Purchasing Managers Index: ಭಾರತ ಸೇವಾ ವಲಯದ ಪಿಎಂಐ ಡಿಸೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠಕ್ಕೆ
ಭಾರತೀಯ ಸೇವಾ ವಲಯದ ಪಿಎಂಐ ಡಿಸೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.
ಕೊವಿಡ್-19 ರೂಪಾಂತರವಾದ ಒಮಿಕ್ರಾನ್ ಹರಡುತ್ತಿರುವ ಕಾರಣಕ್ಕೆ ಭಾರತೀಯ ಸೇವಾ ಕಂಪೆನಿಗಳು ಡಿಸೆಂಬರ್‌ನಲ್ಲಿ ಮಾರಾಟ ಮತ್ತು ವ್ಯಾಪಾರ ಚಟುವಟಿಕೆಯ ಬೆಳವಣಿಗೆ ನಿಧಾನಗತಿಯಲ್ಲಿ ವರದಿ ಮಾಡುವುದನ್ನು ಮುಂದುವರಿಸಿವೆ. ಜನವರಿ 5ರಂದು ಬಿಡುಗಡೆಯಾದ ಮಾಸಿಕ IHS ಮಾರ್ಕಿಟ್ ಇಂಡಿಯಾ ಸೇವೆಗಳ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (PMI) ಸಮೀಕ್ಷೆಯ ಪ್ರಕಾರ, ಸರ್ವೀಸಸ್ ಪಿಎಂಐ ನವೆಂಬರ್‌ನಲ್ಲಿ 58.1ರಷ್ಟು ಇದ್ದದ್ದು ಡಿಸೆಂಬರ್ 55.5ರಷ್ಟಿತ್ತು. PMI ಪರಿಭಾಷೆಯಲ್ಲಿ 50ಕ್ಕಿಂತ ಹೆಚ್ಚಿದ್ದಲ್ಲಿ ವಿಸ್ತರಣೆ ಎಂದರ್ಥ. ಅದರ ಕೆಳಗಿನ ಅಂಕಿಯು ಕುಗ್ಗುವುದನ್ನು ಸೂಚಿಸುತ್ತದೆ. ಸೇವೆಗಳ PMI ಕಳೆದ ಕೆಲವು ತಿಂಗಳಲ್ಲಿ ಏರಿಳಿತವನ್ನು ಹೊಂದಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಹತ್ತೂವರೆ ವರ್ಷಗಳಲ್ಲಿ ಗರಿಷ್ಠ ಮಟ್ಟವಾದ 58.4 ತಲುಪಿತ್ತು. ಅದರ ಹಿಂದಿನ ತಿಂಗಳಾದ ಸೆಪ್ಟೆಂಬರ್‌ನಲ್ಲಿ 55.2ರಿಂದ ಹೆಚ್ಚಾಗಿದೆ. ಆದರೆ ಪ್ರಯಾಣದ ನಿರ್ಬಂಧಗಳ ಹೆಚ್ಚಳ ಮತ್ತು ಕರ್ಫ್ಯೂ, ಹರಡುತ್ತಿರುವ ಒಮಿಕ್ರಾನ್ ವೇರಿಯಂಟ್ನಿಂದಾಗಿ ದೇಶೀಯ ವಲಯದಲ್ಲಿ ಮಾರುಕಟ್ಟೆ ಮುಚ್ಚಿದ್ದರಿಂದ ಸೇವೆಗಳ ಚಟುವಟಿಕೆಯನ್ನು ಕುಂಠಿತಗೊಳಿಸಿದೆ.
PMI ಸಮೀಕ್ಷೆಯ ಪ್ರಕಾರ, ಸೇವಾ ಸಂಸ್ಥೆಗಳಿಂದ ಹೊಸ ಕೆಲಸದ ನೇಮಕಾತಿ ನಿಧಾನ ಗತಿಯಲ್ಲಿ ಮುಂದುವರಿದಿದೆ. ಸತತ ಐದನೆಯ ತಿಂಗಳಲ್ಲಿ ಏರಿಕೆಯು ದಾಖಲಾಗಿದೆ. ಆದರೆ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಅಲ್ಲದೆ, ಇದು ದೇಶೀಯ ಮಾರುಕಟ್ಟೆಯ ಮೇಲೆ ಕೇಂದ್ರೀಕೃತವಾಗಿತ್ತು. ಏಕೆಂದರೆ ವಿದೇಶದಿಂದ ಹೊಸ ವ್ಯಾಪಾರವು ಮತ್ತಷ್ಟು ಕುಸಿಯಿತು. ಅಂತರರಾಷ್ಟ್ರೀಯ ಬೇಡಿಕೆಯಲ್ಲಿನ ಕ್ಷೀಣತೆಯು ಕೊವಿಡ್-19 ನಿರ್ಬಂಧಗಳಿಗೆ, ಅದರಲ್ಲೂ ವಿಶೇಷವಾಗಿ ಪ್ರಯಾಣಕ್ಕೆ ಸಂಬಂಧಿಸಿದೆ. ಬದಲಾಗಿ, ಭಾರತೀಯ ಸೇವಾ ಕಂಪನಿಗಳು 2021ರ ಅಂತ್ಯದಲ್ಲಿ ತಮ್ಮ ಬಾಕಿ ಉಳಿದಿರುವ ವ್ಯವಹಾರವನ್ನು ವಿಲೇವಾರಿ ಮಾಡುವುದನ್ನು ಮುಂದುವರಿಸಿದವು, ಬಾಕಿ ಉಳಿದಿರುವ ಕೆಲಸಗಳಲ್ಲಿನ ಇತ್ತೀಚಿನ ಕುಸಿತವು ಸತತ ಐದನೆಯ ತಿಂಗಳಿನದ್ದಾಗಿದೆ.
ಹಣದುಬ್ಬರದ ನಿರಂತರ ಏರಿಕೆಯು ಭಾರತೀಯ ಸೇವಾ ಪೂರೈಕೆದಾರರಿಗೆ ಮತ್ತೊಂದು ಸವಾಲನ್ನು ಒಡ್ಡುತ್ತಲೇ ಇತ್ತು. ಡಿಸೆಂಬರ್ ಡೇಟಾವು ಭಾರತೀಯ ಸೇವಾ ಸಂಸ್ಥೆಗಳಲ್ಲಿ ಇನ್‌ಪುಟ್ ವೆಚ್ಚದಲ್ಲಿ ಹದಿನೆಂಟನೇ ಸತತ ಮಾಸಿಕ ಹೆಚ್ಚಳವನ್ನು ತೋರಿಸಿದೆ. ತೀಕ್ಷ್ಣವಾದ ಮತ್ತು ಅದರ ದೀರ್ಘಾವಧಿಯ ಸರಾಸರಿಗಿಂತ ಹೆಚ್ಚಿದ್ದರೂ ಹಣದುಬ್ಬರದ ದರವು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಯಿತು. ನಿಗಾ ವಹಿಸಿದ ಕಂಪೆನಿಗಳು ರಾಸಾಯನಿಕಗಳು, ಆಹಾರ, ಇಂಧನ, ವೈದ್ಯಕೀಯ ಉಪಕರಣಗಳು, ಕಚೇರಿ ಉತ್ಪನ್ನಗಳು, ಉಪಕರಣಗಳು ಮತ್ತು ಸಾರಿಗೆಯ ಹೆಚ್ಚಿನ ವೆಚ್ಚಗಳನ್ನು ಉಲ್ಲೇಖಿಸಿವೆ.
“ಸೇವಾ ಪೂರೈಕೆದಾರರಿಗೆ 2021 ಮತ್ತೊಂದು ಏರಿಕೆಯ ವರ್ಷವಾಗಿದೆ. ಮತ್ತು ಬೆಳವಣಿಗೆಯು ಡಿಸೆಂಬರ್‌ನಲ್ಲಿ ಸಾಧಾರಣ ಹೆಜ್ಜೆ ಹಿಂಪಡೆಯಿತು. ಆದರೂ ಇತ್ತೀಚಿನ ರೀಡಿಂಗ್ಗಳು ಸಮೀಕ್ಷೆಯ ಪ್ರವೃತ್ತಿಗೆ ಹೋಲಿಸಿದರೆ ಮಾರಾಟ ಮತ್ತು ವ್ಯಾಪಾರ ಚಟುವಟಿಕೆಯಲ್ಲಿ ದೃಢವಾದ ಹೆಚ್ಚಳ ಸೂಚಿಸಿವೆ,” ಎಂದು IHS ಮಾರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕರಾದ ಪೊಲಿಯಾನಾ ಡಿ ಲಿಮಾ ಹೇಳಿದ್ದಾರೆ. ಅಲ್ಲದೆ, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಕಂಡುಬರುವ ಏರಿಳಿತದ ಪ್ರದರ್ಶನಗಳ ಕಾರಣದಿಂದಾಗಿ 2021/22ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಉತ್ಪಾದನೆಯ ಸರಾಸರಿ ಬೆಳವಣಿಗೆ ದರವು 2011ರ ಮಾರ್ಚ್ ಮೂರು ತಿಂಗಳ ನಂತರ ಪ್ರಬಲವಾಗಿದೆ ಎಂದು ಅವರು ಹೇಳಿದ್ದಾರೆ.
ಉದ್ಯೋಗ ನಷ್ಟ ಡಿಸೆಂಬರ್ ಡೇಟಾವು ಸೇವಾ ಆರ್ಥಿಕತೆಯಲ್ಲಿ ಹೊಸ ಉದ್ಯೋಗ ಕಡಿತವನ್ನು ತೋರಿಸಿದೆ. ಆದರೆ ಕುಸಿತದ ದರವು ಸ್ವಲ್ಪಮಟ್ಟಿಗೆ ಮಾತ್ರ. ಸಮೀಕ್ಷೆ ಮಾಡಿದ ಬಹುಪಾಲು ಕಂಪೆನಿಗಳು (ಶೇ 96) ವೇತನದಾರರ ಸಂಖ್ಯೆಯನ್ನು ನವೆಂಬರ್‌ನಿಂದ ಬದಲಾಗದೆ ಬಿಟ್ಟಿದ್ದರೂ ಇತ್ತೀಚಿನ ಡೇಟಾವು ನೀತಿ ನಿರೂಪಕರಿಗೆ ಆತಂಕ ಉಂಟು ಮಾಡುತ್ತದೆ. ಒಂಬತ್ತು ತಿಂಗಳ ಅವಧಿಯ ನಂತರ ಸೆಪ್ಟೆಂಬರ್‌ನಿಂದ ಈ ವಲಯದಲ್ಲಿ ಉದ್ಯೋಗಗಳ ಸಂಖ್ಯೆ ಹೆಚ್ಚಾಯಿತು. 2022ರಲ್ಲಿ ಉತ್ಪಾದನೆಯು ಹೆಚ್ಚಾಗುತ್ತದೆ ಎಂದು ಸೇವಾ ಸಂಸ್ಥೆಗಳು ಸಾಮಾನ್ಯವಾಗಿ ವಿಶ್ವಾಸ ಹೊಂದಿದ್ದವು. ಆದರೆ ಹೊಸ ಕೊವಿಡ್-19 ಅಲೆಗಳ ಆತಂಕ ಮತ್ತು ಬೆಲೆಯ ಒತ್ತಡಗಳು ಆಶಾವಾದಕ್ಕೆ ಸ್ವಲ್ಪಮಟ್ಟಿಗೆ ಅಡ್ಡಿಪಡಿಸಿದವು. ವ್ಯಾಪಾರದ ವಿಶ್ವಾಸವು ಡಿಸೆಂಬರ್‌ನಲ್ಲಿ ಬಲಗೊಂಡಿತು. ಅನಿಶ್ಚಿತತೆಯ ಹೊರತಾಗಿಯೂ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿತು.
ಒಟ್ಟಾರೆಯಾಗಿ, ಭಾರತದಲ್ಲಿ ಖಾಸಗಿ ವಲಯದ ಉತ್ಪಾದನೆಯು ಡಿಸೆಂಬರ್‌ನಲ್ಲಿ ಉತ್ಪಾದನೆಯಲ್ಲಿ ಮತ್ತಷ್ಟು ದೃಢವಾದ ಹೆಚ್ಚಳವನ್ನು ದಾಖಲಿಸಿದೆ. ವಿಸ್ತರಣೆಯ ವೇಗವು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಕಡಿಮೆಯಾಗಿದೆ. ಆದರೂ ಸಂಯೋಜಿತ PMI ಔಟ್‌ಪುಟ್ ಸೂಚ್ಯಂಕವು ನವೆಂಬರ್‌ನಲ್ಲಿ 59.2ರಿಂದ ಡಿಸೆಂಬರ್‌ನಲ್ಲಿ 56.4ಕ್ಕೆ ಕುಸಿಯಿತು. ಡಿಸೆಂಬರ್‌ನಲ್ಲಿ ಐದನೇ ತಿಂಗಳಿಗೆ ಒಟ್ಟು ಹೊಸ ಆರ್ಡರ್‌ಗಳನ್ನು ವಿಸ್ತರಿಸಲಾಗಿದೆ. ಏರಿಕೆ ಗಣನೀಯವಾಗಿದ್ದರೂ ಸೆಪ್ಟೆಂಬರ್‌ನಿಂದ ಇದು ದುರ್ಬಲವಾಗಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಸೇವಾ ಪೂರೈಕೆದಾರರಿಗಿಂತ ತಯಾರಕರು ಮಾರಾಟದಲ್ಲಿ ಬಲವಾದ ಹೆಚ್ಚಳವನ್ನು ಕಂಡಿದ್ದಾರೆ.
ಇದನ್ನೂ ಓದಿ: WPI Inflation: ಸಗಟು ದರ ಸೂಚ್ಯಂಕ ಹಣದುಬ್ಬರ ನವೆಂಬರ್ ತಿಂಗಳಿನಲ್ಲಿ 12 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿ ಶೇ 14.23ಕ್ಕೆ