ಬೆಂಗಳೂರು ಏರ್ ಶೋ: ಕಾರ್ಯಕ್ರಮಗಳ ವಿವರ, ಆನ್ಲೈನ್ ಪಾಸ್ ಬುಕಿಂಗ್ ಹೇಗೆ, ದರ ಎಷ್ಟು? ಮಾಹಿತಿ ಇಲ್ಲಿದೆ
ಏರೋ ಇಂಡಿಯಾ 2025 ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದೆ. ಕೊನೆಯ ಎರಡು ದಿನಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ. ವಿವಿಧ ರೀತಿಯ ಪಾಸ್‌ಗಳು ಲಭ್ಯವಿದ್ದು, ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ? ಪಾರ್ಕಿಂಗ್ ಮತ್ತು ಸಾರಿಗೆ ವ್ಯವಸ್ಥೆಗಳು ಹೇಗೆ ಎಂಬಿತ್ಯಾದಿ ವಿವರಗಳು ಇಲ್ಲಿವೆ.

ಬೆಂಗಳೂರು, ಫೆಬ್ರವರಿ 10: ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನ ಸೋಮವಾರ ಆರಂಭವಾಗಿದೆ. ರಕ್ಷಣಾ ಸಚಿವಾಲಯವು ಆಯೋಜಿಸಿರುವ ಈ ದ್ವೈವಾರ್ಷಿಕ ಕಾರ್ಯಕ್ರಮವು ಜಗತ್ತಿನಾದ್ಯಂತದ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದ ಉದ್ಯಮಗಳು, ಉತ್ಸಾಹಿಗಳನ್ನು ಒಂದೆಡೆ ಸೇರುವಂತೆ ಮಾಡುತ್ತದೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯುವ ಏರೋ ಇಂಡಿಯಾದಲ್ಲಿ ಏರ್ ಶೋ ಕೂಡ ಪ್ರಮುಖವಾದ ಆಕರ್ಷಣೆಯಾಗಿದೆ. ವಾಯುಪಡೆಯೂ ಸೇರಿದಂತೆ ಜಾಗತಿಕ ವಿಮಾನಯಾನ ಸಂಸ್ಥೆಗಳು, ರಕ್ಷಣಾ ಸಂಸ್ಥೆಗಳು ವೈಮಾನಿಕ ಪ್ರದರ್ಶನ ನಡೆಸುತ್ತವೆ.
ಏರೋ ಇಂಡಿಯಾ 2025 ಬಗ್ಗೆ ನೀವು ತಿಳಿದಿರಬೇಕಾದ ಮಾಹಿತಿ ಇಲ್ಲಿದೆ.
ಏರೋ ಇಂಡಿಯಾ 2025: ಪ್ರಮುಖ ದಿನಾಂಕಗಳು
ಏರೋ ಇಂಡಿಯಾ 2025 ಕಾರ್ಯಕ್ರಮ ಒಟ್ಟು ಐದು ದಿನ ನಡೆಯಲಿದ್ದು, ಮೊದಲ ಮೂರು ದಿನಗಳು (ಫೆಬ್ರವರಿ 10 ರಿಂದ 12) ಏರೋಸ್ಪೇಸ್ ಉದ್ಯಮಗಳು, ಉದ್ಯಮಿಗಳಿಗೆ ಮೀಸಲಾಗಿರುತ್ತವೆ. ಆದರೆ ಕೊನೆಯ ಎರಡು ದಿನಗಳು (ಫೆಬ್ರವರಿ 13 ಹಾಗೂ 14) ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ.
ಏರೋ ಇಂಡಿಯಾ ಕಾರ್ಯಕ್ರಮದ ವೇಳಾಪಟ್ಟಿ
- ಏರೋ ಇಂಡಿಯಾ 2025 ಎಕ್ಸಿಬಿಷನ್ ಬೆಳಗ್ಗೆ 9:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ.
ಏರೋ ಇಂಡಿಯಾ 2025 ರ ಪಾಸ್ ಬೆಲೆ ಎಷ್ಟು?
- ಬಿಸಿನೆಸ್ ಪಾಸ್ ಬೆಲೆ ಭಾರತೀಯ ನಾಗರಿಕರಿಗೆ 5,000 ರೂ. ಹಾಗೂ ವಿದೇಶಿ ಪ್ರಜೆಗಳಿಗೆ 150 ಯುಎಸ್ ಡಾಲರ್ ಆಗಿದೆ. ADVA ಪಾಸ್ (ಏರ್ ಡಿಸ್ಪ್ಲೇ ವ್ಯೂವಿಂಗ್ ಏರಿಯಾ ಪಾಸ್) ಬೆಲೆ ಭಾರತೀಯ ನಾಗರಿಕರಿಗೆ 1,000 ರೂ. ಮತ್ತು ವಿದೇಶಿ ಪ್ರಜೆಗಳಿಗೆ 50 ಯುಎಸ್ ಡಾಲರ್.
- ಸಾಮಾನ್ಯ ಸಂದರ್ಶಕರ ಪಾಸ್ ಬೆಲೆ ಭಾರತೀಯ ನಾಗರಿಕರಿಗೆ 2,500 ರೂ. ಹಾಗೂ ವಿದೇಶಿ ಪ್ರಜೆಗಳಿಗೆ 50 ಯುಎಸ್ ಡಾಲರ್ ಆಗಿದೆ.
ಪಾಸ್ ಬುಕ್ ಮಾಡುವುದು ಹೇಗೆ?
- ಏರೋ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ (aeroindia.gov.in.) ಭೇಟಿ ನೀಡಿ.
- ‘ಟಿಕೆಟ್ಸ್’ ಸೆಕ್ಷನ್ಗೆ ಹೋಗಿ ಮತ್ತು ವಿಸಿಟರ್ಸ್ ರಿಜಿಸ್ಟ್ರೇಷನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನೀವು ಭಾರತೀಯ ಸಂದರ್ಶಕರೋ ಅಥವಾ ವಿದೇಶಿ ಸಂದರ್ಶಕರೋ ಎಂಬುದನ್ನು ಆಯ್ಕೆಮಾಡಿ.
- ಎಲ್ಲಾ ವಿವರಗಳನ್ನು ಭರ್ತಿ ಮಾಡಿ, ಅವುಗಳನ್ನು ಅನುಮೋದಿಸಿ ಮತ್ತು ಸೈನ್ ಅಪ್ ಮಾಡಿ.
- ನಂತರ ಮತ್ತೆ ಲಾಗಿನ್ ಮಾಡಿ ಮತ್ತು ಯಾವ ರೀತಿಯ ಪಾಸ್ ಬೇಕೆಂಬುದನ್ನು ಆರಿಸಿ (ಬಿಸಿನೆಸ್ ಪಾಸ್, ಜನರಲ್ ಪಬ್ಲಿಕ್ ಪಾಸ್, ಅಥವಾ ADVA (ಏರ್ ಡಿಸ್ಪ್ಲೇ ವ್ಯೂವಿಂಗ್ ಏರಿಯಾ ಪಾಸ್).
- ಅನುಮೋದನೆಯ ನಂತರ ಪಾಸ್ ಡೌನ್‌ಲೋಡ್ ಮಾಡಿ.
ಏರೋ ಇಂಡಿಯಾ 2025 ಸ್ಥಳವನ್ನು ತಲುಪುವುದು ಹೇಗೆ?
- ಈ ಕಾರ್ಯಕ್ರಮ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಇದು ಬೆಂಗಳೂರು ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಸುಲಭವಾಗಿ ತಲುಪಬಹುದಾಗಿದೆ.
- ವಿಮಾನ ನಿಲ್ದಾಣದಿಂದ ಏರ್ ಶೋ ಸ್ಥಳಕ್ಕೆ ಪ್ರಯಾಣದ ಸಮಯ ಸುಮಾರು 40-45 ನಿಮಿಷಗಳು. ಸೀಮಿತ ಪಾರ್ಕಿಂಗ್ ಸ್ಥಳವಿರುವುದರಿಂದ, ಸ್ಥಳವನ್ನು ತಲುಪಲು ಟ್ಯಾಕ್ಸಿ ಸೇವೆಗಳು ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಸೂಕ್ತ.
- ನಿಗದಿತ ಪಾರ್ಕಿಂಗ್ ಪ್ರದೇಶಗಳಿಂದ ಪ್ರದರ್ಶನ ಸ್ಥಳಕ್ಕೆ ಸಂದರ್ಶಕರನ್ನು ಕರೆದೊಯ್ಯಲು ಉಚಿತ ಬಸ್ ಸೇವೆ ಇದೆ.
ಪಾರ್ಕಿಂಗ್, ಭದ್ರತಾ ತಪಾಸಣೆ ಹೇಗೆ?
ಜಿಕೆವಿಕೆ ಮತ್ತು ಜಕ್ಕೂರು ಕ್ಯಾಂಪಸ್‌ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಏರ್ ಶೋ ಸ್ಥಳಕ್ಕೆ ತೆರಳಲು ಉಚಿತ ಬಸ್ ಸೇವೆ ಇದೆ. ವೀಕ್ಷಕರು ಭದ್ರತಾ ತಪಾಸಣೆಗಾಗಿ ಸರ್ಕಾರ ನೀಡಿದ ಮಾನ್ಯವಾದ ಗುರುತಿನ ಚೀಟಿಯನ್ನು ಹೊಂದಿರಬೇಕು.