ಬೆಂಗಳೂರು, ಫೆಬ್ರವರಿ 10: ಖ್ಯಾತ ಇಂಗ್ಲಿಷ್ ಗಾಯಕ ಎಡ್ ಶೀರನ್ರ (Ed Sheeran) ಚರ್ಚ್ ಸ್ಟ್ರೀಟ್ನಲ್ಲಿನ (Church Street) ಸಂಗೀತ ಕಾರ್ಯಕ್ರಮವನ್ನು ಪೊಲೀಸರು ತಡೆದಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಎಡ್ ಶಿರನ್ರ ಕಾರ್ಯಕ್ರಮವನ್ನು ತಡೆದಿದ್ದಕ್ಕೆ ಕೆಲ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಪೊಲೀಸರಿಗೆ ಬೆಂಬಲವಾಗಿ ನಿಂತಿದ್ದಾರೆ. ಅಷ್ಟಕ್ಕೂ ರವಿವಾರ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದಿದ್ದು ಏನು? ಖ್ಯಾತ ಗಾಯಕ ಎಡ್ ಶೀರನ್ ಸಂಗೀತ ಕಾರ್ಯಕ್ರಮವನ್ನು ಪೊಲೀಸರು ತಡೆದಿದ್ದು ಏಕೆ? ಎಂಬ ಅಸಲಿ ಸತ್ಯ ಬಯಲಾಗಿದೆ.
ಗ್ಯ್ರಾಮಿ ಅವಾರ್ಡ್ ವಿಜೇತ ಎಡ್ ಶೀರನ್ ರವಿವಾರ ಮಧ್ಯಾಹ್ನ ಚರ್ಚ್ ಸ್ಟ್ರೀಟ್ನ ಫುಟ್ಬಾತ್ನಲ್ಲಿ ನಿಂತುಕೊಂಡು ತಮ್ಮ ಸಹ ಕಲಾವಿದರೊಂದಿಗೆ ಏಕಾಏಕಿ ಹಾಡಲು ಆರಂಭಿಸಿದರು. ಇವರು ಹಾಡು ಆರಂಭಿಸುತ್ತಿದ್ದಂತೆಯೇ ಸುತ್ತಮುತ್ತಲಿದ್ದ ಜನರು ಸೇರಲು ಆರಂಭಿಸಿದ್ದರು. ಸ್ಥಳದಲ್ಲಿ 50-100 ಜನರು ಜಮಾಯಿಸಿದ್ದಾರೆ. ಈ ವಿಚಾರ ತಿಳಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಹಾಡು ನಿಲ್ಲಿಸುವಂತೆ ಹೇಳಿದ್ದಾರೆ. ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸುವಂತೆ ಹೇಳಿದ್ದಾರೆ. ಆದ್ರೆ, ಎಡ್ ಶೀರನ್ ಹಾಡು ನಿಲ್ಲಿಸಿಲ್ಲ. ಆಗ ಪೊಲೀಸರು, ಮೈಕ್ ವೈರ್ಗಳನ್ನು ಕಿತ್ತೆಸೆದು ಕಾರ್ಯಕ್ರಮವನ್ನು ತಡೆದಿದ್ದಾರೆ.
ಗಾಯಕ ಎಡ್ ಶೀರನ್ ಚರ್ಚ್ಸ್ಟ್ರೀಟ್ನಲ್ಲಿ ಕಾರ್ಯಕ್ರಮ ಆರಂಭಿಸುವುದಕ್ಕಿಂತ ಮುನ್ನ ಅವರ ಸಹ ಕಲಾವಿದ ಸಂಜಯ್ ಸಿಂಗ್ ಎಂಬುವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಅನುಮತಿ ನೀಡುವಂತೆ ಕೇಳಿದ್ದಾರೆ. ಆದರೆ, ಕಬ್ಬನ್ ಪಾರ್ಕ್ ಪೊಲೀಸರು ಅನುಮತಿ ನೀಡಿಲ್ಲ. ಚರ್ಚ್ ಸ್ಟ್ರೀಟ್ ಜನಜಂಗಳಿಯಿಂದ ಕೂಡಿರುತ್ತದೆ. ಭಾನುವಾರ ಹೆಚ್ಚಿನ ಸಂಖ್ಯೆ ಜನರು ಅಲ್ಲಿ ಸೇರುತ್ತಾರೆ. ಈ ವೇಳೆ ಕಾರ್ಯಕ್ರಮ ನಡೆಸಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುತ್ತದೆ. ನಿಯಂತ್ರಿಸುವುದು ಕಷ್ಟವಾಗುತ್ತದೆ. ತೊಂದರೆಗಳು ಉಂಟಾಗಬಹುದು ಎಂದು ಪೊಲೀಸರು ಅನುಮತಿ ನೀಡಿಲ್ಲ.
ಪೊಲೀಸರು ಅನುಮತಿ ನೀಡದಿದ್ದರೂ ಗಾಯಕ ಎಡ್ ಶೀರನ್ ಚರ್ಚ್ಸ್ಟ್ರೀಟ್ನಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಹೀಗಾಗಿ, ಪೊಲೀಸರು ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಖ್ಯಾತ ಗಾಯಕನ ಸಂಗೀತ ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ
ಬುಕ್ ಮೈ ಶೋ ಬಿಐಇಸಿ ಮಾದಾವರ ಮೈದಾನದಲ್ಲಿ ರವಿವಾರ (ಫೆ.09) ಸಂಜೆ ಎಡ್ ಶೀರನ್ ಅವರ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ಇನ್ನಷ್ಟು ಪ್ರಚಾರ ಸಿಗಲಿ, ಕಾರ್ಯಕ್ರಮದ ಮಾಹಿತಿ ಹೆಚ್ಚು ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಕಾಂಟೆಂಟ್ ಬಿಲ್ಡ್ ಮಾಡಲು ಎಡ್ ಶೀರನ್ ಚರ್ಚ್ಸ್ಟ್ರೀಟ್ನ ಫುಟ್ಪಾತ್ ಮೇಲೆ ಏಕಾಏಕಿ ಹಾಡಲು ಆರಂಭಿಸಿದ್ದರು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಬೆಂಗಳೂರಿನ ಯಾವುದೇ ಪ್ರದೇಶದಲ್ಲಿ ಸಂಗೀತ ಕಾರ್ಯಕ್ರಮ ಅಥವಾ ಯಾವುದೇ ಮನರಂಜನಾ ಕಾರ್ಯಕ್ರಮ ನಡೆಸುವ ಮುನ್ನ ಹಾಗೂ ಚಲನಚಿತ್ರ ಚಿತ್ರೀಕರಣ, ದಾರವಾಹಿ ಚಿತ್ರೀಕರಣ ಮಾಡುವ ಮುನ್ನ ಸ್ಥಳೀಯ ಪೊಲೀಸ್ ಠಾಣೆ, ಸಂಚಾರಿ ಪೊಲೀಸ್ ಠಾಣೆ, ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದ್ದರೆ ಬಿಬಿಎಂಪಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
2024ರ ಫೆಬ್ರವರಿಯಲ್ಲಿ ಚರ್ಚ್ಸ್ಟ್ರೀಟ್ನಲ್ಲಿ ಮಳಯಾಳಂ ಸಿನಿಮಾವೊಂದು ಚಿತ್ರೀಕರಣಗೊಂಡಿತ್ತು. ಈ ವಿಚಾರವನ್ನು ತಿಳಿದ ಬಿಬಿಎಂಪಿ ಚರ್ಚ್ಸ್ಟ್ರೀಟ್ನಲ್ಲಿ ಸಿನಿಮಾ ಚಿತ್ರೀಕರಣಕ್ಕೆ ನಿರ್ಬಂಧ ಹೇರಿತ್ತು. ಈ ವಿಚಾರವಾಗಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚರ್ಚ್ ಸ್ಟ್ರೀಟ್‌ನಲ್ಲಿ ಚಲನಚಿತ್ರಗಳ ಚಿತ್ರೀಕರಣವನ್ನು ನಿರ್ಬಂಧಿಸಲಾಗಿದೆ. ಮತ್ತು ಚಿತ್ರೀಕರಣಕ್ಕೆ ಪೊಲೀಸರು ಅಥವಾ ಕೆಎಫ್‌ಸಿಸಿ ಅನುಮತಿ ನೀಡಲು ಸಾಧ್ಯವಿಲ್ಲ. ಅದೊಂದು ಜನನಿಬಿಡ ರಸ್ತೆ. ಸಿನಿಮಾ ಚಿತ್ರೀಕರಣ ಸಂಚಾರಕ್ಕೆ ಅಡ್ಡಿಯಾಗಲಿದೆ. ಹೀಗಾಗಿ ಚಿತ್ರೀಕರಣಕ್ಕೆ ಬಿಬಿಎಂಪಿ ನಿರ್ಬಂಧಿಸಿದೆ ಎಂದು ಹೇಳಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Mon, 10 February 25