ಬೆಂಗಳೂರು: ಪ್ರತಿವರ್ಷ ಸಂಕ್ರಾಂತಿಯಂದು ನಗರದ ಗುಹಾಂತರ ದೇಗುಲದಲ್ಲಿ ನೆಲೆಸಿರುವ ಗವಿಗಂಗಾಧರನಿಗೆ ನಮಿಸಿ ಪಥ ಬದಲಿಸಲಿರುವ ಸೂರ್ಯದೇವನ ಅದ್ಬುತ ಚಮತ್ಕಾರವನ್ನ ನೋಡಲು ಜನರು ಕಾದಿದ್ದಾರೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಾವಣೆ ಮಾಡಲಿರುವ ಸೂರ್ಯನು ಪಥ ಬದಲಾವಣೆಗೂ ಮುನ್ನ ಶಿವಲಿಂಗವನ್ನ ಸ್ಪರ್ಶಿಸಿ ನಂತರ ಪಥ ಬದಲಿಸಲಿದ್ದಾನೆ. ಈ ಬಾರಿ ಸಂಜೆ 5.20 ರಿಂದ 5.28ರ ಸಮಯದಲ್ಲಿ ಒಟ್ಟು 8 ನಿಮಿಷದ ಒಳಗೆ ಶಿವನನ್ನ ಸ್ಪರ್ಶಿಸುವ ಮೂಲಕ ಪೂಜೆ ಸಲ್ಲಿಸಲಿದ್ದಾನೆ.
ಸೂರ್ಯದೇವ ಶಿವನನ್ನ ಸ್ಪರ್ಶಿಸುವ ವೇಳೆ ದೇವಸ್ಥಾನದ ಒಳಗೆ ಯಾರಿಗೂ ಪ್ರವೇಶವಿರುವುದಿಲ್ಲ. ಹಾಗಾಗಿ ದೇಗುಲದ ಆಡಳಿತ ಮಂಡಳಿಯಿಂದ ದೇವಸ್ಥಾನದ ಹೊರಭಾಗದಲ್ಲಿ ಎಲ್ಇಡಿ ಸ್ಕ್ರೀನ್ ಅಳವಡಿಕೆ ಮಾಡುವ ಮುಖಾಂತರ ಭಕ್ತಾಧಿಗಳು ಹೊರಭಾಗದಲ್ಲಿಯೇ ನಿಂತು ಸೂರ್ಯ ಶಿವನನ್ನ ನಮಿಸುವ ದೃಶ್ಯವನ್ನ ಕಣ್ತುಂಬಿಕೊಳ್ಳಬಹುದಾಗಿದೆ. ದೇವರಿಗೆ ವಿಶೇಷವಾಗಿ ಬೆಳಿಗ್ಗೆಯಿಂದ ಕ್ಷೀರಾಭಿಷೇಕ ನಡೆಯುತ್ತಿದ್ದು ಸೂರ್ಯ ಶಿವನನ್ನ ಸ್ಪರ್ಶಿಸಿದ ನಂತರ ಶಿವನಿಗೆ ಮತ್ತೆ ಅಭಿಷೇಕ ಮಾಡಿ ಅಲಂಕಾರ ಮಾಡಿ ಸಂಜೆ 6 ಗಂಟೆಯ ನಂತರ ದೇವರ ದರ್ಶನಕ್ಕೆ ಭಕ್ತರಿಗೆ ಅನುವು ನೀಡಲಾಗಿದೆ.
ಶ್ರೀರಂಗಪಟ್ಟಣ: ದಕ್ಷಿಣ ಕಾಶಿ ಚಂದ್ರಮೌಳೇಶ್ವರನಿಗೆ ಪ್ರಥಮ ಸೂರ್ಯ ರಶ್ಮಿ ಸ್ಪರ್ಶ
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ದೇಗುಲದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ದಕ್ಷಿಣ ಕಾಶಿ ಚಂದ್ರಮೌಳೇಶ್ವರನಿಗೆ ಪ್ರಥಮ ಸೂರ್ಯ ರಶ್ಮಿ ಸ್ಪರ್ಶಿಸುತ್ತದೆ. ಈ ವರ್ಷವು ಕೂಡ ಬೆಳಗ್ಗೆ 7.13ಕ್ಕೆ ಶಿವಲಿಂಗದ ಮೇಲೆ ಮೊದಲ ಸೂರ್ಯ ರಶ್ಮಿ ಸ್ಪರ್ಶಿಸಿದೆ. ಸೂರ್ಯ ರಶ್ಮಿ ಸ್ಪರ್ಶದ ಬಳಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ನೇರವೇರಿದೆ.
ಇದನ್ನೂ ಓದಿ:Makar Sankranti 2023: ಮಕರ ಸಂಕ್ರಾಂತಿಗೆ ಜೋರಾದ ಖರೀದಿ ಭರಾಟೆ, ಮಾರುಕಟ್ಟೆಗಳಲ್ಲಿ ಜನವೋ ಜನ
ಕೂಡಲಸಂಗಮದಲ್ಲಿ ಸಂಕ್ರಾಂತಿ ಸಂಭ್ರಮ; ನದಿಯಲ್ಲಿ ಸಹಸ್ರಾರು ಭಕ್ತರ ಪುಣ್ಯಸ್ನಾನ
ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ ಚಳಿಯನ್ನು ಲೆಕ್ಕಿಸದೆ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಯಲ್ಲಿ ಸಹಸ್ರಾರು ಭಕ್ತರು ಪುಣ್ಯಸ್ನಾನ ಮಾಡಿ ತೀರದಲ್ಲಿ ಕುಳಿತು ಲಿಂಗಪೂಜೆ ಮಾಡುತ್ತಿದ್ದಾರೆ. ಜೊತೆಗೆ ಸ್ನಾನ ಮಾಡಿ ಸಂಗಮನಾಥ ದೇವ ಹಾಗೂ ಬಸವಣ್ಣನ ಐಕ್ಯಮಂಟಪದ ದರ್ಶನವನ್ನ ಪಡೆಯುತ್ತಿದ್ದಾರೆ. ವಿಶೇಷವಾಗಿ ರಾಜ್ಯ ಹಾಗೂ ಹೊರರಾಜ್ಯದಿಂದ ಭಕ್ತರು ಆಗಮಿಸುತ್ತಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:57 am, Sun, 15 January 23