ಎಲ್ಲ ಕೃಷಿ ಉತ್ಪನ್ನಗಳಿಗೂ ಫಸಲ್ ಬಿಮಾ, ಕನಿಷ್ಠ ಬೆಂಬಲ ಬೆಲೆ ಘೋಷಿಸಲು ರೈತ ಸಂಘ ಆಗ್ರಹ
ಕೃಷಿ ಉತ್ಪನ್ನ, ರಸಗೊಬ್ಬರ, ಕೀಟನಾಶಕ ಹಾಗೂ ಹನಿನೀರಾವರಿ ಉಪಕರಣಗಳ ಮೇಲೆ ಹೆಚ್ಚಿನ ಜಿಎಸ್ಟಿ ವಿಧಿಸಿದ್ದಾರೆ. ಇದನ್ನು ಕಡಿಮೆ ಮಾಡಬೇಕು ಎಂದು ರೈತರು ಆಗ್ರಹಿಸಿದರು.
ಬೆಂಗಳೂರು: ಕರ್ನಾಟಕದ ರೈತರು ಮತ್ತು ಕೃಷಿ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ನಗರದಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕೃಷಿ ಉತ್ಪನ್ನ, ರಸಗೊಬ್ಬರ, ಕೀಟನಾಶಕ ಹಾಗೂ ಹನಿನೀರಾವರಿ ಉಪಕರಣಗಳ ಮೇಲೆ ಹೆಚ್ಚಿನ ಜಿಎಸ್ಟಿ ವಿಧಿಸಿದ್ದಾರೆ. ಇದನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು. ರೈತರಿಗೆ ನೀಡುವ ಕೃಷಿ ಸಾಲದ ನೀತಿ ಬದಲಾಗಬೇಕು. ರೈತರ ಅಗತ್ಯದ ಶೇ 78ರಷ್ಟು ಸಾಲವನ್ನು ಸುಲಭವಾಗಿ ಒದಗಿಸುವಂತೆ ಇರಬೇಕು. ಕಬ್ಬಿನ ಎಫ್ಆರ್ಪಿ ದರವನ್ನು ರೈತರ ಹೊಲದ ದರ ಎಂದು ನಿಗದಿ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸಿ ಶಾಸನಾತ್ಮಕ ಖಾತ್ರಿ ನೀಡುವ ಕಾನೂನು ತರಬೇಕು ಎಂದು ಒತ್ತಾಯಿಸಿದರು.
ಎಲ್ಲ ಕೃಷಿ ಉತ್ಪನ್ನ ಬೆಳೆಗಳಿಗೂ ಫಸಲ್ ಬಿಮಾ ವಿಮೆ ಜಾರಿ ಮಾಡಬೇಕು. ಅತಿವೃಷ್ಟಿ-ಅನಾವೃಷ್ಟಿ, ಅಗ್ನ ಅವಘಡ ಮತ್ತು ಪ್ರವಾಹದಂಥ ವಿಪತ್ತುಗಳ ಸಂದರ್ಭಗಳಲ್ಲಿ ಪರಿಹಾರ ಘೋಷಿಸುವ ಮಾನದಂಡ ಬದಲಾಗಬೇಕಿದೆ. ಕೇಂದ್ರ ಸರ್ಕಾರವು ಕೃಷಿ ಕಾಯ್ದೆಯನ್ನು ರದ್ದುಪಡಿಸಿದಂತೆ ರಾಜ್ಯದಲ್ಲಿಯೂ ಎಪಿಎಂಸಿ ಕಾಯ್ದೆ, ಭೂ ಸುಧಾರಣ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.
ಕರ್ನಾಟಕದಲ್ಲಿಯೂ ರೈತಬಂಧು ಯೋಜನೆಯನ್ನು ಜಾರಿಗೊಳಿಸಬೇಕು. ಪ್ರತಿ ಎಕರೆಗೆ ₹ 10 ಸಾವಿರ ಪ್ರೋತ್ಸಾಹ ಧನ ನೀಡಬೇಕಿದೆ. ಈ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಸಂಜೆಯ ಒಳಗೆ ಸಿಎಂ ಭೇಟಿಗೆ ಅವಕಾಶ ನೀಡಬೇಕೆಂದು ಕೋರಿದ್ದೇವೆ. ಮುಖ್ಯಮಂತ್ರಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮತ್ತೊಂದು ರೀತಿಯ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
20ನೇ ದಿನಕ್ಕೆ ಕಾಲಿಟ್ಟ ಶ್ರೀಗಂಧ ಬೆಳಗಾರರ ಪ್ರತಿಭಟನೆ ಚಿಕ್ಕಮಗಳೂರು: ಹೈಕೋರ್ಟ್ ನಿಗದಿಪಡಿಸಿರುವ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತರೀಕೆರೆ ತಾಲ್ಲೂಕಿನ ಹಳಿಯೂರು ಗ್ರಾಮದಲ್ಲಿ ಶ್ರೀಗಂಧ ಬೆಳಗಾರರು ನಡೆಸುತ್ತಿರುವ ಪ್ರತಿಭಟನೆ ಭಾನುವಾರ 20ನೇ ದಿನಕ್ಕೆ ಕಾಲಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಡೆ ಬಗ್ಗೆ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು. ಕೋರ್ಟ್ ಸೂಚಿಸಿರುವ ಪರಿಹಾರ ನೀಡಲು ಅಧಿಕಾರಿಗಳು ತಡ ಮಾಡುತ್ತಿದ್ದಾರೆ ಎಂದು ರೈತರು ದೂರಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಡೆಯ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು. ಕಳೆದ 20 ದಿನಗಳಿಂದ 22 ರೈತರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಪೋಷಕರಿಗೆ ಬೆಂಬಲ ಸೂಚಿಸಿ ಸ್ಥಳಕ್ಕೆ ಬಂದಿದ್ದ ಮಕ್ಕಳ ಪೈಕಿ ಕೆಲವರು ಇಂದು ಧರಣಿಯ ಸ್ಥಳದಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡು ಗಮನ ಸೆಳೆದರು.
ಇದನ್ನೂ ಓದಿ: ಕೋಲಾರದಲ್ಲಿ ನಷ್ಟ ಅನುಭವಿಸಿದ್ದ ರೈತನ ಕೈ ಹಿಡಿದ ಬೆಳೆ; ನಿರೀಕ್ಷೆಗೂ ಮೀರಿ ಲಾಭ ಪಡೆದು ಹಸನಾದ ಬದುಕು
ಇದನ್ನೂ ಓದಿ: ಮಟ್ಟುಗುಳ್ಳ ಮಾತ್ರ ಬೆಳೆಯುತ್ತಿದ್ದ ಮಟ್ಟುವಿನ ಗದ್ದೆಗಳಲ್ಲಿ ಭರಪೂರ ಕಲ್ಲಂಗಡಿ ಫಸಲು; ರೈತನ ಮೊಗದಲ್ಲಿ ಮಂದಹಾಸ