BrahMos Missile: ಐಎನ್ಎಸ್ ವಿಶಾಖಪಟ್ಟಣಂ ಯುದ್ಧನೌಕೆಯಿಂದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ
Sea to Sea Missile: ಸಾಗರದಿಂದ ಉಡಾವಣೆಗೊಂಡು ಸಾಗರದಲ್ಲಿರುವ ಗುರಿಯನ್ನು ಬೆನ್ನತ್ತುವ ತಂತ್ರಜ್ಞಾನದ ಈ ಕ್ಷಿಪಣಿಯು ಗರಿಷ್ಠ ದೂರದಲ್ಲಿದ್ದ ನೌಕೆಯ ಮೇಲೆ ಯಶಸ್ವಿಯಾಗಿ ಅಪ್ಪಳಿಸಿತು.
ದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (Defence Research and Development Organisation – DRDO) ಮಂಗಳವಾರ ಭಾರತೀಯ ನೌಕಾಪಡೆಯು ಯುದ್ಧನೌಕೆ ಐಎನ್ಎಸ್ ವಿಕ್ರಮಾದಿತ್ಯದಿಂದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು (BrahMos Supersonic Cruise Missile) ಯಶಸ್ವಿಯಾಗಿ ಪರೀಕ್ಷಿಸಿತು. ಪಾಕ್ ಮತ್ತು ಚೀನಾದ ಭೂಗಡಿಗೆ ಸಮೀಪವಿರುವ ದೇಶದ ಪಶ್ಚಿಮ ಕರಾವಳಿಯಲ್ಲಿ ಈ ಪರೀಕ್ಷೆ ನಡೆದಿರುವುದು ಮಹತ್ವದ ವಿದ್ಯಮಾನ ಎನಿಸಿದೆ. ಸಾಗರದಿಂದ ಉಡಾವಣೆಗೊಂಡು ಸಾಗರದಲ್ಲಿರುವ (Sea to Sea) ಗುರಿಯನ್ನು ಬೆನ್ನತ್ತುವ ತಂತ್ರಜ್ಞಾನದ ಈ ಕ್ಷಿಪಣಿಯು ಗರಿಷ್ಠ ದೂರದಲ್ಲಿದ್ದ ನೌಕೆಯ ಮೇಲೆ ಯಶಸ್ವಿಯಾಗಿ ಅಪ್ಪಳಿಸಿತು.
ಇದಕ್ಕೂ ಮೊದಲು ಡಿಸೆಂಬರ್ 8ರಂದು ವಿಮಾನದಿಂದ ಹಾರಿಬಿಡುವ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಏರ್ ಟು ಏರ್ (Air to Air) ಮಾದರಿಯನ್ನು ಕಳೆದ ಡಿಸೆಂಬರ್ 8ರಂದು ಒಡಿಶಾದ ಚಂಡಿಪುರ ಕಡಲ ತೀರದಿಂದ ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಈ ವಿದ್ಯಮಾನನ್ನು ಬ್ರಹ್ಮೋಸ್ ಸಂಶೋಧನೆಯಲ್ಲಿ ಪ್ರಮುಖ ಮೈಲಿಗಲ್ಲು ಎಂದು ಹೇಳಿತ್ತು. ಶಬ್ದಾತೀತ ವೇಗದಲ್ಲಿ ಸಂಚರಿಸುವ ಸುಖೋಯ್ ಫೈಟರ್ ವಿಮಾನವು ಏರ್ ಟು ಏರ್ ಮಾದರಿಯ ಕ್ಷಿಪಣಿಯನ್ನು ಗುರಿಯತ್ತ ಉಡಾಯಿಸಿತ್ತು. ಈ ಉಡಾವಣೆಯು ಏರ್-ಟು-ಏರ್ ಮಾದರಿಯ ಬ್ರಹ್ಮೋಸ್ ಕ್ಷಿಪಣಿಗಳ ಉತ್ಪಾದನೆಯನ್ನು ದೊಡ್ಡಮಟ್ಟದಲ್ಲಿ ಆರಂಭಿಸಲು ಈ ಪರೀಕ್ಷೆಯು ನೆರವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. ಪ್ರಸ್ತುತ ಇದು ದೇಶದ ಅತ್ಯಂತ ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆ ಎನಿಸಿದೆ. ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮದ ಭಾಗವಾಗಿ ಬ್ರಹ್ಮೋಸ್ ಕ್ಷಿಪಣಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ.
ಬ್ರಹ್ಮೋಸ್ ಕ್ಷಿಪಣಿಗಳ ವೈಶಿಷ್ಟ್ಯವೇನು? ಬ್ರಹ್ಮೋಸ್ ಕ್ಷಿಪಣಿಗಳ ನಿಖರತೆ ಅದನ್ನು ಹೆಚ್ಚು ಮಾರಣಾಂತಿಕ ಎನಿಸುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಅದರ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸಬಹುದು. ಈ ಕ್ಷಿಪಣಿಗೆ ಶತ್ರುಗಳ ರಾಡಾರ್ ಕಣ್ತಪ್ಪಿಸುವ ಸಾಮರ್ಥ್ಯವೂ ಇದೆ. ರಷ್ಯಾದ ಸಹಯೋಗದಲ್ಲಿ ಭಾರತ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ ಸರಣಿಗಳಿಗೆ ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೊಸ್ಖಾ ನದಿಗಳನ್ನು ಸಮೀಕರಿಸಿ ಬ್ರಹ್ಮೋಸ್ ಎಂದು ಹೆಸರಿಸಲಾಗಿದೆ. 21ನೇ ಶತಮಾನದ ಅತ್ಯಂತ ನಿಖರ ಮತ್ತು ಅಪಾಯಕಾರಿ ಕ್ಷಿಪಣಿಗಳ ಪೈಕಿ ಬ್ರಹ್ಮೋಸ್ ಸಹ ಒಂದಾಗಿದೆ. ಗಂಟೆಗೆ 4300 ಕಿಮೀ ವೇಗದಲ್ಲಿ ಸಂಚರಿಸುವ ಬ್ರಹ್ಮೋಸ್ ಕ್ಷಿಪಣಿಯು ಶತ್ರುಗಳ ನೆಲೆಗಳ ಮೇಲೆ ಕರಾರುವಾಕ್ಕಾಗಿ ಅಪ್ಪಳಿಸಿ, ನಾಶಪಡಿಸಲಿದೆ. 400 ಕಿಮೀ ಒಳಗಿರುವ ನೆಲೆಗಳ ಮೇಲೆಯೂ ಬ್ರಹ್ಮೋಸ್ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.
ಲಖನೌದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಘಟಕ ಬ್ರಹ್ಮೋಸ್ ಕ್ಷಿಪಣಿಗಳ ಉತ್ಪಾದನಾ ಘಟಕಕ್ಕೆ ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಈ ಘಟಕದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳ ಉತ್ಪಾದನೆ ಶೀಘ್ರ ಆರಂಭವಾಗಲಿದೆ. ಕ್ಷಿಪಣಿಯ ಜೊತೆಗೆ ಇತರ ರಕ್ಷಣಾ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳನ್ನೂ ಉತ್ಪಾದಿಸುತ್ತಿರುವುದಾಗಿ ಬ್ರಹ್ಮೋಸ್ ಹೇಳಿತ್ತು. ಯಾವುದೇ ದೇಶವನ್ನು ಗಮನದಲ್ಲಿರಿಸಿಕೊಂಡು ಈ ಕ್ಷಿಪಣಿಯನ್ನು ನಾವು ರೂಪಿಸಿಲ್ಲ ಎಂದು ಬ್ರಹ್ಮೋಸ್ ಕಂಪನಿಯು ಈ ಹಿಂದೆ ಸ್ಪಷ್ಟಪಡಿಸಿತ್ತು.
Advanced sea to sea variant of BrahMos Supersonic Cruise missile was tested from INS Visakhapatnam today. Missile hit the designated target ship precisely. @indiannavy @BrahMosMissile#SashaktBharat#AtmaNirbharBharat pic.twitter.com/BbnazlRoM4
— DRDO (@DRDO_India) January 11, 2022
ಇದನ್ನೂ ಓದಿ: Missile Power: ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಸ್ವಾವಲಂಬನೆ, ಮೇಲುಗೈಗೆ ಸಾಕ್ಷಿಯಾದ ಸೂಪರ್ಸಾನಿಕ್ ಬ್ರಹ್ಮೋಸ್, ಸಬ್ಸಾನಿಕ್ ನಿರ್ಭಯ್ ಇದನ್ನೂ ಓದಿ: ಬ್ರಹ್ಮೋಸ್ ‘ಸರ್ಫೇಸ್ ಟು ಸರ್ಫೇಸ್’ ಕ್ಷಿಪಣಿ ಪ್ರಯೋಗ ಯಶಸ್ವಿ