ದ್ವಿತೀಯ ಪಿಯುಸಿ ಫಲಿತಾಂಶ: ಮೋಡಿ ಮಾಡಿದ ಆಂಧ್ರದ ಹುಡುಗ, ಹಾಸನದಲ್ಲಿ ಅವಳಿ ಸಹೋದರಿಯರ ಸಾಧನೆ
ಆಂಧ್ರದ ನೆಲ್ಲೂರು ಮೂಲದ ಗಂಧಂ ಗಿರಿ ವರುಣ್ ಸಂದೇಶ್ 600 ಅಂಕಗಳಿಗೆ 588 ಅಂಕಗಳಿಸುವ ಮೂಲಕ 9ನೇ ರ‍್ಯಾಂಕ್ ಪಡೆದಿದ್ದಾರೆ. ಹಾಸನದ ಅವಳಿ ಸಹೋದರಿಯರಾದ ಚುಕ್ಕಿ ಚಂದ್ರ ಹಾಗೂ ಇಬ್ಬನಿ ಚಂದ್ರ 571 ಸಮಾನ ಅಂಕ ಗಳಿಸಿ ಅಂಕಪಟ್ಟಿಯಲ್ಲೂ ಅವಳಿಗಳಾಗಿ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 11: ದ್ವಿತೀಯ ಪಿಯುಸಿ ಪರೀಕ್ಷೆಯ (2nd PU Result) ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಬೆಂಗಳೂರಿನ ರಾಮೋಹಳ್ಳಿಯಲ್ಲಿರುವ ಯೂನಿವರ್ಸಲ್ ಪಿಯು ಕಾಲೇಜಿನ ವಿದ್ಯಾರ್ಥಿ ಆಂಧ್ರ ಪ್ರದೇಶ ಮೂಲದ ಗಂಧಂ ಗಿರಿ ವರುಣ್ ಸಂದೇಶ್ 9ನೇ ರ‍್ಯಾಂಕ್ ಪಡೆದಿದ್ದಾರೆ. ಮತ್ತೊಂದೆಡೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ಅಚ್ಚರಿ ಮೂಡಿಸಿದ್ದ ಹಾಸನದ ಅವಳಿ ಸಹೋದರಿಯರು ದ್ವಿತೀಯ ಪಿಯುಸಿಯಲ್ಲೂ ಮತ್ತೆ ಸಮಾನ ಅಂಕ ಪಡೆಯುವ ಮೂಲಕ ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ.
ಆಂಧ್ರದ ನೆಲ್ಲೂರು ಮೂಲದ ಗಂಧಂ ಗಿರಿ ವರುಣ್ ಸಂದೇಶ್ 600 ಅಂಕಗಳಿಗೆ 588 ಅಂಕಗಳಿಸುವ ಮೂಲಕ 9ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಮೂಲತಃ ಆಂಧ್ರದ ನೆಲ್ಲೂರಿನವರು. ಯೂನಿವರ್ಸಲ್ ಪಿಯು ಕಾಲೇಜಿನ 25 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 12 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಪಾಸಾಗಿದ್ದು, ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣಾಗುವುದರ ಮೂಲಕ ಯೂನಿವರ್ಸಲ್ ಸಂಸ್ಥೆಯು ಶೇ 100ರ ಫಲಿತಾಂಶ ಪಡೆದಿದೆ.
ಅಚ್ಚರಿ ಮೂಡಿಸಿದ ಅವಳಿ ಸಹೋದರಿಯರು
ಹಾಸನದ ಅವಳಿ ಸಹೋದರಿಯರಾದ ಚುಕ್ಕಿ ಚಂದ್ರ ಹಾಗೂ ಇಬ್ಬನಿ ಚಂದ್ರ 571 ಸಮಾನ ಅಂಕ ಗಳಿಸಿ ಅಂಕಪಟ್ಟಿಯಲ್ಲೂ ಅವಳಿಗಳಾಗಿ ಅಚ್ಚರಿ ಮೂಡಿಸಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಉಪ ನಿರ್ದೇಶಕ ವಿನೋದ್ ಚಂದ್ರ ಹಾಗು ಕನ್ನಿಕಾ ದಂಪತಿಗಳ ಮಕ್ಕಳಾದ ಇವರು ಎಸ್ಎಸ್ಎಲ್ಸಿಯಲ್ಲೂ ಸಮಾನ ಅಂಕ ಗಳಿಸಿದ್ದರು. ಇದೀಗ ಎರಡು ವರ್ಷಗಳ ಬಳಿಕ ಮತ್ತೊಂದು ಅಚ್ಚರಿ ಹಾಗೂ ಬೆರಗು ಮೂಡಿಸುವ ಫಲಿತಾಂಶ ಪಡೆದಿದ್ದಾರೆ.
ಇದನ್ನೂ ಓದಿ: ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಕೊನೆ ದಿನಾಂಕ, ಅರ್ಜಿ ಶುಲ್ಕ ಎಷ್ಟು? ಇಲ್ಲಿದೆ ಮಾಹಿತಿ
ಎಸ್ಎಸ್ಎಲ್ಸಿಯಲ್ಲಿ ಈ ಅವಳಿ ಮಕ್ಕಳಿಗೆ 625 ಕ್ಕೆ 620 ಸಮಾನ ಅಂಕ ದೊರೆತಿತ್ತು. ಮಕ್ಕಳ ಸಾಧನೆ ಬಗ್ಗೆ ಪೋಷಕರು ಹಾಗೂ ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಶಿಕ್ಷಣ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ