ಕಮಲಾನಗರದಲ್ಲಿ ಕಟ್ಟಡ ಕುಸಿತ ಪ್ರಕರಣ: 6 ಕುಟುಂಬಗಳಿಗೆ ತಲಾ 1 ಲಕ್ಷ ರೂ ವೈಯಕ್ತಿಕ ಪರಿಹಾರ ವಿತರಿಸಿದ ಡಿ.ವಿ. ಸದಾನಂದ ಗೌಡ
ಟನಾ ಸ್ಥಳಕ್ಕೆ ಸಚಿವ ಗೋಪಾಲಯ್ಯ, ಸಂಸದ ಸದಾನಂದ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಕಟ್ಟಡದಲ್ಲಿ ವಾಸವಿದ್ದ 6 ಕುಟುಂಬಗಳಿಗೆ ತಲಾ 1 ಲಕ್ಷ ರೂನಂತೆ ಸದಾನಂದಗೌಡ ವೈಯಕ್ತಿಕ ಪರಿಹಾರ ವಿತರಿಸಿದ್ದಾರೆ.
ಬೆಂಗಳೂರು: ನಗರದ ಕಮಲಾನಗರದಲ್ಲಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಇಂದು ಘಟನಾ ಸ್ಥಳಕ್ಕೆ ಸಚಿವ ಗೋಪಾಲಯ್ಯ, ಸಂಸದ ಸದಾನಂದ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಗೂ ಕಟ್ಟಡದಲ್ಲಿ ವಾಸವಿದ್ದ 6 ಕುಟುಂಬಗಳಿಗೆ ತಲಾ 1 ಲಕ್ಷ ರೂನಂತೆ ಸದಾನಂದಗೌಡ ವೈಯಕ್ತಿಕ ಪರಿಹಾರ ವಿತರಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಸದ ಡಿ.ವಿ. ಸದಾನಂದ ಗೌಡ, ಮುನ್ನೆಚ್ಚರಿಕೆ ಕ್ರಮವಾಗಿ ಜನರ ಸ್ಥಳಾಂತರ ಮಾಡಲಾಗಿತ್ತು. ಇಲ್ಲದಿದ್ದರೆ ಮತ್ತಷ್ಟು ಅನಾಹುತ ಸಂಭವಿಸುತ್ತಿತ್ತು. ಬಿಬಿಎಂಪಿ ಅಧಿಕಾರಿಗಳು ಕೇವಲ ನೋಟಿಸ್ ಕೊಡುವುದಲ್ಲ. ಒಂದು ರೌಂಡ್ ಇಂತಹ ಕಟ್ಟಡಗಳನ್ನು ಗುರುತಿಸಬೇಕು. ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ಮಾತನಾಡುತ್ತೇವೆ ಎಂದರು.
ಸ್ವತಂತ್ರ ಏಜೆನ್ಸಿಯಿಂದ ತನಿಖೆ ಮಾಡಿಸಬೇಕು ಇನ್ನು ಇದೇ ವೇಳೆ ಸದಾನಂದ ಗೌಡ ಡಿ.ಕೆ.ಶಿವಕುಮಾರ್ ಬಗ್ಗೆ ಸಲೀಂ, ಉಗ್ರಪ್ಪ ಚರ್ಚೆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಸ್ವತಂತ್ರ ಏಜೆನ್ಸಿಯಿಂದ ತನಿಖೆ ಮಾಡಿಸಬೇಕು. ಕಾಂಗ್ರೆಸ್ ಪಕ್ಷ ಈಗಾಗಲೇ ಅಧಃಪತನದತ್ತ ಸಾಗಿದೆ. ಪಕ್ಷದ ಕಚೇರಿಯಲ್ಲಿ ಈ ರೀತಿಯಾಗಿ ಮಾತನಾಡಿದ್ದಾರೆ. ಇದರ ಹಿಂದೆ ಬಲಿಷ್ಠರು ಯಾರಾದರೂ ಇರಲೇಬೇಕಲ್ಲವಾ? ಅದು ಯಾರು, ಏನು ಎಂದು ಡಿಕೆಶಿಯವರೇ ತಿಳಿದುಕೊಳ್ಳಲಿ ಎಂದರು.
ಭಾರಿ ಮಳೆಯಿಂದ ಕಟ್ಟಡದ ಪಾಯ ಕುಸಿದಿದೆ: ಗೌರವ್ ಗುಪ್ತಾ ಕಮಲನಗರದ ಶಂಕರ್ನಾಗ್ ಬಸ್ ನಿಲ್ದಾಣದ ಬಳಿಯ 3 ಅಂತಸ್ತಿನ ಕಟ್ಟಡ ಕುಸಿಯುವ ಹಂತದಲ್ಲಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದು, ಭಾರಿ ಮಳೆಯಿಂದ ಕಟ್ಟಡದ ಪಾಯ ಕುಸಿದಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಅಪಾಯದಂಚಿನಲ್ಲಿರುವ ಮನೆಗಳ ಪಟ್ಟಿ ತಯಾರಿ ಮಾಡಲಾಗಿದೆ. ಬಿಬಿಎಂಪಿ ತಯಾರಿಸಿದ್ದ ಪಟ್ಟಿಯಲ್ಲಿ ಈ ಕಟ್ಟಡವೂ ಇದೆ. ಸದ್ಯ ಮೂರಂತಸ್ತಿನ ಕಟ್ಟಡದಲ್ಲಿದ್ದವರನ್ನು ಖಾಲಿ ಮಾಡಿಸಿದ್ದೇವೆ. ಕಟ್ಟಡ ತೆರವು ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಸಬ್ ಡಿವಿಷನ್ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಲಾಗಿದೆ. ಕಟ್ಟಡ ಸಾಧಾರಣವಾಗಿ ಕುಸಿದರೆ ಯಾವುದೇ ಅಪಾಯವಿಲ್ಲ. ಇಲ್ಲವಾದರೆ ಬೆಳಿಗ್ಗೆ 9ರ ನಂತರ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು. ಕಟ್ಟಡದ ಮಾಲೀಕ ಇರದಿದ್ದರೆ ಸಾರ್ವಜನಿಕ ಹಿತಾಸಕ್ತಿಯನ್ವಯ ಅಧಿಕಾರ ಚಲಾವಣೆ ಮಾಡಿ ಕಟ್ಟಡ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ: ಅಪಾಯದಂಚಿನಲ್ಲಿರುವ ಮನೆ ಮಾಲೀಕರಿಗೆ ನೋಟಿಸ್ ನೀಡಿ: ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಗೋಪಾಲಯ್ಯ ಸೂಚನೆ