
ಬೆಂಗಳೂರು, ಏಪ್ರಿಲ್ 25: ರಾಷ್ಟ್ರೀಯ ಜನಗಣತಿ–2027ರ (Caste Sensus) ಕಾರ್ಯಾಚರಣೆಯ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಗಣತಿದಾರರಿಗೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸಂಬಂಧಪಟ್ಟ ನಿವಾಸಿಯ ವಿರುದ್ಧ ಇದೀಗ ಆರ್ಟಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ವಾರ್ಡ್ ಸಂಖ್ಯೆ 43ರಲ್ಲಿ ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಗಣತಿದಾರರಾದ ಶ್ರೀಮತಿ ವೀಣಾ ಅವರು ಏಪ್ರಿಲ್ 20ರಂದು ಆರ್.ಟಿ. ನಗರದ ಸುಲ್ತಾನಪಾಳ್ಯದ ಪೇರಿ ಮೊನಾರ್ಕ್ ಅಪಾರ್ಟ್‌ಮೆಂಟ್‌ಗೆ ಮಾಹಿತಿ ಸಂಗ್ರಹಿಸಲು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ನಿವಾಸಿಯೊಬ್ಬರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಈ ಕುರಿತು ಏಪ್ರಿಲ್ 25ರಂದು ಮೇಲ್ವಿಚಾರಕರಾದ ಶ್ರೀಮತಿ ರಶ್ಮಿ ಆರ್ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕೇಳಿದಾಗ, ಆ ನಿವಾಸಿಯು ಗಣತಿ ಕಾರ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಮಹಿಳಾ ಸಿಬ್ಬಂದಿಯೊಂದಿಗೆ ಅತ್ಯಂತ ಅಸಭ್ಯವಾಗಿ ವರ್ತಿಸಿ ನಿಂದಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜನಗಣತಿಗೆ 6 ಸಾವಿರ ಸರ್ಕಾರಿ ನೌಕಕರು ಗೈರು: ಕೋಲಾರದಲ್ಲೂ 6 ತಹಶೀಲ್ದಾರ್ಗೆ ನೋಟಿಸ್
ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಜನಗಣತಿ ಅಧಿಕಾರಿ ಡಾ. ಲೋಕೇಶ್ ಅವರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಯ ವಿರುದ್ಧ ಜನಗಣತಿ ಕಾಯ್ದೆ 1948ರ ಸೆಕ್ಷನ್ 11(1) ಹಾಗೂ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (BNS) ಕಲಂ 223 ಮತ್ತು 79ರ ಅಡಿಯಲ್ಲಿ ಕ್ರಮಕೈಗೊಳ್ಳಲಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಜನಗಣತಿ ರಾಷ್ಟ್ರದ ಪ್ರಮುಖ ಕಾರ್ಯವಾಗಿದ್ದು, ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಅಡ್ಡಿಪಡಿಸುವುದು ಕಾನೂನುಬದ್ಧ ಅಪರಾಧವಾಗಿದೆ. ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಮತ್ತು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು, ಎಂದು ಅವರು ತಿಳಿಸಿದ್ದಾರೆ.
ಇನ್ನು ಸಾರ್ವಜನಿಕರಿಗೂ ಆಯುಕ್ತರು ಮನವಿ ಮಾಡಿದ್ದು, ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ನಿಖರ ಮಾಹಿತಿ ನೀಡಿ ಸಹಕರಿಸುವುದು ಅವರ ಕಾನೂನುಬದ್ಧ ಕರ್ತವ್ಯವಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ರಾಷ್ಟ್ರದ ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.