AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಬಿಎ ಕರಡು ಮತದಾರರ ಪಟ್ಟಿ ಪ್ರಕಟ; ತಿದ್ದುಪಡಿಗೆ ಲಾಸ್ಟ್ ಡೇ ಯಾವಾಗ ಗೊತ್ತಾ?

ಮೇ 25ಕ್ಕೆ ನಿಗದಿಯಾಗಿರುವ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಚುನಾವಣೆಗೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮತದಾರರು ಫೆಬ್ರವರಿ 6ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಬೂತ್ ಲೆವೆಲ್ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಪಟ್ಟಿಯಲ್ಲಿ ತಿದ್ದುಪಡಿ ಅಥವಾ ಸೇರ್ಪಡೆ ಬಯಸುವವರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಜಿಬಿಎ ಕರಡು ಮತದಾರರ ಪಟ್ಟಿ ಪ್ರಕಟ; ತಿದ್ದುಪಡಿಗೆ ಲಾಸ್ಟ್ ಡೇ ಯಾವಾಗ ಗೊತ್ತಾ?
ಜಿಬಿಎ ಎಲೆಕ್ಷನ್ ಮೇ 25ಕ್ಕೆ
ಭಾವನಾ ಹೆಗಡೆ
|

Updated on: Jan 19, 2026 | 2:18 PM

Share

ಬೆಂಗಳೂರು, ಜನವರಿ 19: ಜಿಬಿಎ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಇಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ರಾಜ್ಯ ಚುನಾವಣಾ ಆಯುಕ್ತರಾದ ಜಿ.ಎಸ್. ಸಂಗ್ರೇಶಿ ಸೇರಿದಂತೆ ಎಲ್ಲಾ ನಗರ ಪಾಲಿಕೆಗಳ ಆಯುಕ್ತರು ಭಾಗವಹಿಸಿದ್ದರು.

ಅಬ್ಜೆಕ್ಷನ್‌ ಸಲ್ಲಿಸಲು ಕೊನೆ ದಿನ ಯಾವಾಗ?

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ನಾಳೆಯಿಂದ ಆಕ್ಷೇಪಣೆ (ಅಬ್ಜೆಕ್ಷನ್) ಸಲ್ಲಿಸಲು ಅವಕಾಶ ನೀಡಲಾಗಿದ್ದು, ಫೆಬ್ರವರಿ 6ರವರೆಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಿರುವುದು, ಹೆಸರು ಬಿಟ್ಟು ಹೋಗಿರುವುದು, ಲಿಂಗ, ವಯಸ್ಸು ಅಥವಾ ವಿಳಾಸದ ತಪ್ಪುಗಳಿದ್ದರೆ ಅವನ್ನು ಈ ಅವಧಿಯಲ್ಲಿ ಸರಿಪಡಿಸಿಕೊಳ್ಳಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.

ನಾಳೆಯಿಂದಲೇ ಬೂತ್ ಲೆವೆಲ್ ಅಧಿಕಾರಿಗಳು (ಬಿಎಲ್‌ಓಗಳು) ಮನೆಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದು, ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯವನ್ನು ಕೈಗೊಳ್ಳಲಿದ್ದಾರೆ. ಇದರಿಂದ ಪಾರದರ್ಶಕ ಹಾಗೂ ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಉದ್ದೇಶವಿದೆ ಎಂದು ತಿಳಿಸಲಾಗಿದೆ.

ಅಬ್ಜೆಕ್ಷನ್‌ ಸಲ್ಲಿಸುವುದು ಹೇಗೆ ?

  1. ಬೂತ್ ಲೆವೆಲ್ ಅಧಿಕಾರಿ (BLO) ಮೂಲಕ:ನಿಮ್ಮ ಪ್ರದೇಶದ ಬಿಎಲ್‌ಒ ಮನೆಗೆ ಭೇಟಿ ನೀಡುವಾಗ ಅಥವಾ ನೇರವಾಗಿ ಬಿಎಲ್‌ಒರನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳ ಪ್ರತಿಯನ್ನು ನೀಡುವ ಮೂಲಕ ಪ್ರತಿಯಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು.
  2. ಸಂಬಂಧಪಟ್ಟ ನಗರ ಪಾಲಿಕೆ / ಮತದಾರರ ನೋಂದಣಿ ಕಚೇರಿ: ನಿಮ್ಮ ವಾರ್ಡ್‌ಗೆ ಸಂಬಂಧಿಸಿದ ಸಹಾಯಕ ಮತದಾರರ ನೋಂದಣಿ ಅಧಿಕಾರಿ (AERO) ಕಚೇರಿಗೆ ಭೇಟಿ ನೀಡಿ ನಿಗದಿತ ಅರ್ಜಿ ಫಾರಂ ಭರ್ತಿ ಮಾಡಿ ಸಲ್ಲಿಸಬಹುದು.

ಅವಶ್ಯಕ ದಾಖಲೆಗಳೇನು?

  • ಗುರುತಿನ ಚೀಟಿ (ಆಧಾರ್ / ಮತದಾರರ ಗುರುತಿನ ಚೀಟಿ)
  • ವಿಳಾಸದ ದಾಖಲೆ
  • ಜನ್ಮ ದಿನಾಂಕದ ದಾಖಲೆ (ವಯಸ್ಸು ತಿದ್ದುಪಡಿಗೆ)

ಜಿಬಿಎ ವ್ಯಾಪ್ತಿಯ ಮತದಾರರೆಷ್ಟು?

ಪ್ರಕಟಿಸಲಾದ ಅಂಕಿಅಂಶಗಳ ಪ್ರಕಾರ,  ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಒಟ್ಟು 88,91,411 ಮತದಾರರು ಇದ್ದಾರೆ. ಇದರಲ್ಲಿ 45,69,193 ಪುರುಷ ಮತದಾರರು, 43,20,583 ಮಹಿಳಾ ಮತದಾರರು ಹಾಗೂ 1,635 ಇತರೆ ವರ್ಗದ ಮತದಾರರು ಸೇರಿದ್ದಾರೆ.

ಕರಡು ಮತದಾರರ ಪಟ್ಟಿ ಪರಿಶೀಲನೆ ಹಾಗೂ ಅಂತಿಮ ಪಟ್ಟಿಯ ಪ್ರಕಟಣೆ ಬಳಿಕ, ಮೇ 25ರ ನಂತರ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗ ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ಎಷ್ಟು ಮತದಾರರಿದ್ದಾರೆ?

  1. ಬೆಂಗಳೂರು ಕೇಂದ್ರ ಒಟ್ಟು ವಾರ್ಡ್-63 ಮತಗಟ್ಟೆಗಳು-1305 ಮತದಾರರು-14,25,483
  2. ಬೆಂಗಳೂರು ಉತ್ತರ ಒಟ್ಟು ವಾರ್ಡ್-72 ಮತಗಟ್ಟೆಗಳು-1716 ಮತದಾರರು-19,54,206
  3. ಬೆಂಗಳೂರು ದಕ್ಷಿಣ ಒಟ್ಟು ವಾರ್ಡ್-72 ಮತಗಟ್ಟೆಗಳು-1716 ಮತದಾರರು-1744270
  4. ಬೆಂಗಳೂರು ಪೂರ್ವ ಒಟ್ಟು ವಾರ್ಡ್-50 ಮತಗಟ್ಟೆಗಳು-916 ಮತದಾರರು-10,41,738
  5. ಬೆಂಗಳೂರು ಪಶ್ಚಿಮ ಒಟ್ಟು ವಾರ್ಡ್-112 ಮತಗಟ್ಟೆಗಳು-2493 ಮತದಾರರು-27,25,714

ಒಟ್ಟು ವಾರ್ಡ್-369, ಮತಗಟ್ಟೆಗಳು-8044, ಮತದಾರರು-88,91,411, ಒಟ್ಟು ಮತಗಟ್ಟೆಗಳ ಸಂಖ್ಯೆ  8044

ವರದಿ: ಅರುಣ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.