ಮೈಸೂರು ರಾಜವಂಶಸ್ಥರಿಗೆ ನಮಸ್ಕರಿಸಿದ ಸುಧಾಮೂರ್ತಿ; ರಾಜಪ್ರಭುತ್ವ ಕೊನೆಯಾದರೂ ಯಾಕೆ ಹೀಗೆ ಎಂದು ಪ್ರಶ್ನಿಸಿದ ನೆಟ್ಟಿಗರು

ರಾಜ ವಂಶಸ್ಥರಿಗೆ ಇನ್ನೂ ಕೂಡಾ ಇದೇ ರೀತಿ ಗೌರವ ಕೊಡ ಬೇಕೇ ಎಂದು ಟ್ವಿಟರ್​​ನಲ್ಲಿ ಭಾರೀ ಚರ್ಚೆಯಾಗಿದೆ.ಆದಾಗ್ಯೂ ಸುಧಾ ಮೂರ್ತಿ ಅವರ ನಡೆ ಸಮರ್ಥಿಸಿಕೊಂಡ ವರುಣ್ ಎಂಬ ಟ್ವೀಟಿಗರು,ಇದು ನಮ್ಮ ಸಂಸ್ಕೃತಿ....

ಮೈಸೂರು ರಾಜವಂಶಸ್ಥರಿಗೆ ನಮಸ್ಕರಿಸಿದ ಸುಧಾಮೂರ್ತಿ; ರಾಜಪ್ರಭುತ್ವ ಕೊನೆಯಾದರೂ ಯಾಕೆ ಹೀಗೆ ಎಂದು ಪ್ರಶ್ನಿಸಿದ ನೆಟ್ಟಿಗರು
ರಾಜಮಾತೆಗೆ ನಮಸ್ಕರಿಸುತ್ತಿರುವ ಸುಧಾ ಮೂರ್ತಿ
TV9kannada Web Team

| Edited By: Rashmi Kallakatta

Sep 27, 2022 | 1:12 PM

ರಾಜಪ್ರಭುತ್ವ ಕೊನೆಗೊಂಡು ದಶಕಗಳೇ ಕಳೆದರೂ ರಾಜವಂಶಸ್ಥರ ಮುಂದೆ ತಲೆ ಬಾಗಿ ಗೌರವ ಸಲ್ಲಿಸುವ ರೀತಿ ಇನ್ನೂ ಹೋಗಿಲ್ಲ.ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿನ ನೆಟ್ಟಿಗರು ಚರ್ಚೆ ಹುಟ್ಟುಹಾಕಿದ್ದಾರೆ. ಇದೆಲ್ಲವೂ ಆರಂಭವಾಗಿದ್ದು ಗುರುಪ್ರಸಾದ್ ಡಿಎನ್ ಅವರ ಟ್ವೀಟ್​​ನಿಂದ. ಗುರುಪ್ರಸಾದ್ ಅವರು ತಮ್ಮ ಮಗುವಿನ ಹೋಮ್​​ವರ್ಕ್ ಶೀಟ್ ಟ್ವೀಟ್ ಮಾಡಿದ್ದು ಅದರಲ್ಲಿ I ____ to the king ಎಂಬ ಪ್ರಶ್ನೆ ಬಗ್ಗೆ ಪ್ರಶ್ನಿಸಿದ್ದಾರೆ. ಇಂತಹ ಪ್ರಜಾಸತ್ತಾಸ್ಮಕವಲ್ಲದ ಬೋಧನೆಗಳ ಬಗ್ಗೆ ಶಾಲೆಗಳು ಸ್ವಲ್ಪ ಜಾಗರೂಕರಾಗಿರಬೇಕು (ಸಣ್ಣ ತಪ್ಪು ಎಂದು ತೋರಬಹುದು) ಅವು ಮಕ್ಕಳ ಮನಸ್ಸಿನಲ್ಲಿ ತಪ್ಪು ಮೌಲ್ಯಗಳನ್ನು ತುಂಬಬಹುದು ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಎಸ್.ಶ್ಯಾಮ್ ಪ್ರಸಾದ್ ಎಂಬ ಟ್ವೀಟಿಗರು ಸುಧಾಮೂರ್ತಿ (Sudha Murthy) ಮೈಸೂರು ರಾಜವಂಶಸ್ಥರ ಮುಂದೆ ತಲೆಬಾಗಿ ನಮಸ್ಕರಿಸುವ ಫೋಟೊವೊಂದನ್ನು ಟ್ವೀಟ್ ಮಾಡಿದ್ದಾರೆ. ನೋಡಿ,ಸುಧಾ ಮೂರ್ತಿ ಅವರು ಮೈಸೂರು ರಾಜ ಕುಟುಂಬದವರ (Mysore Royal) ಮುಂದೆ ನಮಸ್ಕರಿಸುತ್ತಿರುವುದು. ಇವರು ಎಲ್ಲರಿಗೂ ಮಾದರಿ ಆಗಬೇಕಿತ್ತು ಎಂದು ಟ್ವೀಟಿಗರು ಪ್ರತಿಕ್ರಿಯಿಸಿದ್ದಾರೆ.

ರಾಜ ವಂಶಸ್ಥರಿಗೆ ಇನ್ನೂ ಕೂಡಾ ಇದೇ ರೀತಿ ಗೌರವ ಕೊಡ ಬೇಕೇ ಎಂದು ಟ್ವಿಟರ್​​ನಲ್ಲಿ ಭಾರೀ ಚರ್ಚೆಯಾಗಿದೆ.ಆದಾಗ್ಯೂ ಸುಧಾ ಮೂರ್ತಿ ಅವರ ನಡೆ ಸಮರ್ಥಿಸಿಕೊಂಡ ವರುಣ್ ಎಂಬ ಟ್ವೀಟಿಗರು,ಇದು ನಮ್ಮ ಸಂಸ್ಕೃತಿ. ಕೀಬೋರ್ಡ್ ಕುಟ್ಟುವ ಪತ್ರಕರ್ತರಿಗೆ ಇದು ಅರ್ಥವಾಗಲ್ಲ. ವಯಸ್ಸು, ನಿಲುವು, ಅಂತಸ್ತು ಯಾವುದನ್ನೂ ಪರಿಗಣಿಸದೆ ಎಲ್ಲರೂ ರಾಜಮಾತೆ ಮುಂದೆ ನಮಸ್ಕರಿಸುತ್ತಾರೆ. ಆಕೆಯ ಸಂಸ್ಕೃತಿ ಆಕೆಗೆ ಅದನ್ನು ಕಲಿಸಿದೆ ಎಂದಿದ್ದಾರೆ. ಇನ್ನೊಬ್ಬರು ದಾಸ್ಯ ನಮ್ಮಲ್ಲಿ ಬೇರೂರಿದೆ ಎಂದಿದ್ದಾರೆ.

ದಲಿತ ಕಾರ್ಯಕರ್ತರು ಮೈಸೂರು ಒಡೆಯರ್ ಬಗ್ಗೆ ಯಾಕೆ ಸಿಟ್ಟುಗೊಂಡಿದ್ದಾರೆ ಎಂದು ರಾಮ್ ಭಕ್ತ್ ಎಂಬ ಬಳಕೆದಾರರೊಬ್ಬರು ಕೇಳಿದಾಗ, ನಿಮ್ಮ ಮಾತಿನ ಅರ್ಥವೇನು? ರಾಜರ ಮುಂದೆ ತಲೆ ಬಾಗುವುದು ಸರಿಯೇಎಂದು ವಿನಯ್ ಕೆ.ಎಸ್ ಎಂಬವರು ಪ್ರತಿಕ್ರಿಯಿಸಿದ್ದಾರೆ.

ಅದು ಆಕೆಯ ವೈಯಕ್ತಿಕ ಆಯ್ಕೆ, ಆಕೆಯಲ್ಲಿ ಈ ರೀತಿ ಮಾಡಲು ಹೇಳಲಾಗಿದೆಯೇ ಎಂದು ಸುಧಾಮೂರ್ತಿ ಬಗ್ಗೆ ಟ್ವೀಟಿಗರೊಬ್ಬರು ಕೇಳಿದ್ದಾರೆ. ಹಳೇ ಮೈಸೂರು ಪ್ರಾಂತ್ಯದ ಜನರಿಗೆ ರಾಜಮನೆತನದವರ ಮೇಲೆ ಅತ್ಯಂತ ಗೌರವ ಇದೆ.ರಾಣಿ ಮುಂದೆತಲೆಬಾಗಿ ನಮಸ್ಕರಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ಸುಬ್ಬು ಐಯ್ಯರ್ ಹೇಳಿದ್ದು, ಇನ್ನೊಬ್ಬ ನೆಟ್ಟಿಗರು ಊಳಿಗಮಾನ್ಯ ಗಣ್ಯರು ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada