ಹಲವು ಏಳು-ಬೀಳುಗಳ ನಡುವೆಯೂ ಮಂಡ್ಯ ಗೆದ್ದು ಮೋದಿ ಸರ್ಕಾರದಲ್ಲಿ ಮಂತ್ರಿಯಾದ ಕುಮಾರಸ್ವಾಮಿ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರೀಕ್ಷೆಯಂತೆ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾದರೂ ಪೂರ್ಣಾವಧಿಯಾಗಿರಲಿಲ್ಲ. ಈಗಾಗಲೇ ಎರಡು ಬಾರಿ ಸಂಸದರಾಗಿದ್ದರೂ ಸಹ ಇದುವರೆಗೂ ಕೇಂದ್ರದಲ್ಲಿ ಮಂತ್ರಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಅವರು ಕೇಂದ್ರ ಸಚಿವರಾಗಿದ್ದಾರೆ. ಇನ್ನು ಎಚ್.ಡಿ. ಕುಮಾರಸ್ವಾಮಿ ಬದುಕಿನ ಹಾದಿ ಹೇಗಿತ್ತು ಎನ್ನುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಹಲವು ಏಳು-ಬೀಳುಗಳ ನಡುವೆಯೂ ಮಂಡ್ಯ ಗೆದ್ದು ಮೋದಿ ಸರ್ಕಾರದಲ್ಲಿ ಮಂತ್ರಿಯಾದ ಕುಮಾರಸ್ವಾಮಿ
ಎಚ್​ಡಿ ಕುಮಾರಸ್ವಾಮಿ
Follow us
|

Updated on: Jun 09, 2024 | 8:48 PM

ಬೆಂಗಳೂರು, (ಜೂನ್ 09): ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಅವರ ಪುತ್ರ ಎಚ್​ಡಿ ಕುಮಾರಸ್ವಾಮಿ. ಇವರು ರಾಜಕೀಯದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ. ಇವರದ್ದು ಪ್ರಾದೇಶಿಕ ಪಕ್ಷವಾಗಿದ್ದರೂ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಎರಡು ಬಾರಿ ಮುಖ್ಯಮಂತ್ರಯಾಗಿ ರಾಜ್ಯ ರಾಜಕಾರಣದಲ್ಲಿ ಎಚ್​ಡಿ ಕುಮಾರಸ್ವಾಮಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಇದೀಗ ಮೊದಲ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ಕುಮಾರಸ್ವಾಮಿ ಸಚಿವರಾಗಿದ್ದಾರೆ. ಈ ಮೂಲಕ ಕುಮಾರಸ್ವಾಮಿ ರಾಷ್ಟ್ರರಾಜಕಾರಣ ಪ್ರವೇಶ ಮಾಡಿದ್ದಾರೆ.

ಕರ್ನಾಟಕದ ಮಂಡ್ಯದಿಂದ ಗೆದ್ದು ಸಂಸತ್​ ಪ್ರವೇಶಿಸಿರುವ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಎಂಟು ಜನ ಬಿಜೆಪಿ ನಾಯಕರು ಪ್ರಮಾಣ ಸ್ವೀಕರಿಸಿದ ನಂತರ ಎನ್ ಡಿಎ ಒಕ್ಕೂಟದ ಮಿತ್ರಪಕ್ಷಗಳಲ್ಲಿ ಮೊದಲಿಗರಾಗಿ ಕುಮಾರಸ್ವಾಮಿ ಅವರು ಪ್ರಮಾಣ ಸ್ವೀಕರಿಸಿದರು. ಸಾಂಪ್ರದಾಯಿಕ ಬಿಳಿ ಅಂಗಿ ಪಂಚೆ ಧರಿಸಿದ್ದ ಎಚ್​ಡಿಕೆ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

ಎಚ್.ಡಿ. ಕುಮಾರಸ್ವಾಮಿ ನಡೆದುಬಂದ ಹಾದಿ

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹಾಗೂ ಚೆನ್ನಮ್ಮರ ಕೊನೆಯ ಪುತ್ರರಾದ ಕುಮಾರಸ್ವಾಮಿ ಜನಿಸಿದ್ದು 1959ರ ಡಿಸೆಂಬರ್‌ 16ರಂದು. ತಂದೆ ಪ್ರಭಾವಿ ರಾಜಕಾರಣಿ. ವರ ಗರಡಿಯಲ್ಲೇ ಬೆಳೆದವರು ಕುಮಾರಸ್ವಾಮಿ.ಹಾಸನ ಜಿಲ್ಲೆಯ ಹೊಳೇನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಕುಮಾರಸ್ವಾಮಿ ಜನಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೆಂಗಳೂರಿನ ಎಮ್.ಇ.ಎಸ್ ವಿದ್ಯಾಸಂಸ್ಥೆಯಲ್ಲಿ, ಬೆಂಗಳೂರಿನ ಜಯನಗರದಲ್ಲಿರುವ ವಿಜಯ ಕಾಲೇಜ್‌ನಲ್ಲಿ ಪಿಯುಸಿಯನ್ನು ಪೂರ್ಣಗೊಳಿಸಿ ನ್ಯಾಷನಲ್ ಕಾಲೇಜ್‌ನಲ್ಲಿ ಬಿಎಸ್ಸಿ ಪದವಿಯನ್ನು ಪಡೆದುಕೊಂಡವರು. ರಾಜಕೀಯಕ್ಕೆ ಬರುವ ಮುನ್ನ ಸಿನೆಮಾದಲ್ಲಿ ಗುರುತಿಸಿಕೊಂಡವರು. ತಂದೆ ಸಿಎಂ ಆಗಿದ್ದಾಗಲೇ ನಡೆದ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕನಕಪುರದಿಂದ ಗೆದ್ದು ಮೂರು ದಶಕದ ರಾಜಕೀಯ ಜೀವನದ ಅನುಭವ ಹೊಂದಿದ್ದಾರೆ. ಕೇವಲ ರಾಜಕೀಯ ಜೀವನದಲ್ಲಿ ಮಾತ್ರವಲ್ಲದೇ ಸಿನಿಮಾ ರಂಗದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇವರು ಮಾರ್ಚ್ 13, 1986ರಲ್ಲಿ ಅನಿತಾ ಕುಮಾರಸ್ವಾಮಿಯನ್ನು ವಿವಾಹವಾಗಿದ್ದು, ಅವರಿಗೆ ಒಬ್ಬರೇ ಪುತ್ರ ನಿಖಿಲ್‌ ಕುಮಾರಸ್ವಾಮಿ.

ಎಚ್‌ಡಿ ಕುಮಾರಸ್ವಾಮಿ ರಾಜಕೀಯ ಜೀವನ

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರ ಪುತ್ರ, ಮಾಜಿ ಮುಖ್ಯಮಂತ್ರಿ, ಸಂಸದ ಎಚ್​ಡಿ ಕುಮಾರಸ್ವಾಮಿ ಅವರು ಮೂಲತಃ ಚಲನಚಿತ್ರ ನಿರ್ಮಾಪಕರು. ಹಲವು ವರ್ಷಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಕುಮಾರಸ್ವಾಮಿ ಅವರಿಗೆ ಇದೆ. ಇವರು ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಮೂಲತಃ ಕೃಷಿಕರು. ಇವರು ತಂದೆಯ ನೆರಳಿನಲ್ಲಿ ರಾಜಕಾರಣಕ್ಕೆ ದುಮುಕಿದರು. ಮೊದಲಿಗೆ ಎಚ್​ಡಿಕೆ ಅವರು ತಮ್ಮ 37ನೇ ವಯಸ್ಸಿನಲ್ಲಿ 1996ರಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 11ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾದರು. ಎಚ್​ಡಿ ಕುಮಾರಸ್ವಾಮಿ ಅವರು ಮತ್ತೆ 1998ರಲ್ಲಿ ಮತ್ತೊಮ್ಮೆ ಲೋಕ​ಸಭೆ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್​ನ ಎಂ.ವಿ ಚಂದ್ರಶೇಖರ ಮೂರ್ತಿ ವಿರುದ್ಧ ಸೋಲು ಅನುಭವಿಸಿದ್ದರು. ಅಲ್ಲದೆ ಈ ಚುನಾವಣೆಯಲ್ಲಿ ಅವರಿಗೆ ಠೇವಣಿಯನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಸೋತರು.

  • 1996ರಲ್ಲಿ ಕನಕಪುರ ಕ್ಷೇತ್ರದಿಂದ ಜನತಾದಳ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಕುಮಾರಸ್ವಾಮಿ ರಾಜಕೀಯ ಪ್ರವೇಶ ಮಾಡಿದರು.
  • 1998,1999 ರಲ್ಲಿ ಪುನಃ ಕನಕಪುರದಿಂದಲೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಸೋಲು ಅನುಭವಿಸಿದ್ದರು.
  •  2004ರಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು.
  • 2006ರಲ್ಲಿ ಬಿಜೆಪಿ ಜೊತೆಗೆ ಕೈಜೋಡಿಸಿ ಮೈತ್ರಿ ಸರ್ಕಾರದಲ್ಲಿ20 ತಿಂಗಳು ಮುಖ್ಯಮಂತ್ರಿಯಾದರು.
  • ಆನಂತರ ಶಾಸಕರಾದರೂ 2009 ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸದರಾದರು.ಆನಂತರ ರಾಜೀನಾಮೆ ನೀಡಿ ವಿಧಾನಸಭೆ ಚುನಾವಣೆ ಎದುರಿಸಿ ಗೆದ್ದರು.
  • ಮತ್ತೆ 2014ರಲ್ಲಿ ಚಿಕ್ಕಬಳ್ಳಾಪುರದಿಂದ ಲೋಕಸಭೆ ಚುನಾವಣೆ ಕಣಕ್ಕೆ ಇಳಿದು ಸೋತರು.
  • 2018ರ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಎಚ್‌ಡಿ ಕುಮಾರಸ್ವಾಮಿ ಎರಡನೇ ಬಾರಿ ಮುಖ್ಯಮಂತ್ರಿಯಾದರು.
  • 14 ತಿಂಗಳಲ್ಲೇ ಮೈತ್ರಿ ಮುರಿದು ಬಿದ್ದಿತು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರ ರಾಜೀನಾಮೆಯಿಂದ ಕುಮಾರಸ್ವಾಮಿ ಅಧಿಕಾರ ತ್ಯಜಿಸಬೇಕಾಯಿತು.
  • 2023ರಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದರೂ ಪಕ್ಷ ಅಧಿಕಾರಕ್ಕೆ ಬರಲಿಲ್ಲ.
  • ಆರು ತಿಂಗಳಲ್ಲೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮಂಡ್ಯದಲ್ಲಿ ಸ್ಪರ್ಧಿಸಿ ಭಾರೀ ಬಹುಮತದಿಂದ ಗೆದ್ದರು ಕುಮಾರಸ್ವಾಮಿ. ಈಗ ಎನ್‌ಡಿಎ ಮಿತ್ರ ಪಕ್ಷವಾಗಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ.

ತಾಜಾ ಸುದ್ದಿ