ಬೆಂಗಳೂರು, ಜೂನ್.10: ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್ಗೆ (Bakrid) ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಈ ಹಬ್ಬದ ಸಲುವಾಗಿ ಮೇಕೆ- ಕುರಿಗಳಿಗೆ ಬಾರಿ ಡಿಮ್ಯಾಂಡ್ ಶುರುವಾಗಿದ್ದು, ಬಕ್ರೀದ್ ಸಲುವಾಗಿಯೇ ಚಾಮರಾಜಪೇಟೆ ಈದ್ಗ ಮೈದಾನದಲ್ಲಿ (Chamrajpet Idgah Maidan) ಕುರಿ- ಮೇಕೆಗಳ ಸಂತೆ ನಡೆಯಿತು. ಮೇಳದಲ್ಲಿ ವಿವಿಧ ಬಗೆಯ ಮೇಕೆಯ ತಳಿಗಳು ಇದ್ದುದರಿಂದ ಲಕ್ಷಾಂತರ ರೂಪಾಯಿಯ ವಹಿವಾಟು ಸಹ ನಡೆಯಿತು.
ಪ್ರತಿವರ್ಷ ಬಕ್ರೀದ್ ಹಬ್ಬದ ಸಲುವಾಗಿ ನಗರದ ಚಾಮರಾಜಪೇಟೆಯ ಈದ್ಗ ಮೈದಾನದಲ್ಲಿ ದೊಡ್ಡ ಮಟ್ಟದ ಮೇಕೆ, ಕುರಿ, ಟಗರು ಮೇಳದ ಸಂತೆ ನಡೆಯುತ್ತೆ. ಈ ವರ್ಷವು ಕುರಿ- ಮೇಕೆಗಳ ಸಂತೆ ನಡೆಯುತ್ತಿದ್ದು ಮೇಳದಲ್ಲಿ ವಿವಿಧ ತಳಿಯ ಮೇಕೆ, ಕುರಿ, ಟಗರುಗಳಿಗೆ ಭಾರಿ ಡಿಮ್ಯಾಂಡ್ ಇತ್ತು. ಇನ್ನು ಮೇಳದಲ್ಲಿ 7 ಬಗೆಯ ಕುರಿಗಳು ಮೂರು ಬಗೆಯ ಮೇಕೆಗಳು ಗಮನ ಸೆಳೆದ್ವು. ಅದರಲ್ಲಿ ಬಂಡೂರ್ ಕುರಿ, ಅಮಿನ್ ಗಾಡ್, ನಾಟಿ ತಳಿ, ಕರಿ ಕುರಿ, ಪಾವಗಡ, ಶಿರ ಕುರಿ, ಜಮುನ ಪುರಿ, ನಾಟಿ ಹೋತಕ್ಕೆ ಭಾರಿ ಡಿಮ್ಯಾಂಡ್ ಇತ್ತು. ಹೀಗಾಗಿ ನಿನ್ನೆ 20 ಸಾವಿರಕ್ಕೂ ಹೆಚ್ಚು ಮೇಕೆ, ಕುರಿ, ಟಗರುಗಳನ್ನ ತರಿಸಲಾಗಿತ್ತು. ಇವುಗಳಿಗೆ 10 ಸಾವಿರದಿಂದ ಹಿಡಿದು ಲಕ್ಷಾಂತರ ರೂಪಾಯಿವರೆಗೂ ಹಣ ನಿಗದಿ ಮಾಡಲಾಗಿತ್ತು.
ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ, ಯುವತಿ ಮೇಲೆ ಪಾನಮತ್ತ ಪುಂಡರಿಂದ ಹಲ್ಲೆ; ಸ್ಥಳೀಯರಿಂದ ರಕ್ಷಣೆ
ಇನ್ನು ಮೇಳಕ್ಕೆ ರಾಜ್ಯದ ರಾಮನಗರ, ಮಂಡ್ಯ, ಮದ್ದೂರು, ಚೆನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ಬಾಗೇಪಲ್ಲಿ, ತುಮಕೂರು, ನೆಲಮಂಗಲ, ಹೊಸಕೋಟೆ, ಹರಿಹರ, ದಾವಣಗೆರೆ, ಮಳವಳ್ಳಿ, ಕೊಳ್ಳೆಗಾಲ, ಹಾಸನ, ಅರಸಿಕೆರೆ ಸೇರಿದಂತೆ ಒಟ್ಟು 25 ತಾಲೂಕು ಹಾಗೂ ಜಿಲ್ಲೆಗಳಿಂದ ಸಂತೆಗೆ
3 ಸಾವಿರದಷ್ಟು ವ್ಯಾಪಾರಸ್ಥರು ಬಂದಿದ್ರು. ಜೊತೆಗೆ 20 ರಿಂದ 25 ಸಾವಿರದಷ್ಟು ಮೇಕೆಗಳನ್ನ ಸಂತೆಗೆ ತರಿಸಲಾಗಿತ್ತು. ಆದರೆ ಈ ಬಾರಿ ಕುರಿ, ಮೇಕೆ ಟಗರುಗಳ ಬೆಲೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷ ವ್ಯಾಪಾರ ಕಡಿಮೆ ಇದೆ ಅಂತ ವ್ಯಾಪಾರಸ್ಥರು ತಿಳಿಸಿದರು.
ಇದು ಒಂದು ಕಡೆಯಾದ್ರೆ ಮತ್ತೊಂದೆಡೆ ಸಂತೆಯಲ್ಲಿ ಬೇಡಿಕೆ ಇದ್ದಂತಹ ಕುರಿ, ಮೇಕೆ, ಟಗರುಗಳಿಗೆ ಬಾಲಿವುಡ್ ಹಿರೋ ಹಾಗೂ ಟಗರುಗಳ ಹೆಸರಿಟ್ಟು ವ್ಯಾಪಾರಸ್ಥರು ವ್ಯಾಪಾರ ಮಾಡಿದ್ರು. ಹೈದರಾಬಾದಿ ತಳಿಗೆ ಶಾರುಖ್ ಖಾನ್, ಬನ್ನೂರ್ ಕುರಿಗೆ ಸಲ್ಮಾನ್ ಖಾನ್, ಅಮಿನ್ ಗಡ್ ಟಗರಿಗೆ ಅಮಿರ್ ಖಾನ್, ಮುದುವಾಳ್ ಕುರಿಗೆ ಅಮಿತಾ ಬಚ್ಚನ್, ಕೆರೂರ್ ಕುರಿಗೆ ಆತಿಫ್ ಅಸ್ಲಾಂ, ರೈಬಾಗ್ ಕುರಿಗೆ ಸೈಫ್ ಅಲಿ ಖಾನ್ ಹೆಸರಿಟ್ಟಿದ್ದು ಆಕರ್ಷಣಿಯವಾಗಿತ್ತು.
ಇನ್ನು, ಬಕ್ರೀದ್ ಹಬ್ಬ ಮುಸ್ಲಿಮರಿಗೆ ಪವಿತ್ರ ಹಬ್ಬ. ಈ ಹಬ್ಬಕ್ಕೆ ನಾವು ಕುರಿಗಳನ್ನ ಖರೀದಿ ಮಾಡೇ ಮಾಡ್ತೀವಿ. ಹೀಗಾಗಿ ವ್ಯಾಪಾರಸ್ಥರು ಬೆಲೆಯನ್ನ ಜಾಸ್ತಿ ಮಾಡಿದ್ದಾರೆ. ಆದ್ರೆ ಹಬ್ಬ ಮಾಡುವ ಅನಿವಾರ್ಯತೆ ಇದೆ. ಹೀಗಾಗಿ ಮೇಕೆಗಳನ್ನ ಖರೀದಿ ಮಾಡ್ತಿದಿವಿ ಅಂತ ಗ್ರಾಹಕ ಖಲೀಮ್ ಉಲ್ಲಾ ತಿಳಿಸಿದರು.
ಒಟ್ನಲ್ಲಿ, ಇಂದಿನ ಕುರಿಗಳ ಸಂತೆಯಲ್ಲಿ ಲಕ್ಷಾಂತರ ರೂಪಾಯಿಯ ವ್ಯಾಪಾರ ವಹಿವಾಟು ನಡೆದಿದ್ದು, ಇನ್ನು ಒಂದು ವಾರಗಳ ಕಾಲ ಸಂತೆ ಇರಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ