ತೆರಿಗೆ ವಂಚನೆ ಆರೋಪ: ಚೀನಾ ಮೂಲದ ಮೊಬೈಲ್ ಕಂಪನಿಗಳಿಗೆ ದಂಡದ ಬಿಸಿ
ಚೀನಾ ಮೂಲದ ಮೊಬೈಲ್ ಕಂಪನಿಗಳು ಹಲವು ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದ್ದು, ದೊಡ್ಡಮೊತ್ತದ ದಂಡ ವಿಧಿಸಲಾಗಿದೆ. ತಮ್ಮ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿರುವ ದೇಶಗಳ ಕಾನೂನುಗಳನ್ನು ಈ ಕಂಪನಿಗಳು ಹಲವು ಬಾರಿ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.
ಭಾರತದ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಬ್ರ್ಯಾಂಡ್‌ಗಳ ಪ್ರಾಬಲ್ಯ ಶೇ 75ರಷ್ಟು ಇದೆ. ಭಾರತದಲ್ಲಿ ಮುಂಚೂಣಿ ಮೊಬೈಲ್ ಕಂಪನಿಗಳೆಸಿದ ವಿವೋ (Vivo), ರಿಯಲ್ ಮಿ (Realme), ಒಪ್ಪೊ (Oppo), ಶಿಯೋಮಿ (Xiaomi) ಬ್ರಾಂಡ್‌ಗಳೆಲ್ಲವೂ ಚೀನಾ ದೇಶದವೇ ಆಗಿವೆ. ಬಳಕೆದಾರರ ದತ್ತಾಂಶ ಸುರಕ್ಷೆಯ ಬಗ್ಗೆ ಹಲವು ಪ್ರಶ್ನೆಗಳಿದ್ದರೂ ಮಾರುಕಟ್ಟೆಯಲ್ಲಿ ಈ ಕಂಪನಿಗಳ ಪಾರಮ್ಯ ಮುಂದುವರಿದಿದೆ. ಚೀನಾ ಮೂಲದ ಮೊಬೈಲ್ ಕಂಪನಿಗಳು ಹಲವು ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದ್ದು, ದೊಡ್ಡಮೊತ್ತದ ದಂಡ ವಿಧಿಸಲಾಗಿದೆ. ತಮ್ಮ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿರುವ ದೇಶಗಳ ಕಾನೂನುಗಳನ್ನು ಈ ಕಂಪನಿಗಳು ಹಲವು ಬಾರಿ ಉಲ್ಲಂಘಿಸಿರುವುದು ಪತ್ತೆಯಾಗಿದೆ. ಈ ಕುರಿತು ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ ಅವರ ಬರಹ ಇಲ್ಲಿದೆ.
ಮೊಬೈಲ್ ಕಂಪನಿಗಳು ನಿಯಮ ಉಲ್ಲಂಘಿಸಿರುವ ಕುರಿತು ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆ, ಕಂದಾಯ ಗುಪ್ತಚರ ನಿರ್ದೇಶನಾಲಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈಚೆಗೆ ಜಂಟಿ ತನಿಖೆ ನಡೆಸಿದರು. ಈ ಮೊಬೈಲ್ ಕಂಪನಿಗಳ ಕಾರ್ಯಾಚರಣೆಗಳನ್ನು ಗಮನಿಸುವಾಗ, ಹಲವು ಅಂಶಗಳು ಬೆಳಕಿಗೆ ಬಂದವು. ಅದನ್ನೇ ಆಧಾರವಾಗಿಸಿಕೊಂಡು ಉನ್ನತ ಹಂತದಲ್ಲಿ ತನಿಖೆ ಮುಂದುವರಿಸಲಾಯಿತು. ಈ ವೇಳೆ ಹಲವು ಅಕ್ರಮಗಳು, ತೆರಿಗೆ ಕಾನೂನುಗಳ ಉಲ್ಲಂಘನೆ ಮತ್ತು ಅಬಕಾರಿ ಸುಂಕ ಪಾವತಿಸದ ಸಂಗತಿಗಳು ಬಹಿರಂಗವಾದವು.
ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆಯಾಗಿರುವ ಶಿಯೊಮಿ ಕಂಪನಿಯ ಭಾರತ ಘಟಕವು ₹ 650 ಕೋಟಿ ಮೌಲ್ಯದ ಅಬಕಾರಿ ಸುಂಕವನ್ನು ತಪ್ಪಿಸಿರುವ ಸಂಗತಿಯು ಸತತವಾಗಿ ದಾಳಿಗಳನ್ನು ನಡೆಸಿದ ವೇಳೆ ಪತ್ತೆಯಾಗಿದೆ. ಶಿಯೊಮಿ ಆಮದು ಮಾಡಿಕೊಳ್ಳುವ ಸರಕುಗಳ ವಹಿವಾಟು ಮೌಲ್ಯಕ್ಕೆ ರಾಯಧನ ಮತ್ತು ಪರವಾನಗಿ ಶುಲ್ಕವನ್ನು ಸೇರಿಸುತ್ತಿಲ್ಲ ಎಂಬುದು ಬಹಿರಂಗವಾಗಿದೆ. ವಿಚಾರಣೆಯ ವೇಳೆ ಶಿಯೋಮಿ ಸಿಬ್ಬಂದಿ ಇದನ್ನು ದೃಢಪಡಿಸಿದ್ದಾರೆ. ದೋಷಾರೋಪಣೆಗೆ ಸಾಕ್ಷಿಯಾಗುವ ದಾಖಲೆಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ.
ಭಾರತದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಎನಿಸಿದ ಒಪ್ಪೊ ಮೇಲೆ ಇಂಥದ್ದೇ ದೂರುಗಳು ಕೇಳಿಬಂದಿವೆ. ಚೀನಾದಲ್ಲಿ ಮೊಬೈಲ್ ಉತ್ಪಾದಿಸುವ ಒಪ್ಪೊ ಭಾರತದ ತೆರಿಗೆ ಕಾನೂನುಗಳನ್ನು ಉಲ್ಲಂಘಿಸಿರುವ ಕಾರಣ ಸುಮಾರು ₹ 1000 ಕೋಟಿ ಮೊತ್ತದಷ್ಟು ದಂಡ ಪಾವತಿಸಬೇಕಾಗಿದೆ. ಆದಾಯ ತೆರಿಗೆ ಇಲಾಖೆಯು ಒಪ್ಪೋ ಇಂಡಿಯಾದ ಕಚೇರಿಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿತ್ತು. 1961ರ ಭಾರತದ ಆದಾಯ ತೆರಿಗೆ ಕಾಯಿದೆಗೆ ಅನುಗುಣವಾಗಿ ಒಪ್ಪೊ ಸಂಸ್ಥೆ ತನ್ನ ವಹಿವಾಟುಗಳನ್ನು ಬಹಿರಂಗಪಡಿಸುತ್ತಿಲ್ಲ ಎಂಬುದನ್ನು ದಾಳಿಯ ವೇಳೆ ಅಧಿಕಾರಿಗಳು ಕಂಡುಕೊಂಡಿದ್ದಾರೆ. ಇದೇ ವೇಳೆ, ಜಾರಿ ನಿರ್ದೇಶನಾಲಯ ಮತ್ತೊಂದು ದಾಳಿಯನ್ನು ನಡೆಸಿದೆ. ಒಪ್ಪೊದ ಚೀನಾದ ವಿತರಣಾ ಪಾಲುದಾರರಲ್ಲಿ ಒಬ್ಬರಿಗೆ ನೂರಾರು ಕೋಟಿ ರೂಪಾಯಿಗಳಷ್ಟು ದಂಡ ವಿಧಿಸಲಾಗಿದೆ.
ದಾಳಿಯ ಇನ್ನಷ್ಟು ವಿವರಗಳು ಮುಂದಿನ ದಿನಗಳಲ್ಲಿ ಬೆಳಕಿಗೆ ಬರಬಹುದು. ಆದರೆ ಚೀನಾದ ಕಂಪನಿಗಳು ಭಾರತೀಯ ಕಾನೂನುಗಳನ್ನು ಉಲ್ಲಂಘಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಚೀನಾದ ಟೆಲಿಕಾಂ ಸಲಕರಣೆ ಕಂಪನಿಯಾದ ಝಡ್‌ಟಿಸಿ (ZTE) ಕಾರ್ಪೊರೇಟ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಆಗಲೂ ಇದೇ ಬಗೆಯ ಅಕ್ರಮಗಳು ಬೆಳಕಿಗೆ ಬಂದವು. ನೂರಾರು ಕೋಟಿ ಮೌಲ್ಯದ ಉಲ್ಲಂಘನೆಗಳು, ತೆರಿಗೆ ವಂಚನೆಗಳು, ಸುಳ್ಳು ವೆಚ್ಚಗಳು, ಅಕ್ರಮ ಷೇರು ಖರೀದಿಗಳು ಮತ್ತು ಲೆಕ್ಕಪತ್ರಗಳಲ್ಲಿ ಅಕ್ರಮಗಳನ್ನು ಆ ಕಂಪನಿಯು ಮಾಡಿತ್ತು.
ಚೀನಾದೊಂದಿಗೆ ಗಡಿಯಲ್ಲಿ ಮಾತ್ರವಲ್ಲ, ತನ್ನದೇ ನೆಲದಲ್ಲಿಯೂ ಭಾರತವು ಸೆಣೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿಯಲ್ಲಿ ನುಸುಳುಕೋರರನ್ನು ನಿರ್ವಹಿಸುವುದಕ್ಕೂ, ಆರ್ಥಿಕತೆಯಲ್ಲಿ ನುಸುಳುಕೋರರನ್ನು ನಿರ್ವಹಿಸುವುದಕ್ಕೂ ಬೇಕಿರುವ ಆಯುಧಗಳು ಬೇರೆಬೇರೆ. ಆದರೆ ಸದ್ಯದ ಮಟ್ಟಿಗೆ ಭಾರತ ಸರ್ಕಾರವು ಎರಡೂ ಕ್ಷೇತ್ರಗಳಲ್ಲಿ ಚೀನಾವನ್ನು ಎದುರಿಸಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು, ಕಾರ್ಯಾಚರಣೆ ಆರಂಭಿಸಿದೆ.
ಇದನ್ನೂ ಓದಿ: ವಿಯೆಟ್ನಾಂನ ಡ್ರ್ಯಾಗನ್ ಹಣ್ಣಿನಲ್ಲೂ ಕೊರೊನಾ ವೈರಸ್ ಪತ್ತೆ; ಚೀನಾದಲ್ಲಿ ಸೂಪರ್ ಮಾರ್ಕೆಟ್ಗಳು ಬಂದ್ ಇದನ್ನೂ ಓದಿ: National Defence: ತೈವಾನ್ ಮೇಲೇಕೆ ಚೀನಾಕ್ಕೆ ಕೆಂಗಣ್ಣು? ಅಮೆರಿಕಕ್ಕೆ ಇರುವ ಆಯ್ಕೆಗಳೇನು?
Published On - 3:36 pm, Mon, 10 January 22