಮೆಟೀರಿಯಲ್’. ಆತನ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದಿದ್ದಾರೆ. ಸೂರ್ಯಗೆ ಇನ್ನೂ ಅನುಭವ ಇಲ್ಲ, ಇಡೀ ಪ್ರಪಂಚ ಎಲ್ಲಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ.
ಸುರಂಗ ಮಾರ್ಗ ಬೇಡ ಎನ್ನಲು ಇವರು ಯಾರು? ಇವರು ಕೇಂದ್ರ ಸಚಿವರಾಗಿ ಅಥವಾ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿ, ಈ ದೇಶದಲ್ಲಿ ಸುರಂಗ ಮಾರ್ಗವೇ ಬೇಡ ಎಂದು ಹೇಳಲಿ ಎಂದು ಡಿಕೆಶಿ ಸವಾಲು ಹಾಕಿದ್ದಾರೆ. ಸೂರ್ಯ ಅವರ ಮಾತುಗಳು ‘ಖಾಲಿ ಟ್ರಂಕ್’ ಇದ್ದಂತೆ ಎಂದು ಡಿಕೆಶಿ ಲೇವಡಿ ಮಾಡಿದ್ದಾರೆ.
ಬೆಂಗಳೂರು ನಗರದಲ್ಲಿ ಸದ್ಯ 1.3 ಕೋಟಿ ವಾಹನಗಳಿವೆ. ಈ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಾರಿಗೆ ಮಾತ್ರವೇ ಸಂಪೂರ್ಣ ಪರಿಹಾರವಲ್ಲ ಎಂದು ಡಿಕೆಶಿ ವಾದಿಸಿದ್ದಾರೆ. ಎಲ್ಲರೂ ಕಾರು ಬಿಟ್ಟು ಮೆಟ್ರೋ, ಸರ್ಕಾರಿ ಬಸ್ ಅಥವಾ ಆಟೋದಲ್ಲಿ ಓಡಾಡಲು ಆಗುತ್ತದೆಯೇ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಅಥವಾ ಮಾಧ್ಯಮದವರು ಕ್ಯಾಮರಾ ಹಿಡಿದು ಸಾರ್ವಜನಿಕ ಸಾರಿಗೆಯಲ್ಲಿ ಬರಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಮೆಟ್ರೋ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ತಂದಿಲ್ಲ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ‘ನಿಮಗೆ ಅಧಿಕಾರ ಇತ್ತಲ್ಲ, ನೀವು ಏನು ಮಾಡಿದ್ದೀರಿ? ನಿಮ್ಮ ಸರ್ಕಾರ ಎಷ್ಟು ಕಂಬ ಹಾಕಿದೆ? ಎಷ್ಟು ಹಣ ತಂದಿದ್ದೀರಿ’ ಎಂದು ಸೂರ್ಯ ಅವರನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ. ಅಲ್ಲದೆ, ಮೆಟ್ರೋ ಯೋಜನೆಗೆ ಶೇ 11 ರಿಂದ 12 ರಷ್ಟು ಹಣವನ್ನು ರಾಜ್ಯ ಸರ್ಕಾರವೇ ನೀಡುತ್ತದೆ. ಭೂಸ್ವಾಧೀನದಂತಹ ಸವಾಲುಗಳೂ ಇವೆ ಎಂದು ವಿವರಿಸಿದ್ದಾರೆ.
ತೇಜಸ್ವಿ ಸೂರ್ಯ ಬಗ್ಗೆ ಡಿಕೆಶಿ ಹೇಳಿದ್ದೇನು ನೋಡಿ
ತೇಜಸ್ವಿ ಸೂರ್ಯ ಬಗ್ಗೆ ಪ್ರಶ್ನೆ ಕೇಳಬೇಡಿ, ನನ್ನ ಪ್ರಕಾರ ಅವರು ವೇಸ್ಟ್ ಮೆಟೀರಿಯಲ್. ಅವರ ಪಕ್ಷದಲ್ಲಿ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಬಸವರಾಜ ಬೊಮ್ಮಾಯಿ ಅವರಂತಹ ಹಿರಿಯ ನಾಯಕರಿದ್ದಾರೆ, ಅವರಿಗೆ ಈ ವಿಷಯಗಳ ಬಗ್ಗೆ ಅರಿವಿದೆ. ಬೇಕಿದ್ದರೆ ಅವರಿಂದ ಉತ್ತರ ಪಡೆದುಕೊಳ್ಳಿ ಎಂದು ಡಿಕೆಶಿ ಸೂಚಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಟನಲ್ ರಸ್ತೆ ಏಕೆ ಬೇಡ? ಟ್ರಾಫಿಕ್ ನಿವಾರಣೆಗೆ ಏನ್ ಮಾಡ್ಬೇಕು? ಎಳೆಎಳೆಯಾಗಿ ಬಿಚ್ಚಿಟ್ಟ ತೇಜಸ್ವಿ ಸೂರ್ಯ
ಅಲ್ಲದೆ, ಬೆಂಗಳೂರು ನಗರದಲ್ಲಿ ಬಿಆರ್‌ಟಿಎಸ್ ಮಾಡಲು ಜಾಗ ಎಲ್ಲಿ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾತನಾಡಲು ಇಷ್ಟಪಡುವುದಿಲ್ಲ, ಆದರೆ ನಗರ ಅಭಿವೃದ್ಧಿ ವಿಷಯ ಬಂದಾಗ ಮಾತ್ರ ಪ್ರತಿಕ್ರಿಯಿಸುತ್ತೇನೆ. ಸುರಂಗ ಮಾರ್ಗ ವಿಚಾರವಾಗಿ ಏನೋ ಮಾತನಾಡಲು ಒಂದು ಅವಕಾಶ ಕೊಟ್ಟರೆ ತೇಜಸ್ವಿ ಸೂರ್ಯ ಎಳಸು ಹೇಳಿಕೆ ನೀಡುತ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.




