BBMP: ಕಸ ಗುತ್ತಿಗೆದಾರರ ಪ್ರತಿಭಟನೆ ವಾಪಸ್: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸಂಧಾನ
Garbage Disposal: ಆರು ತಿಂಗಳಿನಿಂದ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಸಿ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಗುತ್ತಿಗೆದಾರರು ದೂರಿದ್ದರು.
ಬೆಂಗಳೂರು: ಬಿಲ್ ಪಾವತಿಗೆ ವಿಳಂಬವಾಗುತ್ತಿರುವುದು ಖಂಡಿಸಿ ಕಸ ಸಂಗ್ರಹ ಮತ್ತು ವಿಲೇವಾರಿ ಚಟುವಟಿಕೆಗಳನ್ನು ನಿರ್ವಹಿಸುವ ಗುತ್ತಿಗೆದಾರರು ಮತ್ತು ಹೊರಗುತ್ತಿಗೆ ನೌಕರರು ತಮ್ಮ ಪ್ರತಿಭಟನೆ ಹಿಂಪಡೆದಿದ್ದಾರೆ. ಗುತ್ತಿಗೆದಾರರೊಂದಿಗೆ ಸಂಧಾನ ಮಾತುಕತೆ ನಡೆಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಗೌರವ್ ಗುಪ್ತಾ ಗುತ್ತಿಗೆದಾರರ ಬೇಡಿಕೆ ಈಡೇರಿಸಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಪ್ರತಿಭಟನೆ ಹಿಂಪಡೆಯುವುದಾಗಿ ಹೇಳಿದರು. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಯುತ್ತಿತ್ತು.
ಬಿಬಿಎಂಪಿ ವಿಶೇಷ ಆಯುಕ್ತೆ (ಹಣಕಾಸು) ತುಳಸಿ ಮದ್ದಿನೇನಿ ಅವರು ಬಿಲ್ ಪಾವತಿಗೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಆರು ತಿಂಗಳಿನಿಂದ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಸಿ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಗುತ್ತಿಗೆದಾರರು ಹೇಳಿದರು. ಇಂದೂ (ಫೆ.19) ಸಹ ಕಸ ವಿಲೇವಾರಿಯಾಗದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಕಸ ರಾಶಿ ಬೀಳುವಂತೆ ಆಯಿತು. ಗುತ್ತಿಗೆದಾರರು ಮತ್ತು ಕಾರ್ಮಿಕರು ಬಿಬಿಎಂಪಿ ಎದುರು ಧರಣಿ ನಡೆಸಿ, ತುಳಸಿ ಮದ್ದಿನೇನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಮನೆಗಳಿಂದ ನಿತ್ಯ ಕಸ ಸಂಗ್ರಹಿಸಿ, ವಿಲೇವಾರಿ ಮಾಡುತ್ತೇವೆ. ನಾವು ಮಾಡಿದ ಕೆಲಸಕ್ಕೆ ಕೊಡಬೇಕಾದ ಹಣವನ್ನು ಬಿಬಿಎಂಪಿ ಕೊಡುತ್ತಿಲ್ಲ. ಗುತ್ತಿಗೆದಾರರೂ ಸಹ ಮನುಷ್ಯರೇ ಎಂಬುದು ಇವರಿಗೆ ಅರ್ಥವಾಗಬೇಕು. ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಆಗದಿದ್ದರೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳುತ್ತವೆ. ಅಧಿಕಾರಿಗಳ ಮೊಂಡುತನದಿಂದ ಈ ಸಂಕಷ್ಟ ಬಂದಿದೆ. ಗುತ್ತಿಗೆದಾರರು 12 ಸಾವಿರ ಕಾರ್ಮಿಕರಿಗೆ ವೇತನ ಕೊಡಬೇಕಿದೆ. 8 ತಿಂಗಳಿಂದ ಬಾಕಿ ಬಿಡುಗಡೆ ಮಾಡದಿದ್ದರೆ ಸಂಬಳ ಕೊಡುವುದು ಹೇಗೆ’ ಎಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್.ಎನ್.ಬಾಲಸುಬ್ರಹ್ಮಣ್ಯ ಪ್ರಶ್ನಿಸಿದ್ದರು.
ಕಸ ವಿಲೇವಾರಿ ಸ್ಥಗಿತಗೊಂಡಿದ್ದ ಹಿನ್ನೆಲೆಯಲ್ಲಿ ನಗರದ ಹಲವೆಡೆ ಕಸದ ರಾಶಿ ಎದ್ದು ಕಾಣಿಸುತ್ತಿತ್ತು. ಮುಖ್ಯವಾಗಿ ಹೆಚ್ಚು ಜನಸಂಚಾರ ಇರುವ ಕೆ.ಆರ್.ಮಾರುಕಟ್ಟೆ, ಎಸ್‌ಪಿ ರಸ್ತೆ, ಹಲಸೂರು, ಬನಶಂಕರಿ, ರಿಂಗ್ ರಸ್ತೆ, ಕತ್ರಿಗುಪ್ಪೆ, ರಾಜಾಜಿನಗರ, ಜಯನಗರ, ಹೆಬ್ಬಾಳ ಸೇರಿದಂತೆ ನಗರದ ಹಲವೆಡೆ ರಸ್ತೆಬದಿ ಕಸದ ರಾಶಿ ಬೆಳೆದಿತ್ತು. ಕಸದ ಟಿಪ್ಪರ್‌ಗಳು ಕೆಲವಡೆ ಸಾಲುಗಟ್ಟಿ ನಿಂತಿದ್ದವು.
ನಗರದಲ್ಲಿ ಒಂದು ದಿನಕ್ಕೆ 4 ಟನ್ ಕಸ ಸಂಗ್ರಹವಾಗಲಿದೆ. ಕಸ ಸಂಗ್ರಹ ಮತ್ತು ವಿಲೇವಾರಿ ಒಂದೇ ಒಂದು ದಿನ ಸ್ಥಗಿತಗೊಂಡರೂ ನಗರ ಗಬ್ಬು ನಾರುತ್ತದೆ. ಕಸ ಸಾಗಣೆ ಸಮಸ್ಯೆ ಮತ್ತು ಇತರ ಕಾರಣಗಳಿಂದ ಈ ಹಿಂದೆಯೂ ಹಲವು ಬಾಗಿ ಗುತ್ತಿಗೆದಾರರು ಪ್ರತಿಭಟನೆ ನಡೆಸಿದ್ದರು. ಆದರೆ ಇದೀಗ ಬಿಬಿಎಂಪಿ ಬಿಲ್ ಬಿಡುಗಡೆ ಮಾಡಿಲ್ಲ ಎಂದು ಅರೋಪಿಸಿ ಪ್ರತಿಭಟನೆ ನಡೆಸಲು ಗುತ್ತಿಗೆದಾರರು ಮತ್ತು ಕಾರ್ಮಿಕರು ಮುಂದಾಗಿದ್ದರು. ಕಸ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಬಿಬಿಎಂಪಿ ವತಿಯಿಂದ ಒಟ್ಟು 626 ಕೋಟಿ ಬಿಲ್ ಪಾವತಿಯಾಗಬೇಕಿದೆ ಎಂದು ಗುತ್ತಿಗೆದಾರರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹೊಸ ಪ್ರಯೋಗ: ಕಸ ವಿಲೇವಾರಿಗೆ ಅತ್ಯಾಧುನಿಕ ತಂತ್ರಜ್ಞಾನದ ವಾಹನ
ಇದನ್ನೂ ಓದಿ: ಬೆಂಗಳೂರಿನ ಬಹುತೇಕ ಎಲ್ಲ ರಸ್ತೆಗಳಲ್ಲಿ ಕಸದ ಗುಡ್ಡೆಗಳು; ಪೌರಕಾರ್ಮಿಕರ ಪ್ರತಿಭಟನೆ ಹಿನ್ನೆಲೆ ವಿಲೇವಾರಿ ಆಗದ ಕಸ