ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ 120ಕ್ಕೂ ಹೆಚ್ಚು ಸ್ಟ್ರೀಟ್ ಲೈಟ್ಸ್ ನಾಪತ್ತೆ! ಕಳ್ಳರ ಕಾಟಕ್ಕೆ ಜನ ಕಂಗಾಲು

ಬೆಂಗಳೂರಿನ ಪ್ರಸಿದ್ಧ ಶಾಪಿಂಗ್ ಅಡ್ಡೆ ಬಸವನಗುಡಿಯ ಗಾಂಧಿ ಬಜಾರ್ ರಸ್ತೆ ಕಳ್ಳರ ಕಾಟದಿಂದಾಗಿ ಸಂಪೂರ್ಣ ಕತ್ತಲೆಯಲ್ಲಿ ಮುಳುಗಿದೆ. ಕಿಲಾಡಿ ಕಳ್ಳರು ವಿದ್ಯುತ್ ಕಂಬಗಳಲ್ಲಿದ್ದ ಕಾಪರ್ ವೈರ್ ಹಾಗೂ ಕಂಟ್ರೋಲರ್‌ಗಳನ್ನು ಕದ್ದಿದ್ದರಿಂದ 120ಕ್ಕೂ ಹೆಚ್ಚು ಬೀದಿ ದೀಪಗಳು ಬಂದ್ ಆಗಿವೆ. ರಸ್ತೆಯಲ್ಲಿ ಅಪಾಯಕಾರಿ ಲೈವ್ ವೈರ್‌ಗಳು ಜೋಲಾಡುತ್ತಿದ್ದು, ಮಹಿಳೆಯರು ಮತ್ತು ಮಕ್ಕಳು ಸಂಜೆ ವೇಳೆ ಇಲ್ಲಿಗೆ ಬರಲು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ 120ಕ್ಕೂ ಹೆಚ್ಚು ಸ್ಟ್ರೀಟ್ ಲೈಟ್ಸ್ ನಾಪತ್ತೆ! ಕಳ್ಳರ ಕಾಟಕ್ಕೆ ಜನ ಕಂಗಾಲು
ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ 120ಕ್ಕೂ ಹೆಚ್ಚು ಸ್ಟ್ರೀಟ್ ಲೈಟ್ಸ್ ನಾಪತ್ತೆ!
Image Credit source: The Hindu
Edited By:

Updated on: Jun 12, 2026 | 10:11 AM

ಬೆಂಗಳೂರು, ಜೂನ್ 12: ಗಾಂಧಿ ಬಜಾರ್​ನಲ್ಲಿ (Gandhibazar) ಹಬ್ಬ ಹರಿದಿನಗಳಿರಲಿ ಅಥವಾ ವೀಕೆಂಡ್ ಇರಲಿ, ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸುತ್ತಾರೆ. ಆದರೆ, ಕಳೆದ ಕೆಲವು ದಿನಗಳಿಂದ ಸಂಜೆಯಾಗುತ್ತಿದ್ದಂತೆ ಇಲ್ಲಿಗೆ ಬರಲು ಮಹಿಳೆಯರು ಮತ್ತು ಮಕ್ಕಳು ತೀವ್ರ ಭಯಪಡುತ್ತಿದ್ದಾರೆ. ಇದಕ್ಕೆ ಕಾರಣ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಬಸವನಗುಡಿಯ ಗಾಂಧಿ ಬಜಾರ್ ರಸ್ತೆ ಈಗ ಸಂಪೂರ್ಣ ಕತ್ತಲೆಯಲ್ಲಿ ಮುಳುಗಿದೆ.

ಮುಖ್ಯಾಂಶಗಳು

  • ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ ಕಳ್ಳರ ಕಾಟದಿಂದ ಬೀದಿ ದೀಪಗಳು ಬಂದ್ ಆಗಿವೆ.
  • ಒಟ್ಟು ಇನ್ನೂರು ಕಂಬಗಳ ಪೈಕಿ ನೂರಪ್ಪತ್ತಕ್ಕೂ ಹೆಚ್ಚು ಲೈಟ್‌ಗಳು ಉರಿಯುತ್ತಿಲ್ಲ.
  • ಅಪಾಯಕಾರಿ ಲೈವ್ ವಿದ್ಯುತ್ ವೈರ್‌ಗಳು ಜೋಲಾಡುತ್ತಿದ್ದು ಸಾರ್ವಜನಿಕರಲ್ಲಿ ತೀವ್ರ ಪ್ರಾಣಭೀತಿ ಎದುರಾಗಿದೆ.

200 ವಿದ್ಯುತ್ ಕಂಬಗಳು; 120ಕ್ಕೂ ಹೆಚ್ಚು ಲೈಟ್‌ಗಳು ಬಂದ್!

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗಾಂಧಿ ಬಜಾರ್‌ನಲ್ಲಿ ಇತ್ತೀಚೆಗಷ್ಟೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ರಸ್ತೆ, ಸುಸಜ್ಜಿತ ಫುಟ್‌ಪಾತ್ ಹಾಗೂ ಆಕರ್ಷಕ ಎಲ್‌ಇಡಿ (LED) ಸ್ಟ್ರೀಟ್ ಲೈಟ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕಿಲಾಡಿ ಕಳ್ಳರ ಕಾಟದಿಂದಾಗಿ ಕಳೆದ ಒಂದು ತಿಂಗಳಿನಿಂದ ಇಲ್ಲಿನ ಬೀದಿ ದೀಪಗಳು ಆನ್ ಆಗುತ್ತಲೇ ಇಲ್ಲ.

ಗಾಂಧಿ ಬಜಾರ್‌ನ ರಾಮಕೃಷ್ಣ ಆಶ್ರಮ ಸರ್ಕಲ್‌ನಿಂದ ಅಡ್ಯಾರ್ ಆನಂದ ಭವನ್ ಹೋಟೆಲ್‌ವರೆಗೆ ಸುಮಾರು 200ಕ್ಕೂ ಹೆಚ್ಚು ಎಲೆಕ್ಟ್ರಿಕ್ ಪೋಲ್‌ಗಳಿವೆ. ಆದರೆ ಕಳ್ಳರು ಇವುಗಳಲ್ಲಿರುವ ಕಬ್ಬಿಣದ ಕ್ಯಾಪ್, ಲೈಟಿಂಗ್ಸ್, ಫ್ಯೂಸ್ ಬಾಕ್ಸ್ ಒಳಗಿರುವ ಕಾಪರ್ ವೈರ್ ಮತ್ತು ಎಲ್‌ಪಿ ಬಾಕ್ಸ್ ಒಳಗಿನ ಕಂಟ್ರೋಲರ್‌ಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಪರಿಣಾಮವಾಗಿ 120ಕ್ಕೂ ಹೆಚ್ಚು ಕಂಬಗಳ ದೀಪಗಳು ಉರಿಯುತ್ತಿಲ್ಲ ಎಂದು ಹೆರಿಟೇಜ್ ಬಸವನಗುಡಿ ಅಸೋಸಿಯೇಷನ್ ಸೆಕ್ರೆಟರಿ ಗುರುಪ್ರಸಾದ್ ಹಾಗೂ ಸ್ಥಳೀಯ ವ್ಯಾಪಾರಿ ರಾಮಕೃಷ್ಣ ಅಸಮಾಧಾನ ಹೊರಹಾಕಿದ್ದಾರೆ.

ಪ್ರಾಣಕ್ಕೆ ಕುತ್ತು ತರುತ್ತವೆಯೇ ಜೋಲಾಡುತ್ತಿರುವ ವೈರ್‌ಗಳು?

ಬೀದಿ ದೀಪಗಳ ಕಳ್ಳತನದ ಪ್ರಕ್ರಿಯೆಯಲ್ಲಿ ಕಿಲಾಡಿ ಕಳ್ಳರು ವಿದ್ಯುತ್ ವೈರ್‌ಗಳನ್ನು ಎಲ್ಲೆಂದರಲ್ಲಿ ಕಟ್‌ ಮಾಡಿ ಹಾಕಿದ್ದಾರೆ. ಇದರಿಂದಾಗಿ ರಸ್ತೆಯ ಬದಿಯಲ್ಲಿ, ಸಾರ್ವಜನಿಕರು ಓಡಾಡುವ ಜಾಗದಲ್ಲೇ ಲೈವ್ ವಿದ್ಯುತ್ ಕೇಬಲ್‌ಗಳು ಅಪಾಯಕಾರಿಯಾಗಿ ಜೋಲಾಡುತ್ತಿವೆ. ಪ್ರತಿದಿನ ಗಾಂಧಿ ಬಜಾರ್‌ಗೆ ಮಕ್ಕಳು, ಹಿರಿಯರು ಬರುತ್ತಾರೆ. ಚೂರು ಯಾಮಾರಿದ್ರೂ ಈ ಮುಕ್ತ ವೈರ್‌ಗಳಿಂದ ಅಮಾಯಕರ ಪ್ರಾಣ ಹೋಗುವ ಭೀತಿ ಇದೆ ಎಂದು ಸ್ಥಳೀಯ ಬ್ಯಾಗ್ ವ್ಯಾಪಾರಿ ಪಳನಿ ಆತಂಕ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ

ಸಂಜೆ 6 ದಾಟುತ್ತಿದ್ದಂತೆ ಇಡೀ ಏರಿಯಾ ಕತ್ತಲೆಯ ಕೂಪವಾಗುತ್ತಿದ್ದು, ಒಂಟಿಯಾಗಿ ಓಡಾಡಲು ಮಹಿಳೆಯರು ಭಯಪಡುತ್ತಿದ್ದಾರೆ. ಕತ್ತಲೆಯ ಲಾಭ ಪಡೆದು ಮೊಬೈಲ್ ಸ್ನ್ಯಾಚಿಂಗ್ ಅಥವಾ ಸರಗಳ್ಳತನ ನಡೆಯಬಹುದು ಎನ್ನುವುದು ಸ್ಥಳೀಯರ ಆತಂಕ. ಈ ಬಗ್ಗೆ ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ ದುಡ್ಡು ಕೊಟ್ರೆ ಸಿಗುತ್ತೆ SSLC, PUC, ಡಿಗ್ರಿ ನಕಲಿ ಅಂಕ ಪಟ್ಟಿ! ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ಜಾಲ ಪತ್ತೆ

ತೆರಿಗೆದಾರರ ಕೋಟ್ಯಂತರ ರೂಪಾಯಿ ಹಣದಲ್ಲಿ ನಿರ್ಮಿಸಲಾದ ಸಾರ್ವಜನಿಕ ಆಸ್ತಿ ಕಳ್ಳರ ಪಾಲಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಕಣ್ಣು ಮುಚ್ಚಿ ಕುಳಿತಿರುವುದು ದುರಂತವೇ ಸರಿ. ಪೊಲೀಸರು ಈ ಭಾಗದಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕಿದೆ ಮತ್ತು ಅಧಿಕಾರಿಗಳು ತಕ್ಷಣ ಲೈಟ್‌ಗಳನ್ನು ದುರಸ್ತಿ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us