ಬೆಂಗಳೂರಿನ ವಿನಾಯಕ ಚಿತ್ರಮಂದಿರ ಬಳಿ ಅಗ್ನಿ ಅವಘಡ, 8 ಮನೆಗಳು ಬೆಂಕಿಗಾಹುತಿ
fire breaks out at Bengaluru: ಬೆಂಗಳೂರಿನ ಚಾಮರಾಜಪೇಟೆಯ ಆನಂದಪುರ ಸಮೀಪದ ವಿನಾಯಕ ಚಿತ್ರಮಂದಿರ ಬಳಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಗೋದಾಮು ಹಾಗೂ 8 ಶೀಟ್ ಮನೆಗಳು ಬೆಂಕಿಗಾಹುತಿಯಾಗಿವೆ. ಇನ್ನು ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು, (ಸೆಪ್ಟೆಂಬರ್ 18): ಬೆಂಗಳೂರಿನ ವಿನಾಯಕ ಚಿತ್ರಮಂದಿರ(vinayaka theater) ಬಳಿ ಇರುವ ಗೋದಾಮಿನಲ್ಲಿ ಅಗ್ನಿ(Fire) ಅವಘಡ ಸಂಭವಿಸಿದ್ದು, ಗೋದಾಮು ಹಾಗೂ 8 ಶೀಟ್ ಮನೆಗಳು ಬೆಂಕಿಗಾಹುತಿಯಾಗಿವೆ. ಚಾಮರಾಜಪೇಟೆಯ ಆನಂದಪುರ ಸಮೀಪ ಈ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರಿಗೆ ಗಾಯಗಳಾಗಿವೆ. 2 ಸಿಲಿಂಡರ್ಗಳು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಗೋದಾಮಿನಲ್ಲಿ ಎರಡು ಸಿಲಿಂಡರ್ಗಳು ಸ್ಫೋಟಗೊಂಡು ಅಗ್ನಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಗ್ನಿ ಅವಘಡದಲ್ಲಿ ಗಾಯೊಂಡಿರುವ ಓರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ಇನ್ನು ಈ ಅಗ್ನಿ ಅವಘಡದ ಬಗ್ಗೆ ಪ್ರತ್ಯಕ್ಷದರ್ಶಿ ಸೈಯ್ಯದ್ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಸಾಕೆಟ್ ಬೋರ್ಡ್ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ ಮಹಿಳೆಯರು ಬೆಂಕಿ ಹೊತ್ತಿದ್ದ ಬಗ್ಗೆ ಮನೆಯಿಂದ ಹೊರಗೆ ಓಡಿ ಬಂದು ನನಗೆ ಮಾಹಿತಿ ನೀಡಿದರು. ಅಷ್ಟರಲ್ಲಿ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟದ ಜೊತೆ ಬೆಂಕಿ ಹರಡಿತ್ತು. ತಕ್ಷಣ ಅಗ್ನಿಶಾಮಕ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಎಲ್ಲರೂ ಹೊರಗೆ ಓಡಿ ಬಂದಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:23 pm, Mon, 18 September 23