ಅಬಕಾರಿ ಇಲಾಖೆಯ ಮತ್ತೊಂದು ಭ್ರಷ್ಟಾಚಾರ ಬಯಲು: ಲೋಕಾಯುಕ್ತಕ್ಕೆ ಸಲ್ಲಿಕೆಯಾಯ್ತು ದೂರು

ರಾಜ್ಯದಲ್ಲಿ ಅಬಕಾರಿ ಇಲಾಖೆಯ ಒಂದೊಂದೇ ಕರ್ಮಕಾಂಡಗಳು ಬಯಲಾಗುತ್ತಿದ್ದು, ಇಲಾಖೆಯ ಡೆಪ್ಯೂಟಿ ಕಮಿಷನರ್ ಹಣಕ್ಕಾಗಿ ಕಾನೂನನ್ನು ಗಾಳಿಗೆ ತೂರಿ ಅನಧಿಕೃತವಾಗಿ ಮನಸೋ ಇಚ್ಛೆ ಸಿಎಲ್-7 ಲೈಸೆನ್ಸ್ ನೀಡಿರುವುದು ಬಯಲಾಗಿದೆ. ಅಕ್ರಮವಾಗಿ ಸುಮಾರು 60 ರಷ್ಟು ಪರವಾನಗಿ ಕೊಟ್ಟಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆಲೋಕಾಯುಕ್ತಕ್ಕೆ ದೂರು ದಾಖಲಾಗಿದೆ.

ಅಬಕಾರಿ ಇಲಾಖೆಯ ಮತ್ತೊಂದು ಭ್ರಷ್ಟಾಚಾರ ಬಯಲು: ಲೋಕಾಯುಕ್ತಕ್ಕೆ ಸಲ್ಲಿಕೆಯಾಯ್ತು ದೂರು
ಅಬಕಾರಿ ಇಲಾಖೆಯ ಮತ್ತೊಂದು ಭ್ರಷ್ಟಾಚಾರ ಬಯಲು
Image Credit source: tv9
Edited By:

Updated on: Feb 05, 2026 | 8:06 AM

ಬೆಂಗಳೂರು, ಫೆಬ್ರವರಿ 5: ಅಬಕಾರಿ ಇಲಾಖೆಯ (Excise Department) ಬಿಯುಡಿ-3 ವಿಭಾಗದ ಡೆಪ್ಯುಟಿ ಕಮಿಷನರ್ ಕೆಎಸ್ ಮುರುಳಿ ಮನಸೋ ಇಚ್ಚೆ ಸಿಎಲ್-7 ಪರವಾನಗಿ ನೀಡಿರುವ ಆರೋಪ ಕೇಳಿ ಬಂದಿದೆ. ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್​ಗೆ ನೀಡುವ ಲೈಸೆನ್ಸ್ ಸಿಎಲ್- 7. ನಿಯಮ ಪ್ರಕಾರ ಶಾಲಾ ಆವರಣದಲ್ಲಿ ಅಥವಾ ಶಾಲೆ ಎದುರಿಗೆ ಪರವಾನಗಿ ಕೊಡುವಂತಿಲ್ಲ. ಆದರೆ, ಶಾಲೆ ಎದುರು ಶಾಪ್ ತೆರೆಯಲು ಮುರುಳಿ ಸಿಎಲ್-7 ಲೈಸೆನ್ಸ್ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 30×40 ಜಾಗಕ್ಕೂ ಸಿಎಲ್- 7 ಲೈಸೆನ್ಸ್ ನೀಡಿದ್ದು, ಕಳೆದ ಎರಡು ವರ್ಷದಲ್ಲಿ ಬರೋಬ್ಬರಿ 60 ಸಿಎಲ್-7 ಪರವಾನಗಿ ನೀಡಿದ್ದಾರೆ‌. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ (Lokayukta) ಈಗಾಗಲೇ ದೂರು ಸಲ್ಲಿಕೆಯಾಗಿದೆ.

ಇಡೀ ರಾಜ್ಯದಲ್ಲೇ 24 ತಿಂಗಳ ಅವಧಿಯಲ್ಲಿ ಅತಿಹೆಚ್ಚು ಸಿಎಲ್-7 ಲೈಸೆನ್ಸ್ ನೀಡಿರುವ ಡೆಪ್ಯುಟಿ ಕಮಿಷನರ್ ಎಂಬ ಆರೋಪವೂ ಮುರುಳಿ ಮೇಲಿದೆ. 60 ಸಿಎಲ್-7 ಗಳ ಪೈಕಿ, 3 ಸಿಎಲ್-7 ಗಳಿಗೆ ಲೈಸೆನ್ಸ್ ನೀಡಬಾರದು ಎಂಬ ದೂರುಗಳಿದ್ದರೂ ಪರಿಗಣಿಸಿಲ್ಲ. ಅಚ್ಚರಿಯೆಂದರೆ, ಈ ಹಿಂದೆ ಇದೆ ಮುರುಳಿ ಅವುಗಳನ್ನು ತಿರಸ್ಕರಿಸಿದ್ದರು ಎನ್ನಲಾಗಿದೆ.

ಇನ್ನು ಸಿಎಲ್- 7 ಲೈಸೆನ್ಸ್ ಪಡೆಯಲು ಮಾಲೀಕರು ಸರಿಯಾಗಿ ದಾಖಲೆಯನ್ನು ಕೂಡ ನೀಡಿಲ್ಲ. ಆದರೂ ಮುರಳಿ ಪರವಾನಗಿ ನೀಡಿದ್ದಾರೆ ಎಂಬ ಆರೋಪವಿದೆ.

ಬೆಂಗಳೂರಿನಿಂದ ತುಮಕೂರಿಗೆ ಸದ್ಯದಲ್ಲೇ ಮುರುಳಿ ವರ್ಗಾವಣೆ ಆಗುವ ಸಾಧ್ಯತೆಯಿದ್ದು, ಎಲ್ಲಾ ಲೈಸೆಸ್​​ಗಳನ್ನು ನೀಡಯೇ ಹೋಗಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ ಎಂಬುದು ತಿಳಿದುಬಂದಿದೆ.

ಕಳೆದ ಡಿಸೆಂಬರ್ ವರೆಗೆ ಮಾತ್ರ 60 ಸಿಎಲ್-7 ಲೈಸೆನ್ಸ್ ನೀಡಿದ್ದು ಈ ವರ್ಷ ಜನವರಿಯಲ್ಲಿ 10 ಕ್ಕೂ ಹೆಚ್ಚು ಲೈಸೆನ್ಸ್ ನೀಡಿದ್ದಾರೆ ಎಂದು ದೂರುದಾರ ಬಿಎಸ್ ಗೌಡ ಆರೋಪ ಮಾಡಿದ್ದಾರೆ.

‘ಟಿವಿ9’ ಗ್ರೌಂಡ್ ರಿಪೋರ್ಟ್​​ನಲ್ಲೂ ಬಯಲಾಯ್ತು ಅಕ್ರಮ

ಡೆಪ್ಯುಟಿ ಕಮಿಷನರ್ ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ‘ಟಿವಿ9’ ಗ್ರೌಂಡ್ ರಿಪೋರ್ಟ್ ಮಾಡಿದ್ದು, ಈ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರದ ದೊಂಬರಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ 40 ರಿಂದ 50 ಮೀಟರ್ ದೂರದಲ್ಲಿ ಸಿಎಲ್-7 ಗೆ ಅನುಮತಿ ನೀಡಿದ್ದು ತಿಳಿದು ಬಂದಿದೆ. ನಿಯಮಗಳ ಪ್ರಕಾರ ಶಾಲಾ-ಕಾಲೇಜುಗಳ ಆವರಣದ 100 ಮೀಟರ್ ಒಳಗೆ ಮದ್ಯಮಾರಾಟ ಮಾಡಲು ಅವಕಾಶವಿಲ್ಲ. ಆದರೂ ಲೈಸೆನ್ಸ್ ನೀಡಲಾಗಿದೆ. ಈ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಇದ್ದು, 70 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಇಲಾಖಾ ತನಿಖೆಗೆ ಆದೇಶ: ಆರ್ ಬಿ ತಿಮ್ಮಾಪುರ, ಅಬಕಾರಿ ಸಚಿವ

ಒಟ್ಟಿನಲ್ಲಿ, ಹಣಕ್ಕಾಗಿ ಅಬಕಾರಿ ಇಲಾಖೆ ಈ ಡೆಪ್ಯುಟಿ ಕಮಿಷನರ್ ಲಂಗುಲಗಾಮಿಲ್ಲದೆ ಪರವಾನಗಿ ನೀಡಿದ್ದು, ಈ ಬಗ್ಗೆ ಸರಿಯಾಗಿ ತನಿಖೆಯಾಗಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ