ಇಂಜಿನಿಯರಿಂಗ್ ಸೀಟು ಬಲು ದುಬಾರಿ; 10-15 % ಶುಲ್ಕ ಏರಿಕೆಗೆ ಖಾಸಗಿ ಕಾಲೇಜುಗಳ ಒಕ್ಕೂಟ ನಿರ್ಧಾರ
ರಾಜ್ಯದಲ್ಲಿ ಕಾಲೇಜುಗಳ ಆರಂಭಕ್ಕೂ ಮೊದಲೇ ಸಂಕಷ್ಟ ಎದುರಾಗಿದೆ. ಇಂಜಿನಿಯರಿಂಗ್ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೆ ವಿದ್ಯಾರ್ಥಿಗಳಿಗೆ ಡಬ್ಬಲ್ ಶಾಕ್ ಸಿಕ್ಕಿದೆ. ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಇಂಜಿನಿಯರಿಂಗ್ ಶುಲ್ಕ ಏರಿಕೆಯ ಬಿಸಿ ಒಂದೊಡೆಯಾದ್ರೆ ಮತ್ತೊಂದೆಡೆ ಖಾಸಗಿ ಕಾಲೇಜುಗಳ ಶುಲ್ಕ ಏರಿಕೆ ಬರೆ ಪೋಷಕರಿಗೆ ಎದುರಾಗಿದೆ.
ಬೆಂಗಳೂರು, ಜೂನ್.11: ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಪರದಡುವ ಸ್ಥಿತಿ ಇದೆ. ಇದರ ನಡುವೆ ಈಗ ವೃತ್ತಿಪರ ಕೋರ್ಸ್ ಪ್ರವೇಶ ಶುಲ್ಕ ಏರಿಕೆಯ ಟೆನ್ಷನ್ ಪೋಷಕರಿಗೆ ಎದುರಾಗಿದೆ. ಸಿಇಟಿ (CET) ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಈ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ (Engineering College) ಸರ್ಕಾರಿ ಕೋಟಾ ಹಾಗೂ ಕಾಮೆಡ್-ಕೆ ಕೋಟಾ ಸೀಟುಗಳ ಪ್ರವೇಶ ಶುಲ್ಕ 10-15 % ಏರಿಕೆಗೆ ಖಾಸಗಿ ಕಾಲೇಜುಗಳ ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿದೆ. ಇದರ ನಡುವೆ ಈಗ ಖಾಸಗಿ ಖಾಲೇಜುಗಳಲ್ಲಿ ಇಂಜಿನಿಯರಿಂಗ್ ಖಾಸಗಿ ಕೋಟಾ ಸೀಟ್ ಗೆ ಭರ್ಜರಿ ಡಿಮ್ಯಾಂಡ್ ಶುರುವಾಗಿದ್ದು ಶುಲ್ಕ ಸುಲಿಗೆಗೆ ಕಾಲೇಜುಗಳು ಮುಂದಾಗಿವೆ.
ಸಿಇಟಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ. ಪರೀಕ್ಷೆ ಬರೆದು ಉತ್ತಮ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ ಸೀಟು ಪಡೆಯಲು ಮುಂದಾಗಿದ್ದಾರೆ. ಅತಿ ಬೇಡಿಕೆಯ ಬ್ರ್ಯಾಂಚ್ ಸೇರುವ ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ ಉತ್ತಮ ರ‍್ಯಾಂಕ್ ಬಾರದ ವಿದ್ಯಾರ್ಥಿಗಳು ಖಾಸಗಿ ಸೀಟ್ ಕೋಟಾದಡಿ ಖಾಸಗಿ ಇಂಜನಿಯರಿಂಗ್ ಪ್ರವೇಶಾತಿಗೆ ಮುಂದಾಗಿದ್ದಾರೆ. ಈಗ ಈ ವಿದ್ಯಾರ್ಥಿಗಳಿಗೆ ಖಾಸಗಿ ಕಾಲೇಜುಗಳು 20% ರಿಂದ 30 % ಶುಲ್ಕ ಸುಲಿಗೆ ಮಾಡಲು ಮುಂದಾಗಿವೆ. ಬೆಂಗಳೂರಿನ ಪ್ರತಿಷ್ಠಿತ ಇಂಜನಿಯರಿಂಗ್ ಕಾಲೇಜಿನಲ್ಲಿ ಸೀಟ್ ಪಡೆಯಲು 6 ರಿಂದ 10 ಲಕ್ಷ ಶುಲ್ಕ ಕಟ್ಟಬೇಕಾದ ಸ್ಥಿತಿ ಪೋಷಕರಿಗೆ ಬಂದಿದೆ. ಇದರ ನಡುವೆಯೂ ಈ ವರ್ಷ ಇಂಜಿನಿಯರಿಂಗ್ ಶುಲ್ಕ 10-15% ಏರಿಕೆಗೆ ಖಾಸಗಿ ಕಾಲೇಜುಗಳ ಸಂಘಟನೆಯಿಂದ ಸರ್ಕಾರಕ್ಕೆ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ: KCET Result 2024: ಕೆಸಿಇಟಿ ಫಲಿತಾಂಶ ಪ್ರಕಟ; ಸೀಟು ಹಂಚಿಕೆ, ಕೌನ್ಸಲಿಂಗ್ ಯಾವಾಗ? ಇಲ್ಲಿದೆ ವಿವರ
ಕಳೆದ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿರುವ ಸರ್ಕಾರಿ ಕೋಟಾದ ಸೀಟುಗಳಿಗೂ ಪ್ರವೇಶಾತಿ ಶುಲ್ಕ ಶೇ.7% ಹೆಚ್ಚಳ ಮಾಡಲಾಗಿತ್ತು. ಸರ್ಕಾರಿ ಕಾಲೇಜುಗಳಲ್ಲಿ 40 ಸಾವಿರ ರೂ ಶುಲ್ಕ ಹೆಚ್ಚಿಸಲಾಗಿತ್ತು. ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ 67 – 68.000 ರೂ, ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ (ಟೈಪ್-1) ಶುಲ್ಕ 69,000 ರೂ, ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ (ಟೈಪ್-2) ಶುಲ್ಕ 76,000 ರೂ, ಡೀಮ್ಡ್ ಮತ್ತು ಖಾಸಗಿ ವಿವಿ ಕಾಲೇಜುಗಳ ಶುಲ್ಕ 1.69.00 ಲಕ್ಷ ರೂ ಮಾಡಲಾಗಿತ್ತು. ಆದರೆ ಇದರ ಹೊರತಾಗಿ ಖಾಸಗಿ ಕೋಟ ಸೀಟ್ ಗಳಿಗೆ ಕಾಲೇಜುಗಳು ಮನಸಿಗೆ ಬಂದಷ್ಟು ಶುಲ್ಕ ಪಡೆಯುತ್ತಿದ್ದು ಪೋಷಕರ ಪರದಾಟಕ್ಕ ಕಾರಣವಾಗಿದೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಸೀಟ್ ಪಡೆಯಲು 6 ರಿಂದ 10 ಲಕ್ಷ ನೀಡಬೇಕಿದೆ.
ಆದರೆ ಈ ಬಗ್ಗೆ ಉನ್ನತ್ತ ಶಿಕ್ಷಣ ಸಚಿವರಾದ ಎಂ ಸಿ ಸುಧಾಕರ್ ಮಾತ್ರ ನಮ್ಮಲ್ಲಿ ಶುಲ್ಕ ನಿಯಂತ್ರಣ ಸಮಿತಿ ಇಲ್ಲ. ಹೀಗಾಗಿ ಈ ಸಮಸ್ಯೆ ಇದೆ. ಇನ್ನು ಈ ವರ್ಷ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾ ಹಾಗೂ ಕಾಮೆಡ್-ಕೆ ಕೋಟಾ ಸೀಟುಗಳ ಪ್ರವೇಶ ಶುಲ್ಕ 10-15 % ಏರಿಕೆಗೆ ಖಾಸಗಿ ಕಾಲೇಜುಗಳ ಒಕ್ಕೂಟ ಒತ್ತಾಯ ಮಾಡಿದೆ. ಚರ್ಚೆ ಮಾಡ್ತೀವಿ ಎಂದು ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ಪಿಯುಸಿ ಬಳಿಕ ಉನ್ನತ್ತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ ಹೆಚ್ಚಾಗಿದೆ. ಇತಂಹ ಸ್ಥಿತಿಯಲ್ಲಿ ಉನ್ನತ್ತ ಶಿಕ್ಷಣ ಪಡೆಯುವ ಕೋರ್ಸ್ ಗಳಿಗೆ ಶುಲ್ಕ ಏರಿಸಿ ಗಗನ ಕುಸುಮ ಮಾಡಿದ್ರೆ ಉನ್ನತ್ತ ಶಿಕ್ಷಣ ಪಡೆಯವುದಕ್ಕೆ ಮತ್ತಷ್ಟು ಕೊಕ್ಕೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಎಚ್ಚೆತ್ತು ಶುಲ್ಕ ಏರಿಕೆಯ ಪ್ರಸ್ತಾವನೆಯ ಕೈಬಿಡಬೇಕಿದೆ. ಖಾಸಗಿ ಕಾಲೇಜುಗಳಿಗೂ ಕಡಿವಾಣ ಹಾಕಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ