ಭಾರೀ ಮಳೆಗೆ ಬೆಂಗಳೂರಿನಲ್ಲಿ ಅವಘಡ; ನೂತನ ಮುಖ್ಯಮಂತ್ರಿಗೆ ಮಾಜಿ ಸಿಎಂ ಬೊಮ್ಮಾಯಿ ಮಹತ್ವದ ಸಲಹೆ
ನಾವು ಬೆಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತಂಡ ರಚಿಸಿದ್ದೆವು. ಈ ತಂಡಗಳಿಗೆ ಚಾಲನೆ ಕೊಟ್ಟು ಕಾರ್ಯಕ್ಕೆ ನಿಯೋಜಿಸಬೇಕು. ಇನ್ನೂ 5 ದಿನ ಮಳೆ ಆಗುತ್ತೆ, ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದ್ದಾರೆ.
ಬೆಂಗಳೂರು: ನೂತನ ಸಿದ್ದರಾಮಯ್ಯ ಸರ್ಕಾರ(Siddaramaiah) ರಚನೆಯಾಗಿ ಎರಡು ದಿನ ಕಳೆದಿದೆ. ಇದರ ನಡುವೆ ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಸಾಲು ಸಾಲು ಅನಾಹುತಗಳು ಸಂಭವಿಸುತ್ತಿವೆ(Bengaluru Rain). ಜನ ಬಿಬಿಎಂಪಿ(BBMP), ರಾಜ್ಯ ಸರ್ಕಾರವನ್ನು ದೂರುತ್ತಿದ್ದಾರೆ(State Government). ಸದ್ಯ ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು(Basavaraj Bommai) ನೂತನ ಸಿಎಂ ಸಿದ್ದರಾಮಯ್ಯನವರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಭಾರಿ ಮಳೆಗೆ ಬೆಂಗಳೂರು ನಗರದ ಹಲವೆಡೆ ಹಾನಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ನಾವು ಬೆಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತಂಡ ರಚಿಸಿದ್ದೆವು. ಈ ತಂಡಗಳಿಗೆ ಚಾಲನೆ ಕೊಟ್ಟು ಕಾರ್ಯಕ್ಕೆ ನಿಯೋಜಿಸಬೇಕು. ಇನ್ನೂ 5 ದಿನ ಮಳೆ ಆಗುತ್ತೆ, ಪರಿಹಾರ ಕ್ರಮ ಕೈಗೊಳ್ಳಬೇಕು. ಮಳೆಗೆ ಬೆಂಗಳೂರು ನಗರದ ಹಲವೆಡೆ ಮರಗಳು ಧರೆಗುರುಳಿವೆ. ಬಿದ್ದ ಮರಗಳನ್ನು ತೆರವುಗೊಳಿಸುವ ಕೆಲಸ ಆಗಿಲ್ಲ. ಪರಿಹಾರ ಕ್ರಮಕ್ಕೆ ಮುಖ್ಯಮಂತ್ರಿಗಳು ಆದ್ಯತೆ ನೀಡಬೇಕು. ಬಿಬಿಎಂಪಿ ಅಧಿಕಾರಿಗಳು ಕೆಲಸ ಮಾಡುವವರು ಮಾಡ್ತಾರೆ, ಮಾಡದಿರುವವರು ಮಾಡಲ್ಲ, ಪ್ಲಾನ್ ಪ್ರಕಾರ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ನೂತನ ಸಿಎಂ ಸಿದ್ದರಾಮಯ್ಯರಿಗೆ ಸಲಹೆ ನೀಡಿದ್ದಾರೆ.
ಇನ್ನು ಇದೇ ವೇಳೆ ಮಳೆಯಿಂದ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿ ಟೆಕ್ಕಿ ಸಾವು ಪ್ರಕರಣ ಸಂಬಂಧ ಮಾತನಾಡಿದ ಬೊಮ್ಮಾಯಿ, ಕೆಲವೇ ಗಂಟೆಗಳ ಮಳೆಗೆ ಸಾವು ಆಗಿರುವುದು ನೋವಿನ ಸಂಗತಿ. ಬಿಬಿಎಂಪಿ ಮುಂಜಾಗ್ರತೆ ಕ್ರಮ ತೆಗೆದುಕೊಂಡಿಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಕೂಡಲೇ ಧಾವಿಸಿ ರಕ್ಷಣೆ ಮಾಡುವ ಕೆಲಸ ಬಿಬಿಎಂಪಿ ಮಾಡಲಿಲ್ಲ. ಬೆಂಗಳೂರಿನಲ್ಲಿ ಹವಾಮಾನ ಇಲಾಖೆ ಕೂಡ ಎಚ್ಚರಿಕೆ ನೀಡಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಗೆ ಮೂವರು ಮೃತಪಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: Dy CM meets former CM: ಹಿರಿಯ ಮುತ್ಸದ್ದಿ ಎಸ್ ಎಂ ಕೃಷ್ಣ ಮನೆಗೆ ತೆರಳಿ ಗೌರವ ಸಲ್ಲಿಸಿದ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಬಿಜೆಪಿ ಸರ್ಕಾರದ ಮೇಲಿನ 40% ಕಮಿಷನ್ ಆರೋಪವನ್ನು ದಾಖಲೆಸಹಿತ ತೋರಿಸಲಿ -ಬೊಮ್ಮಾಯಿ ಸವಾಲ್
ಬಿಜೆಪಿ ಸರ್ಕಾರದ ಮೇಲಿನ 40% ಕಮಿಷನ್ ಆರೋಪವನ್ನು ಕಾಂಗ್ರೆಸ್ ಸರ್ಕಾರ ದಾಖಲೆಸಹಿತ ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲ್ ಹಾಕಿದರು. ಬಿಜೆಪಿ ಅವಧಿಯ ಹಗರಣಗಳ ತನಿಖೆ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ ಗೆ, ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ದಯವಿಟ್ಟು ಎಲ್ಲ ತನಿಖೆ ಮಾಡಲಿ. 40% ಕಮೀಷನ್ ಆರೋಪವನ್ನು ನಮ್ಮ ಮೇಲೆ ಅವರು ಹೊರೆಸಿದ್ದಾರೆ. 40% ಆಗಿದೆ ಅಂತ ಅವರು ಪುರಾವೆ ಸಮೇತ ತೋರಿಸಬೇಕು. ಕಾಂಗ್ರೆಸ್ ಸರ್ಕಾರ 40% ಆರೋಪ ಕುರಿತ ಎಲ್ಲ ದಾಖಲೆ ಕೊಡಲಿ. ನಾವು 40% ಕಮೀಷನ್ ತೆಗೆದುಕೊಂಡಿದ್ದೇವೆ ಎಂಬುದನ್ನು ದಾಖಲೆಸಹಿತ ತೋರಿಸಲಿ. ಈ ಸಂಬಂಧ ನಾನು ಕೂಡ ಆಗ್ರಹ ಮಾಡುತ್ತೇನೆ ಎಂದರು.
ಗುತ್ತಿಗೆದಾರರ ಸಂಘದವರೂ 40% ಕಮೀಷನ್ ಆರೋಪ ಮಾಡಿದ್ದರು. ಈಗ ಅವರ ಸರ್ಕಾರ ಬಂದಿದೆ. 40% ಇಲ್ಲ ಅಂತ ಹೇಳಬಹುದು. ಗುತ್ತಿಗೆದಾರ ಸಂಘದವರು ಇನ್ನು ಮುಂದಿನ ಎಲ್ಲ ಟೆಂಡರ್‌ಗಳಲ್ಲೂ 40% ಕಡಿಮೆ ಹಾಕಲಿ. ಅಂದರೆ ಮಾತ್ರ ನಮ್ಮ ಕಾಲದಲ್ಲಿ 40% ಇತ್ತು ಅಂತ ಆಗುತ್ತದೆ. ಇವತ್ತು ಅಷ್ಟೇ ಮೊತ್ತಕ್ಕೆ ಟೆಂಡರ್ ಹಾಕಿದರೆ, 40% ಈಗಲೂ ಇದೆ ಅಂತ ಆಗುತ್ತದೆ ಎಂದರು.
ಗುತ್ತಿಗೆದಾರರು ಸಂಘದ ಅಧ್ಯಕ್ಷ ಕೆಂಪಣ್ಣ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಇನ್ಮೇಲೆ ಕೆಂಪಣ್ಣ ತಮ್ಮೆಲ್ಲ ಸಂಘದವರಿಗೂ 40% ಕಮ್ಮಿಗೆ ಟೆಂಡರ್ ಹಾಕುವಂತೆ ಹೇಳಬೇಕು. ಕೆಂಪಣ್ಣ ಇದುವರೆಗೆ 40% ದಾಖಲೆ ಕೊಡ್ಲಿಲ್ಲ, ಕೋರ್ಟ್‌ಗೂ ಕೊಡ್ಲಿಲ್ಲ. ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು. ಕಾಂಗ್ರೆಸ್‌ನವರು ಅದರ ಲಾಭ ತೆಗೆದುಕೊಂಡಿದ್ದಾರೆ. ನಮ್ಮ ಕಾಲದ, ಅವರ ಕಾಲದ ಎಲ್ಲವನ್ನೂ ತನಿಖೆ ಮಾಡಲಿ. ಅದರ ಜೊತೆಗೆ ಪಿಎಸ್ಐ ಪ್ರಕರಣವನ್ನೂ ತನಿಖೆ ಮಾಡಲಿ. ಎಲ್ಲ ಪ್ರಕರಣಗಳ ಸತ್ಯ ಹೊರಗೆ ಬರಲಿ. ನಾವು ಅವರ ಕಾಲದ ಹಗರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದೀವಿ ಎಂದರು.
ಇದನ್ನೂ ಓದಿ: G20 Meeting: ಶ್ರೀನಗರದಲ್ಲಿ ಇಂದಿನಿಂದ ಜಿ 20 ದೇಶಗಳ ಪ್ರವಾಸೋದ್ಯಮ ಕಾರ್ಯಪಡೆ ಸಭೆ, ಬಿಗಿ ಭದ್ರತೆ
ಗ್ಯಾರಂಟಿ ಬಗ್ಗೆ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ
ಗ್ಯಾರಂಟಿ ಸ್ಕೀಂ ಬಗ್ಗೆಯೂ ಬಹಳ ಜನ ಹೇಳಿದ್ದಾರೆ. ಗ್ಯಾರಂಟಿ ಬಗ್ಗೆ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ. ಕಾರ್ಯಕರ್ತರು ಜನರ ಬಳಿ ಹೋಗಿ ಹೇಳಿಲ್ಲ. ಅದರ ಬಗ್ಗೆ ಯಾವುದೋ ಬ್ಯಾಂಕ್ ನಿಂದ, ಕಂಪೆನಿಯಿಂದ ಬಂದವರ ರೀತಿ ಹೋಗಿ ಗ್ಯಾರಂಟಿ ಸ್ಕೀಂ ಬಗ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಡಿಸಿ ಆಫೀಸ್ ನಿಂದ ಅಂತ ಕರೆ ಮಾಡಿ ಸುಳ್ಳು ಹೇಳಿದ್ದಾರೆ. ಯಾವ ಡಿಸಿ ಆಫೀಸ್ ಅಂದರೆ, ಡಿಸ್ಟ್ರಿಕ್ಟ್ ಕಾಂಗ್ರೆಸ್ ಆಫೀಸ್ ಅಂತ ಹೇಳಿದ್ದಾರೆ. ಈ ತರಹ ಮೋಸ ಮಾಡಿ ಗ್ಯಾರಂಟಿ ಸ್ಕೀಂ ಬಗ್ಗೆ ಹೇಳಿದ್ದಾರೆ. ಎಲ್ಲವೂ ಮುಂದೆ ಬೆಳಕಿಗೆ ಬರಲಿದೆ ಎಂದರು.
ಲೋಕಸಭಾ ಚುನಾವಣೆ ತಯಾರಿ; ಬಿಜೆಪಿ ಪದಾಧಿಕಾರಿಗಳು ಮತ್ತು ನಾಯಕರಿಂದ ರಾಜ್ಯ ಪ್ರವಾಸ
ನಿನ್ನೆ ಬಿಜೆಪಿ ಆತ್ಮಾವಲೋಕ ಸಭೆ ನಡೆಸಿದ್ದೇವೆ. ಎಲ್ಲ ಜಿಲ್ಲೆಗಳಿಂದ ವರದಿ ತರಿಸಿದ್ದೇವೆ. ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ರೀತಿ ಚುನಾವಣೆ ನಡೆದಿದೆ. ಕೆಲವು ಕಡೆ ಲೋಪದೋಷಗಳಾಗಿದ್ದು, ಸರಿಪಡಿಸಲು ತೀರ್ಮಾನ ಮಾಡಿದ್ದೇವೆ. ಮುಂದೆ ಪಕ್ಷ ಪುನರ್ ಸಂಘಟನೆ, ಲೋಕಸಭೆ ಚುನಾವಣೆ ತಯಾರಿ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ನಾಯಕರು, ಪದಾಧಿಕಾರಿಗಳು ರಾಜ್ಯ ಪ್ರವಾಸ ಮಾಡಲು ತೀರ್ಮಾನಿಸಲಾಗಿದೆ. ಚುನಾವಣೆ ಸೋಲಿಗೆ ಹಲವು ಕಾರಣಗಳನ್ನು ಕಂಡುಕೊಂಡಿದ್ದೇವೆ. ಕೆಲವು ಕಡೆ ಅಭ್ಯರ್ಥಿಗಳು ಕಾರಣ, ಕೆಲವು ಕಡೆ ಸಂಘಟನೆ ಕಾರಣ ಎನ್ನುವುದು ತಿಳಿದು ಬಂದಿದೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ