
ಬೆಂಗಳೂರು, ಏಪ್ರಿಲ್ 24: ಚಿನ್ನ ವಂಚನೆ (Gold Fraud)) ಪ್ರಕರಣ ಸಂಬಂಧ ಐಶ್ವರ್ಯ ಗೌಡ (Aishwarya Gowda) ಅವರ ಬೆಂಗಳೂರು ಹಾಗೂ ಮಂಡ್ಯದ ನಿವಾಸ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ದಾಳಿ (ED Raid) ನಡೆಸಿದರು. ವಿನಯ್ ಅವರ ಬೆಂಗಳೂರಿನಲ್ಲಿರುವ ಮನೆ ಹಾಗೂ ಐಶ್ವರ್ಯ ಅವರ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಮನೆ ಹಾಗೂ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆದಿದ್ದು, ಕಡತಗಳು ಹಾಗೂ ದಾಖಲೆಗಳ ಶೋಧ ಮಾಡಿದ್ದಾರೆ. ಇಬ್ಬರು ಸಿಆರ್ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ಈ ದಾಳಿ ನಡೆದಿದೆ. ಐಶ್ವರ್ಯ ಗೌಡ ವಿರುದ್ಧ ಸುಮಾರು 9 ಕೋಟಿ ರೂ. ಮೌಲ್ಯದ ಚಿನ್ನ ವಂಚನೆ ಮಾಡಿದ ಆರೋಪವಿದೆ.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜುವೆಲ್ಲರಿಯ ಮಾಲೀಕರಿಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದಾರೆ ಎಂಬ ಆರೋಪವಿದೆ. ಇಷ್ಟೇ ಅಲ್ಲದೆ, ಮಾಜ ಸಂಸದ ಡಿಕೆ ಸುರೇಶ್ ಹೆಸರಿನಲ್ಲಿ ವಂಚನೆ ಎಸಗಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 2024ರ ಡಿಸೆಂಬರ್ನಲ್ಲೇ ಡಿಕೆ ಸುರೇಶ್ ದೂರು ನೀಡಿದ್ದರು.
ಪ್ರಕರಣ ಸಂಬಂಧ 2024 ರ ಡಿಸೆಂಬರ್ನಲ್ಲಿ ಐಶ್ವರ್ಯ ಗೌಡ ಮತ್ತು ಆಕೆಯ ಪತಿ ಕೆಎನ್ ಹರೀಶ್ ಅವರನ್ನು ಬಂಧಿಸಲಾಗಿತ್ತು. ಅದಾದ ನಂತರ ಐಶ್ವರ್ಯ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿತ್ತು.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಅಂಗಡಿ ಬಾಲಕಿ ವನಿತಾ ಎಸ್ ಐತಾಳ್ ಎಂಬವರಿಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದರು. ಡಿಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ಮೋಸ ಮಾಡಲಾಗಿತ್ತು. ಈ ಬಗ್ಗೆ ಚಿನ್ನದ ಅಂಗಡಿ ಮಾಲಕಿ ಆಡಿಯೋ ಕ್ಲಿಪಿಂಗ್ ಮತ್ತು ಇತರ ದಾಖಲೆಗಳ ಸಹಿತ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಚಿನ್ನ ವಂಚನೆ ಕೇಸ್! ಐಶ್ವರ್ಯಾ ಗೌಡ ವಿರುದ್ಧ ಪೊಲೀಸ್ ಆಯುಕ್ತರಿಗೆ ಡಿಕೆ ಸುರೇಶ್ ದೂರು
ಚಿನ್ನ ಖರೀದಿಸುವ ನೆಪದಲ್ಲಿ ಡಿಕೆ ಸುರೇಶ್ ಹೆಸರು ಹೇಳಿಕೊಂಡು 9.82 ಕೋಟಿ ರೂಪಾಯಿ ಮೌಲ್ಯದ 14 ಕೆಜಿ 660 ಗ್ರಾಂ ಚಿನ್ನ ವಂಚನೆ ಎಸಗಿದ ಆರೋಪ ಐಶ್ವರ್ಯ ಗೌಡ ಮೇಲಿದೆ. ಈ ಬಗ್ಗೆ ವನಿತಾ ಎಸ್ ಐತಾಳ್ ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದರು. ಅದಾದ ನಂತರ ಡಿಕೆ ಸುರೇಶ್ ಸಹ ದೂರು ನೀಡಿದ್ದರು.
Published On - 2:26 pm, Thu, 24 April 25