Fact Check ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ, ವೈರಲ್ ಚಿತ್ರ 3 ವರ್ಷ ಹಿಂದಿನದ್ದು

| Updated By: ರಶ್ಮಿ ಕಲ್ಲಕಟ್ಟ

Updated on: Sep 27, 2022 | 2:57 PM

ಮೈಸೂರು ದಸರಾ ಸಂಭ್ರಮದ ಹೊತ್ತಲೇ ಸುಧಾಮೂರ್ತಿಯವರ ಈ ಫೋಟೊ ವೈರಲ್ ಆಗಿದ್ದು, ಈ ಫೋಟೊ ದಸರಾ ಹೊತ್ತಲ್ಲಿ ತೆಗೆದ ಫೋಟೊ ಅಲ್ಲ.ಇದು ಹಳೇ ಫೋಟೊ.

Fact Check ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ, ವೈರಲ್ ಚಿತ್ರ 3 ವರ್ಷ ಹಿಂದಿನದ್ದು
ಸುಧಾಮೂರ್ತಿ ಪ್ರಮೋದಾದೇವಿಗೆ ನಮಸ್ಕರಿಸುತ್ತಿರುವುದು
Follow us on

ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್ (Pramodadevi Wadiyar) ಮುಂದೆ  ಇನ್ಫೋಸಿಸ್  ಮುಖ್ಯಸ್ಥೆ ಸುಧಾಮೂರ್ತಿ (Sudha Murthy) ಮಂಡಿಯೂರಿ ನಮಸ್ಕರಿಸುತ್ತಿರುವ ಫೋಟೊ ಈಗ ವೈರಲ್ ಆಗಿದೆ. ಸುಧಾಮೂರ್ತಿ ರಾಜಮನೆತನದವರ ಮುಂದೆ ಈ ರೀತಿ ತಲೆಬಾಗುತ್ತಿರುವುದು ಸರಿಯೇ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಗುರುಪ್ರಸಾದ್ ಡಿಎನ್ ಅವರು ಅವರು ತಮ್ಮ ಮಗುವಿನ ಹೋಮ್ ವರ್ಕ್ ಶೀಟ್ ಟ್ವೀಟ್ ಮಾಡಿದ್ದು ಅದರಲ್ಲಿ I ____ to the king ಎಂಬ ಪ್ರಶ್ನೆ ಬಗ್ಗೆ ಪ್ರಶ್ನಿಸಿದ್ದಾರೆ. ಇಂತಹ ಪ್ರಜಾಸತ್ತಾಸ್ಮಕವಲ್ಲದ ಬೋಧನೆಗಳ ಬಗ್ಗೆ ಶಾಲೆಗಳು ಸ್ವಲ್ಪ ಜಾಗರೂಕರಾಗಿರಬೇಕು (ಸಣ್ಣ ತಪ್ಪು ಎಂದು ತೋರಬಹುದು).. ಅವು ಮಕ್ಕಳ ಮನಸ್ಸಿನಲ್ಲಿ ತಪ್ಪು ಮೌಲ್ಯಗಳನ್ನು ತುಂಬಬಹುದು ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಎಸ್.ಶ್ಯಾಮ್ ಪ್ರಸಾದ್ ಎಂಬ ಟ್ವೀಟಿಗರು ಸುಧಾಮೂರ್ತಿ ಮೈಸೂರು ರಾಜವಂಶಸ್ಥರ ಮುಂದೆ ತಲೆಬಾಗಿ ನಮಸ್ಕರಿಸುವ ಫೋಟೊವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಶಾಂತರಾಜ್ ಎಂಬವರು ಸುಧಾ ಮೂರ್ತಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಪುಸ್ತಕಗಳು ಅನೇಕ ಮಹಿಳೆಯರಿಗೆ ಪ್ರೇರಣೆಯಾಯಿತು. ರಾಜಮನೆತನಕ್ಕೆ ಆಕೆಯ ಸಾಷ್ಟಾಂಗ ಪ್ರಣಾಮವು ಭಾವನಾತ್ಮಕ ಅಭಿವ್ಯಕ್ತಿಯಾಗಿದೆ.ಅವರು ಮೈಸೂರು ರಾಜಮನೆತನಕ್ಕಿಂತ ಹೆಚ್ಚು ರಾಜಮನೆತನದವರಾಗಿದ್ದಾರೆ ಎಂದಿದ್ದಾರೆ.


ರಾಜ ವಂಶಸ್ಥರಿಗೆ ಇನ್ನೂ ಕೂಡಾ ಇದೇ ರೀತಿ ಗೌರವ ಕೊಡಬೇಕೇ ಎಂದು ಟ್ವಿಟರ್ ನಲ್ಲಿ ಭಾರೀ ಚರ್ಚೆಯಾಗಿದೆ. ಆದಾಗ್ಯೂ ಸುಧಾ ಮೂರ್ತಿ ಅವರ ನಡೆ ಸಮರ್ಥಿಸಿಕೊಂಡ ವರುಣ್ ಎಂಬ ಟ್ವೀಟಿಗರು, ಇದು ನಮ್ಮ ಸಂಸ್ಕೃತಿ. ಕೀಬೋರ್ಡ್ ಕುಟ್ಟುವ ಪತ್ರಕರ್ತರಿಗೆ ಇದು ಅರ್ಥವಾಗಲ್ಲ. ವಯಸ್ಸು, ನಿಲುವು, ಅಂತಸ್ತು ಯಾವುದನ್ನೂ ಪರಿಗಣಿಸದೆ ಎಲ್ಲರೂ ರಾಜಮಾತೆ ಮುಂದೆ ನಮಸ್ಕರಿಸುತ್ತಾರೆ. ಆಕೆಯ ಸಂಸ್ಕೃತಿ ಆಕೆಗೆ ಅದನ್ನು ಕಲಿಸಿದೆ ಎಂದಿದ್ದಾರೆ. ಇನ್ನೊಬ್ಬರು ಇದೇ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿ ಗುಲಾಮಗಿರಿ ನಮ್ಮಲ್ಲಿ ಆಳವಾಗಿ ಬೇರೂರಿದೆ ಎಂದಿದ್ದಾರೆ.

ಅಂದಹಾಗೆ ಮೈಸೂರು ದಸರಾ ಸಂಭ್ರಮದ ಹೊತ್ತಲೇ ಸುಧಾಮೂರ್ತಿಯವರ ಈ ಫೋಟೊ ವೈರಲ್ ಆಗಿದ್ದು, ಈ ಫೋಟೊ ಈಗಿನದಲ್ಲ. ಇದು ಮೂರು ವರ್ಷ ಹಳೇ ಫೋಟೊ

ಫ್ಯಾಕ್ಟ್ ಚೆಕ್

ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮೈಸೂರ್ ಮೀಮ್ಸ್ ಎಂಬ ಟ್ವಿಟರ್ ಹ್ಯಾಂಡಲ್​​ನಲ್ಲಿ ಈ ಫೋಟೋ ಅಪ್ಲೋಡ್ ಆಗಿದೆ. ಶ್ರೇಷ್ಠತೆ ಸರಳತೆಯಲ್ಲಿದೆ. ಮೈಸೂರು ಅರಮನೆಯಲ್ಲಿ ಪ್ರಮೋದಾ ದೇವಿ ಒಡೆಯರ್ ಆಶೀರ್ವಾದ ಪಡೆಯುತ್ತಿರುವ ಸುಧಾಮೂರ್ತಿ ಎಂದು ಈ ಫೋಟೊಗೆ  ಶೀರ್ಷಿಕೆ ನೀಡಲಾಗಿದೆ. 2019 ಜುಲೈ 18ರಂದು ಈ ಫೋಟೊ ಅಪ್ಲೋಡ್ ಆಗಿದೆ.

ಈ ಫೋಟೋ ಬಗ್ಗೆ ಮತ್ತಷ್ಟು ಹುಡುಕಾಡಿದಾಗ ಸ್ಟಾರ್ ಆಫ್ ಮೈಸೂರ್ ವೆಬ್​​ಸೈಟಿನಲ್ಲಿ ಪ್ರಕಟವಾದ ವರದಿಯಲ್ಲಿ ಈ ಚಿತ್ರವಿದೆ. ಈ ಸುದ್ದಿ ಪ್ರಕಾರ ಮೈಸೂರಿನ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಮೈಸೂರು ಅರಮನೆಯ ದರ್ಬಾರ್ ಹಾಲ್‌ನಲ್ಲಿ ಉದ್ಘಾಟಿಸಲಾಗಿದೆ. ಈ ಸಮಾರಂಭದಲ್ಲಿ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಒಂಬತ್ತು ಮಂದಿಗೆ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ ಪಡೆದವರಲ್ಲಿ ಸುಧಾ ಮೂರ್ತಿ ಕೂಡಾ ಒಬ್ಬರು. ಸ್ಟಾರ್ ಆಫ್ ಮೈಸೂರ್ ವರದಿಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಆಶೀರ್ವಾದವನ್ನು ಪಡೆಯುತ್ತಿರುವುದು. ನಟಿ ಬಿ.ಸರೋಜಾದೇವಿಯನ್ನೂ ಚಿತ್ರದಲ್ಲಿ ಕಾಣಬಹುದು ಎಂದು ಸುಧಾಮೂರ್ತಿ ಅವರ ಫೋಟೊಗೆ ಶೀರ್ಷಿಕೆ ನೀಡಲಾಗಿದೆ.

ಏತನ್ಮಧ್ಯೆ ,ಈ  ಬಾರಿಯ ದಸರಾ ಕಾರ್ಯಕ್ರಮಕ್ಕೆ  ಸುಧಾ ಮೂರ್ತಿಯವರು ಮೈಸೂರಿಗೆ ಬಂದಿಲ್ಲ.

 

Published On - 2:56 pm, Tue, 27 September 22