ರಂಜಾನ್: ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ ವಿವರ

ರಂಜಾನ್ ಪ್ರಯುಕ್ತ ಬೆಂಗಳೂರಿನ ಸಿಟಿ ಮಾರ್ಕೆಟ್ ಮೇಲ್ಸೇತುವೆಯಿಂದ (ಬಿಜಿಎಸ್ ಮೇಲ್ಸೇತುವೆ) ಟೋಲ್ ಗೇಟ್ ಜಂಕ್ಷನ್ ವರೆಗೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ವಾಹನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳ ವಿವರಕ್ಕೆ ಸಂಬಂಧಿಸಿದ ವಿವರ ಇಲ್ಲಿದೆ.

ರಂಜಾನ್: ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ ವಿವರ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Apr 11, 2024 | 10:03 AM

ಬೆಂಗಳೂರು, ಏಪ್ರಿಲ್ 11: ಮುಸ್ಲಿಮರ ಪವಿತ್ರ ಹಬ್ಬ ಈದ್-ಉಲ್-ಫಿತರ್ (Eid al-Fitr) (ರಂಜಾನ್ ಮಾಸದ ಕೊನೆ) ಆಚರಣೆ ಪ್ರಯುಕ್ತ ಬೆಂಗಳೂರು (Bangalore) ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ (Traffic Restrictions) ಹೇರಲಾಗಿದೆ. ವಾಹನ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗಗಳ ವಿವರಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಸಂಚಾರ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಮೈಸೂರು ರಸ್ತೆಯ ಬಿಬಿ ಜಂಕ್ಷನ್ ಮತ್ತು ಚಾಮರಾಜಪೇಟೆಯ 1ನೇ ಮುಖ್ಯರಸ್ತೆಯ 7ನೇ ಕ್ರಾಸ್‌ನಲ್ಲಿರುವ ಬಿಬಿಎಂಪಿ ಆಟದ ಮೈದಾನದಲ್ಲಿ 25,000 ಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.

ಸಿಟಿ ಮಾರ್ಕೆಟ್ ಮೇಲ್ಸೇತುವೆಯಿಂದ (ಬಿಜಿಎಸ್ ಮೇಲ್ಸೇತುವೆ) ಟೋಲ್ ಗೇಟ್ ಜಂಕ್ಷನ್ ವರೆಗೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ವಾಹನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಟೌನ್ ಹಾಲ್‌ನಿಂದ ಮೈಸೂರು ರಸ್ತೆಯತ್ತ ಸಾಗುವ ವಾಹನಗಳು ಮೇಲ್ಸೇತುವೆಯ ಕೆಳಗೆ ಮುಂದುವರಿದು ಶಿರಸಿ ವೃತ್ತದಲ್ಲಿ ಬಳಿ ಬಲಕ್ಕೆ ತಿರುಗಿ, ನಂತರ ಬಿನ್ನಿ ಮಿಲ್ ಜಂಕ್ಷನ್, ಹುಣಸೆಮರ ಜಂಕ್ಷನ್, ಎಂಸಿ ಸರ್ಕಲ್ ಮತ್ತು ಹೊಸಹಳ್ಳಿ ಸಿಗ್ನಲ್ ಮೂಲಕ ಪ್ರಯಾಣಿಸಿ ವೆಸ್ಟ್ ಆಫ್ ಕಾರ್ಡ್ ರಸ್ತೆ ಮೂಲಕ ಕಿಮ್ಕೋ ಜಂಕ್ಷನ್ ಬಳಿ ಮೈಸೂರು ರಸ್ತೆಗೆ ಸೇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕೆಂಗೇರಿಯಿಂದ ಮಾರುಕಟ್ಟೆ ಕಡೆಗೆ ಸಾಗುವ ವಾಹನಗಳು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಅದೇ ತಿರುವುಗಳನ್ನು ತೆಗೆದುಕೊಂಡು ಸಿರ್ಸಿ ವೃತ್ತದಲ್ಲಿ ಮೈಸೂರು ರಸ್ತೆಯನ್ನು ಸೇರಬಹುದಾಗಿದೆ.

ಈದ್ಗಾ ಮೈದಾನದಲ್ಲಿ ಬಿಗಿ ಭದ್ರತೆ

ಇಂದು ರಾಜ್ಯದ ಎಲ್ಲೆಡೆ ಈದ್-ಉಲ್-ಫಿತರ್ ಹಬ್ಬ ಆಚರಿಸಲಾಗುತ್ತಿದೆ. ಬೆಂಗಳೂರಿನ ವಿವಿಧೆಡೆ ಮುಸ್ಲಿಮರಿಂದ ರಂಜಾನ್ ಆಚರಣೆ ನಡೆಯುತ್ತಿದ್ದು, ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಈದ್ಗಾ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುಮಾರು 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಕಾಲ್​​ ಗರ್ಲ್​ಗಾಗಿ ಕರೆ ಮಾಡಿ ಎಂದು ಫೇಸ್​​ಬುಕ್​ನಲ್ಲಿ ಪತ್ನಿಯ ಫೋಟೊ, ಮೊಬೈಲ್ ನಂಬರ್ ಪೋಸ್ಟ್ ಮಾಡಿದ ವ್ಯಕ್ತಿ!

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ವ್ಯಾಪ್ತಿಯಲ್ಲಿ ಬುಧವಾರವೇ ರಂಜಾನ್ ಹಬ್ಬ ಆಚರಿಸಲಾಗಿದೆ. ಹೀಗಾಗಿ ಆ ವ್ಯಾಪ್ತಿಯಲ್ಲಿ ಬುಧವಾರವೇ ಸರ್ಕಾರಿ ರಜೆ ಘೋಷಣೆಯಾಗಿತ್ತು. ಇಂದು ಎಂದಿನಥೆಯೇ ಕಚೇರಿಗಳು ತೆರೆದಿರಲಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ