ಶೀಘ್ರ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆ ಸಾಧ್ಯತೆ: ಸಚಿವರ ಜೊತೆ ಸಂಘದ ಪದಾಧಿಕಾರಿಗಳ ಸಭೆ
ಮುಖ್ಯಮಂತ್ರಿ ಜೊತೆ ಚರ್ಚೆ ಬಳಿಕ, ಉಪನ್ಯಾಸಕರ ಬೇಡಿಕೆಗಳ ಕುರಿತು ಎರಡು ದಿನಗಳ ಒಳಗೆ ಸರ್ಕಾರದ ತೀರ್ಮಾನವು ಪ್ರಕಟವಾಗುವ ಸಾಧ್ಯತೆಯಿದೆ.
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಮುಷ್ಕರ ಶೀಘ್ರ ಕೊನೆಯಾಗಬಹುದು ಎಂಬ ಮುನ್ಸೂಚನೆ ಸಿಕ್ಕಿದೆ. ಅತಿಥಿ ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಇನ್ನು ಒಂದೆರೆಡು ದಿನಗಳಲ್ಲಿ ಸರ್ಕಾರ ತೀರ್ಮಾನ ಪ್ರಕಟಿಸುವ ಸಾಧ್ಯತೆಯಿದೆ. ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮಕ್ಷಮ ನಗರದ ಉನ್ನತ ಶಿಕ್ಷಣ ಪರಿಷತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಸದಸ್ಯರು, ಉಪನ್ಯಾಸಕರ ಸಂಘದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಆಲಿಸಿದ ಸಚಿವರು ಪೂರಕವಾಗಿ ಸ್ಪಂದಿಸಿದರು. ಮುಖ್ಯಮಂತ್ರಿ ಜೊತೆ ಚರ್ಚೆ ಬಳಿಕ, ಉಪನ್ಯಾಸಕರ ಬೇಡಿಕೆಗಳ ಕುರಿತು ಎರಡು ದಿನಗಳ ಒಳಗೆ ಸರ್ಕಾರದ ತೀರ್ಮಾನವು ಪ್ರಕಟವಾಗುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿರುವ 14 ಸಾವಿರ ಅತಿಥಿ ಉಪನ್ಯಾಸಕರ ಸಭೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಸಾಕಷ್ಟು ಬಾರಿ ಚರ್ಚಿಸಿದ್ದೇನೆ. ಶೀಘ್ರದಲ್ಲಿಯೇ ಈ ಕುರಿತು ನಿರ್ಣಯ ಪ್ರಕಟವಾಗಲಿದೆ. ಅತಿಥಿ ಉಪನ್ಯಾಸಕರು ಬೋಧನೆಗೆ ಹಿಂದಿರುಗಬೇಕು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದರು.
ಮುಖ್ಯಮಂತ್ರಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಕಾರಣ ಅವರೊಂದಿಗೆ ಚರ್ಚಿಸಲು ತುಸು ಕಾಲಾವಕಾಶಬೇಕಿದೆ. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವ ವಿಚಾರದಲ್ಲಿ ಆರ್ಥಿಕ ವಿಚಾರ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಬೇಕಾಗಿದೆ. ಅತಿಥಿ ಉಪನ್ಯಾಸಕರ ಎಲ್ಲ ಬೇಡಿಕೆಗಳನ್ನು ಸರ್ಕಾರವು ಸಹಾನುಭೂತಿಯಿಂದ ಪರಿಶೀಲಿಸಲಿದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಅಯನೂರು ಮಂಜುನಾಥ್, ಶಶಿಲ್ ನಮೋಶಿ, ಚಿದಾನಂದಗೌಡ, ಎಸ್.ವಿ.ಸಂಕನೂರು, ಅರುಣ್ ಶಹಾಪುರ, ವೈ.ಎ.ನಾರಾಯಣಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಭೋಜೇಗೌಡ, ಹನುಮಂತರ ನಿರಾಣಿ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಇತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ: BrahMos Missile: ಐಎನ್ಎಸ್ ವಿಶಾಖಪಟ್ಟಣಂ ಯುದ್ಧನೌಕೆಯಿಂದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ ಇದನ್ನೂ ಓದಿ: ತೆರಿಗೆ ವಂಚನೆ ಆರೋಪ: ಚೀನಾ ಮೂಲದ ಮೊಬೈಲ್ ಕಂಪನಿಗಳಿಗೆ ದಂಡದ ಬಿಸಿ