ವಾಲಿಬಾಲ್ ವಿಚಾರಕ್ಕೆ ನಡು ರಸ್ತೆಯಲ್ಲಿ ಮಹಿಳೆ, ಯುವತಿ ಮೇಲೆ ಪಾನಮತ್ತ ಪುಂಡರಿಂದ ಹಲ್ಲೆ; ಸ್ಥಳೀಯರಿಂದ ರಕ್ಷಣೆ
ಪಾನಮತ್ತರಾಗಿದ್ದ ಮೂವರು ಪುಂಡರು ರಸ್ತೆಯಲ್ಲಿ ವಾಲಿವಾಲ್ ಆಟ ಆಡುತ್ತಿದ್ದ ಯುವತಿ ಹಾಗೂ ಮಹಿಳೆಯನ್ನು ನಿಂದಿಸಿದ್ದು ಬಳಿಕ ಹಲ್ಲೆ ನಡೆಸಿದ್ದಾರೆ. ಕೂದಲೆಳೆದಾಡಿ ರಂಪಾಟ ಮಾಡಿದ್ದಾರೆ. ಈ ವೇಳೆ ಸ್ಥಳೀಯರೆಲ್ಲ ಒಂದಾಡಿದ್ದು ಪುಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆ ಹಾಗು ಯುವತಿಯನ್ನು ಬಚಾವ್ ಮಾಡಿದ್ದಾರೆ.
ಬೆಂಗಳೂರು, ಜೂನ್.10: ವಾಲಿಬಾಲ್ ಆಟವಾಡುತ್ತಿದ್ದ ವಿಚಾರಕ್ಕೆ ನಡು ರಸ್ತೆಯಲ್ಲಿ ಪಾನಮತ್ತ ಕಿಡಿಗೇಡಿಗಳು ಮಹಿಳೆ, ಯುವತಿ ಮೇಲೆ ಹಲ್ಲೆ (Assault) ನಡೆಸಿ ಅಟ್ಟಹಾಸ ಮೆರೆದಿರುವ ಘಟನೆ ತಲಘಟ್ಟಪುರ ಠಾಣಾ ವ್ಯಾಪ್ತಿಯ ಆವಲಹಳ್ಳಿಯಲ್ಲಿ ನಡೆದಿದೆ. ಮದ್ಯ ಸೇವಿಸಿ ಟೈಟ್ ಆಗಿದ್ದ ಬಾಲಾಜಿ, ಯೋಗಿ ಸೇರಿದಂತೆ ಮೂವರು ಪುಂಡರ ಗ್ಯಾಂಗ್ ನಡು ರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆ ಮತ್ತು ಯುವತಿಯನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ನೆರೆಹೊರೆಯವರ ಸಹಾಯದಿಂದ ಮಹಿಳೆ, ಯುವತಿ ಪಾರಾಗಿದ್ದು ಆರೋಪಿಗಳ ವಿರುದ್ದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಿನ್ನೆ ಸಂಜೆ 6 ಗಂಟೆ ವೇಳೆಗೆ ಮಹಿಳೆ ಮತ್ತು ಯುವತಿ ತನ್ನ ಮನೆಯ ರಸ್ತೆ ಬದಿ ಮಗ ಹಾಗೂ ಮಕ್ಕಳೊಂದಿಗೆ ವಾಲಿ ಬಾಲ್ ಆಟವಾಡ್ತಿದ್ದರು. ಈ ವೇಳೆ ಬಂದ ಕಿಡಿಗೇಡಿಗಳು ರಸ್ತೆಯಲ್ಲಿ ಆಟವಾಡುತ್ತಿದ್ದೀರಾ? ಓಡಾಡುವವರಿಗೆ ಜಾಗ ಇಲ್ಲ ಎಂದು ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆಗ ಮಹಿಳೆ ನಿಂದಿಸಿದನ್ನು ಪ್ರಶ್ನಿಸಿದ್ದಕ್ಕೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಮಹಿಳೆ ಮತ್ತು 21 ವರ್ಷದ ಯುವತಿಯ ಕೂದಲು ಹಿಡಿದೆಳೆದು ಹಲ್ಲೆ ನಡೆಸಿರುವ ದೃಶ್ಯಗಳನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ನೆರೆಹೊರೆಯವರ ಸಹಾಯದಿಂದ ಯುವತಿ ಮತ್ತು ಮಹಿಳೆ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ; ಬೈಕ್ನಲ್ಲಿ ತೆರಲುವಾಗ ಮರಬಿದ್ದು ಇಬ್ಬರ ಸಾವು, ಮತ್ತೋರ್ವನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಆರೋಪಿಗಳ ವಿರುದ್ದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506, 34, 504, 323,354 ಅಡಿ ಎಫ್ಐಆರ್ ದಾಖಲಾಗಿದೆ. ಕೇಸ್ ದಾಖಲಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸ್ತಿದ್ದಾರೆ. ಘಟನೆ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ರಸ್ತೆ ಬದಿ ಆಟವಾಡುತ್ತಿದ್ದ ಕಾರಣಕ್ಕೆಯೇ ಜಗಳ ನಡೆದಿದೆ ಎನ್ನಲಾಗುತ್ತಿದೆ.
ದೂರಿಗೆ ಪ್ರತಿದೂರು ದಾಖಲು
ಇನ್ನು ಘಟನೆ ಸಂಬಂಧ ದೂರು ನೀಡಿದ್ದ ಮಹಿಳೆ ಮತ್ತು ಪುತ್ರನ ಮೇಲೆ ಪ್ರತಿದೂರು ದಾಖಲಾಗಿದೆ. ಪ್ರತಿದೂರಿನ ಅನ್ವಯ ತಲಘಟ್ಟಪುರ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಭಾಸ್ಕರ್ ನಾಯ್ಡು ಎಂಬುವರು ನೀಡಿದ ಪ್ರತಿದೂರಿನ ಮೇಲೆ ಪುತ್ರ ಜಯಂತ್ ಮತ್ತು ತಾಯಿ ನೇತ್ರಾವತಿ ವಿರುದ್ದ FIR ದಾಖಲಾಗಿದೆ. ನೇತ್ರಾವತಿ ಪುತ್ರ ಮನೆ ಮುಂದೆ ನೆಟ್ ಕಟ್ಟಿ ವಾಲಿಬಾಲ್ ಆಡ್ತಿದ್ದರು. ಇದಕ್ಕೆ ಆಕ್ಷೇಪಿಸಿ ರಸ್ತೆಯಲ್ಲಿ ಆಟವಾಡುತ್ತಿದ್ದರೆ ಓಡಾಡಲು ತೊಂದರೆಯಾಗುತ್ತದೆಂದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ನೇತ್ರಾವತಿ, ಜಯಂತ್ ಮತ್ತು ಇತರರು ಸೇರಿಕೊಂಡು ಭಾಸ್ಕರ್ ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಭಾಸ್ಕರ್ ನಾಯ್ಡು ಮತ್ತು ಪತ್ನಿ ಮೇಲೆ ಹಲ್ಲೆ ಮಾಡಿದ್ದಾಗಿ ಪ್ರತಿ ದೂರು ದಾಖಲಿಸಲಾಗಿದೆ. ಸದ್ಯ ಎರಡು ಕಡೆ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಷೇಧಿತ ಪೋಕರ್ ಗೇಮ್ ಅಡ್ಡೆ ಮೇಲೆ ಸಿಸಿಬಿ ದಾಳಿ
ನಿಷೇಧಿತ ಪೋಕರ್ ಗೇಮ್ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ಹಣವನ್ನ ಬಾಜಿ ಕಟ್ಟಿ ಕಾನೂನು ಬಾಹಿರವಾಗಿ ಪೋಕರ್ ಆಟ ಆಡಿಸುತ್ತಿದ್ದ ಮಾಲೀಕ ಮುಕೇಶ್ ಚಾವ್ಲಾನನ್ನು ಪೊಲೀಸರು ಬಂಧಿಸಿದ್ದಾರೆ. ಮುಕೇಶ್ ಚಾವ್ಲ, ಕೋರಮಂಗಲದ 80 ಫೀಟ್ ರಸ್ತೆಯಲ್ಲಿ ಗೇಮಿಂಗ್ ಶಾಪ್ ಓಪನ್ ಮಾಡಿ ಗೋಲ್ಡನ್ ಏಸ್ ಪೋಕರ್ ರೂಮ್ ಹೆಸರನಲ್ಲಿ ಪೋಕರ್ ಗೇಮ್ ನಡೆಸುತ್ತಿದ್ದ. ರಾತ್ರಿ ಪೂರ್ತಿ ಪೋಕರ್ ಆಟ ಆಡಿಸುತ್ತಿದ್ದ ಬಗ್ಗೆ ಸಿಸಿಬಿಗೆ ಮಾಹಿತಿ ಬಂದಿತ್ತು. ಮಾಹಿತಿ ಆಧರಿಸಿ ಕಳೆದ ಶನಿವಾರ ರಾತ್ರಿ ಸಿಸಿಬಿ ದಾಳಿ ಮಾಡಿ ಮುಕೇಶ್ನನ್ನು ಬಂಧಿಸಿದ್ದಾರೆ.
ಆರೋಪಿ ಮುಕೇಶ್ ಈ ಹಿಂದೆ ದೇವನಹಳ್ಳಿ ಬಳಿ ಪೋಕರ್ ಅಡ್ಡೆ ನಡೆಸಿ ಸಿಸಿಬಿ ಪೊಲೀಸರ ಕೈಗೆ ಲಾಕ್ ಆಗಿದ್ದ. ಇದೀಗ ಮತ್ತೆ ಕೋರಮಂಗಲದಲ್ಲಿ ಪೋಕರ್ ಗೇಮ್ ಓಪನ್ ಮಾಡಿದ್ದಾನೆ. ಸಿಸಿಬಿ ಸಂಘಟಿತ ಅಪರಾಧ ದಳ(OCW) ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ದಾಳಿ ಮಾಡಿ ಪೋಕರ್ ಗೇಮ್ ಬಳಸುವ ವಸ್ತುಗಳು ಹಾಗೂ ಆಟಕ್ಕೆ ಬಾಜಿ ಕಟ್ಟಿದ್ದ ಲಕ್ಷಾಂತರ ಹಣ ವಶಕ್ಕೆ ಪಡೆಯಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:03 am, Mon, 10 June 24