ಕೊವಿಡ್ ನಿರ್ವಹಣೆ ಬಗ್ಗೆ ವದಂತಿ, ತಪ್ಪು ಸಂದೇಶ ಹರಡಿದವರ ವಿರುದ್ಧ ಕಾನೂನು ಕ್ರಮ: ಡಾ.ಸುಧಾಕರ್ ಪ್ರಕಟಣೆ
ಡಿ.ಕೆ. ಶಿವಕುಮಾರ್ ತಪ್ಪು ವದಂತಿ ಹರಡಿರುವುದು ಹಾಗೂ ದೇಶದ ಗೌರವಕ್ಕೆ ಧಕ್ಕೆ ತರುವಂತೆ ನೀಡಿದ ಹೇಳಿಕೆಗಳಿಗೆ ಪುರಾವೆ ಒದಗಿಸಬೇಕು. ಇಲ್ಲದಿದ್ದಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ತಪ್ಪು ಸಂದೇಶ ಹರಡಿರುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬೆಂಗಳೂರು: ಕೊವಿಡ್ ನಿರ್ವಹಣೆ ಬಗ್ಗೆ ವದಂತಿ, ತಪ್ಪು ಸಂದೇಶ ಹರಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಡಾ. ಸುಧಾಕರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಆ ಮೂಲಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಕೂಡ ಸುಧಾಕರ್ ಎಚ್ಚರಿಕೆ ಕೊಟ್ಟಂತಾಗಿದೆ. ಬಹಿರಂಗ ಕ್ಷಮೆ ಯಾಚಿಸಿ ಅಥವಾ ಹೇಳಿಕೆಗೆ ಪುರಾವೆ ಒದಗಿಸಿ. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ ಅಡಿ ಕ್ರಮ ಕೈಗೊಳ್ಳುತ್ತೇವೆ. ಕೊವಿಡ್ ಸೋಂಕು ನಿಯಂತ್ರಣ, ಪರೀಕ್ಷೆ ಮೊದಲಾದ ವ್ಯವಸ್ಥೆಯಲ್ಲಿ ಯಾವುದೇ ತಪ್ಪು ಕಂಡುಬಂದರೆ ಪುರಾವೆ ಸಹಿತ ಸರ್ಕಾರಕ್ಕೆ ದೂರು ನೀಡಬೇಕಿತ್ತು. ರಾಜಕೀಯ ಲಾಭಕ್ಕಾಗಿ ಬೇಜವಾಬ್ದಾರಿಯಿಂದ ತಪ್ಪು ವದಂತಿ ಹರಡಬಾರದು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
ಕೊವಿಡ್ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಸರ್ಕಾರ ಹಣ ಸಂಪಾದಿಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ. ಸರ್ಕಾರವೇ ಕೊವಿಡ್ ಪಾಸಿಟಿವ್ ಎಂದು ತಮ್ಮನ್ನು ಬಿಂಬಿಸಲು ಯತ್ನಿಸಿದೆ ಎಂದು ಆರೋಪ ಮಾಡಿದ್ದಾರೆ. ಪಾದಯಾತ್ರೆಯಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಡಿ.ಕೆ. ಶಿವಕುಮಾರ್, ಗೃಹ ಸಚಿವರು ಹಾಗೂ ನನ್ನನ್ನು ವೈಯಕ್ತಿಕವಾಗಿ ನಿಂದಿಸಿರುವುದನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ. ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಆಧಾರ ರಹಿತ ಆರೋಪ ಸರಿಯಲ್ಲ. ಡಿ.ಕೆ. ಶಿವಕುಮಾರ್ ತಪ್ಪು ವದಂತಿ ಹರಡಿರುವುದು ಹಾಗೂ ದೇಶದ ಗೌರವಕ್ಕೆ ಧಕ್ಕೆ ತರುವಂತೆ ನೀಡಿದ ಹೇಳಿಕೆಗಳಿಗೆ ಪುರಾವೆ ಒದಗಿಸಬೇಕು. ಇಲ್ಲದಿದ್ದಲ್ಲಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ತಪ್ಪು ಸಂದೇಶ ಹರಡಿರುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಬಳಿ ಬಂದಿದ್ದ ರಾಮನಗರ ಜಿಲ್ಲೆಯ ಅಧಿಕಾರಿಗಳು ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಕೋರಿದ್ದರು. ಆದರೆ ಪರೀಕ್ಷೆ ಮಾಡಲು ಅವಕಾಶ ನೀಡದೇ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ತಿಳಿದುಬಂದಿದೆ. ಆದ್ದರಿಂದ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಅವಕಾಶವೂ ಇದೆ. ಆರೋಪ ಮಾಡಿದವರು ಕೂಡಲೇ ಸಾಕ್ಷಿ ಸಮೇತ ಹೇಳಿಕೆಗಳಿಗೆ ಸ್ಪಷ್ಟನೆ ಒದಗಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಜಾರಿಯಾಗಲಿದೆ. ಕಾಂಗ್ರೆಸ್ ಸರ್ಕಾರದ ನೀತಿಯ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತಿದೆ. ಇದರಿಂದ ರಾಜ್ಯದ ಘನತೆಗೆ ಧಕ್ಕೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಮೃತರ ವಿವರ ಆರೋಗ್ಯ ಇಲಾಖೆ ದತ್ತಾಂಶದಲ್ಲಿಲ್ಲದಿದ್ರೂ, ಅರ್ಹ ಪ್ರಕರಣಗಳಿಗೆ ಪರಿಹಾರ ಕೊವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಎಸ್ಡಿಆರ್ಎಫ್ ನಿಧಿಯಡಿ ₹50 ಸಾವಿರ ಪರಿಹಾರ ನೀಡಲಾಗುವುದು. ಮೃತರ ವಿವರ ಆರೋಗ್ಯ ಇಲಾಖೆ ದತ್ತಾಂಶದಲ್ಲಿಲ್ಲದಿದ್ರೂ, ಅರ್ಹ ಪ್ರಕರಣಗಳಿಗೆ SDRF ನಿಧಿಯಿಂದ ಪರಿಹಾರ ಕೊಡಲಾಗುವುದು ಎಂಬ ಕುರಿತು ರಾಜ್ಯ ಸರ್ಕಾರದಿಂದ ಆದೇಶ ಪ್ರಕಟ ಮಾಡಲಾಗಿದೆ.
ಇದನ್ನೂ ಓದಿ: ‘ಸರ್ಕಾರವೇ ಮೇಕೆದಾಟು ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ; ಡಿಕೆ ಶಿವಕುಮಾರ್ ಬಳಿ ಸೋಂಕಿತನನ್ನು ಕಳಿಸಲಾಗಿದೆ’
ಇದನ್ನೂ ಓದಿ: Mekedatu Padayatra Live: ನಿಮ್ಮ ಕೂಗು ಬೊಮ್ಮಾಯಿ, ಮೋದಿಗೆ ಕೇಳಬೇಕು: ಪಾದಯಾತ್ರೆಯಲ್ಲಿ ಡಿಕೆ ಶಿವಕುಮಾರ್