ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರನ್ನು (Rashtrakavi KuVemPu) ನಿಂದಿಸಿ, ನಾಡಗೀತೆಯನ್ನು ತಿರುಚಿ ಬರೆದಿರುವವರ ವಿರುದ್ಧ ಸರ್ಕಾರ ಕ್ರಮ ಜರುಗಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು (Adichunchanagiri Mutt Shree Dr. Nirmalanandanatha Maha Swamiji) ಪತ್ರ ಬರೆದಿದ್ದರು. ಈ ಹಿನ್ನೆಲೆ ನಿರ್ಮಲಾನಂದನಾಥ ಶ್ರೀಗಳನ್ನ ಶಿಕ್ಷಣ ಸಚಿವ ನಾಗೇಶ್(BC Nagesh) ಭೇಟಿಯಾಗಿದ್ದಾರೆ.
ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಸಚಿವ ನಾಗೇಶ್ ಭೇಟಿ ನೀಡಿದ್ದಾರೆ. ಪಠ್ಯಪರಿಷ್ಕರಣೆ, ಕುವೆಂಪು ಕುರಿತ ವಿಚಾರದ ಬಗ್ಗೆ ನಿರ್ಮಲಾನಂದನಾಥ ಶ್ರೀಗಳಿಗೆ ಸಚಿವ ನಾಗೇಶ್ ವಿವರಣೆ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಹಿನ್ನೆಲೆ ಸಚಿವರು ಭೇಟಿಯಾಗಿ ವಿವರಣೆ ನೀಡಿದ್ದಾರೆ. ರಾಷ್ಟ್ರಕವಿ ಕುವೆಂಪು ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ವಿಷಯಗಳನ್ನು ಹಾಕುತ್ತಿರುವ ಬಗ್ಗೆ ಸೈಬರ್ ಕ್ರೈಂ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸ್ವಾಮೀಜಿ ಪತ್ರ ಬರೆದಿದ್ದರು. ಅಲ್ಲದೆ ಈ ಹಿಂದೆ ಈ ಬಗ್ಗೆ ಮಾಧ್ಯಮ ಹೇಳಿಕೆ ಮೂಲಕ ಕ್ರಮಕ್ಕೆ ಒತ್ತಾಯಿಸಿದ್ದರು. ಇದನ್ನೂ ಓದಿ: Dalit murder: ಬೀರನಕುಪ್ಪದಲ್ಲಿ ದಲಿತ ಗ್ರಾಮಸ್ಥನ ಹತ್ಯೆ: ಸಿಐಡಿ ತನಿಖೆಗೆ ಆಗ್ರಹಿಸಿ, ಕೆಜಿಎಫ್ ಎಸ್ಪಿ ಕಚೇರಿವರೆಗೆ 12 ಕಿಮೀ ಪಾದಯಾತ್ರೆ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಮಾಧ್ಯಮ ಹೇಳಿಕೆ ಪೂರ್ಣ ಪಾಠ ಹೀಗಿದೆ:
ನಮ್ಮ ನಾಡು ಕಂಡ ಅಪ್ರತಿಮ ಕವಿ, ದಾರ್ಶನಿಕ, ಸರ್ವೋದಯ ತತ್ವ ಪ್ರತಿಪಾದಕರಾದ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ಸಾಹಿತ್ಯದ ಮೇರು ಕವಿಗಳು; ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಅವರ ಸಾಹಿತ್ಯ ಸರ್ವರನ್ನೂ ಒಳಗೊಳ್ಳುವ, ಸರ್ವರಹಿತ ಬಯಸುವ ಕ್ರಾಂತದೃಷ್ಟಿಯನ್ನು ಹೊಂದಿದೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಅಸಮಾನತೆಯನ್ನು ಮತ್ತು ಲಿಂಗಭೇದವನ್ನು ನಿವಾರಿಸಿಕೊಂಡು ಈ ನಾಡು “ಸರ್ವಜನಾಂಗದ ಶಾಂತಿಯ ತೋಟ”ವಾಗಬೇಕು ಎಂಬ ಕನಸು ಕಂಡವರು ಅವರು.
ಅವರ ‘ಕಾನೂರು ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಮಹಾಕಾದಂಬರಿಗಳು, ‘ಶೂದ್ರ ತಪಸ್ವಿ’, ‘ಜಲಗಾರ’, ‘ಬೆರಳ್ಗೆ ಕೊರಳ್’ ಮುಂತಾದ ಶ್ರೇಷ್ಠ ನಾಟಕಗಳು, ‘ರಾಮಾಯಣ ದರ್ಶನಂ’ ಮಹಾಕಾವ್ಯ ಹಾಗೂ ಸಾವಿರಾರು ಪದ್ಯಗಳು, ಲೇಖನಗಳ ಮೂಲಕ ಕನ್ನಡ ಸಾಹಿತ್ಯದ ಕ್ಷಿತಿಜವನ್ನು ವಿಸ್ತರಿಸಿದ ಮಹಾಕವಿ ಕುವೆಂಪು. ಇದನ್ನೂ ಓದಿ: ಟಿಕಾಯತ್ ಮೇಲೆ ಮಸಿ ಪ್ರಕರಣ; ಹಲ್ಲೆ ಮಾಡಿದವರ ವಿರುದ್ದ ಕಠಿಣ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ
ಅವರು ತಮ್ಮ ಯೌವನದ ಕಾಲದಲ್ಲಿ ಬರೆದ ‘ಜೈ ಭಾರತ ಜನನಿಯ ತನುಜಾತೆ’ ಕವಿತೆಯು ಕಳೆದ ತೊಂಬತ್ತು ವರ್ಷಗಳಿಂದ ಕನ್ನಡಿಗರ ಹೃದಯದಲ್ಲಿ ನೆಲೆನಿಂತು, ದೇಶಭಕ್ತಿ ಮತ್ತು ನಾಡಪ್ರೇಮವನ್ನು ಉದ್ದೀಪಿಸಿದೆ. ಇದನ್ನು ಮನಗಂಡು ಕರ್ನಾಟಕ ಸರ್ಕಾರವು ‘ಜೈ ಭಾರತ ಜನನಿಯ ತನುಜಾತೆ’ ಗೀತೆಯನ್ನು ನಾಡಗೀತೆಯಾಗಿ ಘೋಷಿಸಿತು. ಅದನ್ನು ನಾಡಗೀತೆಯಾಗಿ ಘೋಷಣೆ ಮಾಡಬೇಕು ಎಂದು ಯಾರೂ ಕೇಳಿರಲಿಲ್ಲ. ಅದು ಸರ್ಕಾರವೇ ತೆಗೆದುಕೊಂಡ ತೀರ್ಮಾನವಾಗಿತ್ತು. ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಯಾಗಿರುವ ಅಧಿಕೃತ ನಾಡಗೀತೆಯನ್ನು ಹಾಡಿ ಕೋಟಿ ಕೋಟಿ ಕನ್ನಡಿಗರು ಸಂಭ್ರಮಿಸಿದ್ದಾರೆ, ಸಂಭ್ರಮಿಸುತ್ತಿದ್ದಾರೆ.
ಆದರೆ ಈಚೆಗೆ ಕೆಲವರು ನಾಡಗೀತೆಯನ್ನು ತಿರುಚಿ ಬರೆದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಸರ್ಕಾರದ ತೀರ್ಮಾನವನ್ನು ಗೇಲಿ ಮಾಡುತ್ತಿರುವಂತಿದೆ. ಅಷ್ಟೇ ಅಲ್ಲ, ಮಹಾಕವಿಗಳೂ ರಾಷ್ಟ್ರಕವಿಗಳೂ ಆಗಿರುವ ಕುವೆಂಪು ಅವರ ಬಗ್ಗೆ ಅತ್ಯಂತ ಕೀಳುಭಾಷೆಯಲ್ಲಿ ಅವಹೇಳನಕಾರಿ ಲೇಖನಗಳನ್ನು ಬರೆದಿದ್ದಾರೆ. ನಾಡಗೀತೆಯನ್ನು ಅವಮಾನಿಸುವುದೆಂದರೆ ರಾಷ್ಟ್ರಗೀತೆಯನ್ನು ಅವಮಾನಿಸಿದಂತೆ; ಹಾಗೂ ನೆಲದ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದನ್ನೂ ಓದಿ: Dalit murder: ಬೀರನಕುಪ್ಪದಲ್ಲಿ ದಲಿತ ಗ್ರಾಮಸ್ಥನ ಹತ್ಯೆ -ಸಿಐಡಿ ತನಿಖೆಗೆ ಆಗ್ರಹಿಸಿ ಕೆಜಿಎಫ್ ಎಸ್ಪಿ ಕಚೇರಿವರೆಗೆ 12 ಕಿಮೀ ಪಾದಯಾತ್ರೆ
ಪ್ರಯುಕ್ತ, ರಾಷ್ಟ್ರಕವಿ ಕುವೆಂಪು ಅವರನ್ನು ಅಸಂಸದೀಯ ಭಾಷೆಯಲ್ಲಿ ನಿಂದಿಸಿ ಲೇಖನ ಬರೆದಿರುವ ಮತ್ತು ನಾಡಗೀತೆಯನ್ನು ತಿರುಚಿ ಬರೆದಿರುವವರ ವಿರುದ್ಧ ಸೈಬರ್ ಕ್ರೈಮ್ ಅಡಿಯಲ್ಲಿ ಕಾನೂನು ಪ್ರಕಾರ ಸರ್ಕಾರವು ಕ್ರಮ ಜರುಗಿಸುತ್ತದೆಂದು ಭಾವಿಸುತ್ತೇವೆ. ಹಾಗೂ ಈ ಮೂಲಕ ಸರ್ಕಾರವು ಕಾನೂನು ಮತ್ತು ವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವವರನ್ನು ಕ್ಷಮಿಸುವುದಿಲ್ಲ ಎಂಬ ಸಂದೇಶ ರವಾನಿಸುತ್ತದೆ ಎಂಬುದು ನಮ್ಮ ಅಭಿಲಾಷೆಯಾಗಿದೆ.
Published On - 8:27 pm, Mon, 30 May 22