
ಬೆಂಗಳೂರು, ಸೆಪ್ಟೆಂಬರ್ 29: ಗೃಹಲಕ್ಷ್ಮಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದ್ದು, ಯೋಜನೆಯ ಹಣವನ್ನು ಯಾವುದೇ ಕಾರಣಕ್ಕೂ ಸಾಲದ ಕಂತು ಅಥವಾ ಬಡ್ಡಿಗೆ ಕಡಿತ ಮಾಡಿಕೊಳ್ಳದಂತೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ. ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಈ ಸಂಬಂಧ ಮನವಿ ಮಾಡಿದ್ದ ಬೆನ್ನಲ್ಲೇ ಸಿಎಂ ಅಗತ್ಯ ಕ್ರಮ ಕೈಗೊಂಡಿದ್ದಾರೆ.
ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯು ನಾಡಿನ ಕೋಟ್ಯಂತರ ತಾಯಂದಿರ ಮತ್ತು ಸಹೋದರಿಯರ ಆರ್ಥಿಕ ಸಬಲೀಕರಣಕ್ಕೆ ಭದ್ರ ಬುನಾದಿ ಹಾಕಿದ. ಪ್ರತಿ ತಿಂಗಳು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿರುವ 2,000 ರೂಪಾಯಿಯು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ನಿತ್ಯದ ಅಗತ್ಯಗಳು, ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಸ್ಕ್ಯಾವಲಂಬನೆಗೆ ದೊಡ್ಡ ಆಸರೆಯಾಗಿದೆ.ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ವಾಣಿಜ್ಯ ಬ್ಯಾಂಕುಗಳು, ಖಾಸಗಿ ಫೈನಾನ್ಸ್ ಕಂಪನಿಗಳು, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮತ್ತು ಸಂಘಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾದ ತಕ್ಷಣವೇ, ಹಳೆಯ ಸಾಲದ ಬಾಕಿ ಅಥವಾ ಬಡ್ಡಿಯ ನೆಪವೊಡ್ಡಿ ಆ ಹಣವನ್ನು ಬಲವಂತವಾಗಿ ಕಡಿತಗೊಳಿಸುತ್ತಿರುವುದು ವ್ಯಾಪಕವಾಗಿ ಕಂಡುಬರುತ್ತಿದೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ದಿನೇಶ್ ಗೂಳಿಗೌಡ ಉಲ್ಲೇಖಿಸಿದ್ದರು.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ
ಕೆಲವು ಕಡೆಗಳಲ್ಲಿ ಫಲಾನುಭವಿಗಳಿಗೆ ತಿಳಿಸದೆಯೇ ಅವರ ಖಾತೆಯಲ್ಲಿದ್ದ ಹಣವನ್ನು ಸಾಲದ ಕಂತಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಆಶಯದಂತೆ ಈ ಹಣವು ಮಹಿಳೆಯರ ಕುಟುಂಬದ ಮೂಲಭೂತ ಅಗತ್ಯಗಳಿಗೆ ಬಳಕೆಯಾಗಬೇಕೇ ಹೊರತು, ಸಾಲ ವಸೂಲಾತಿಯ ಸಾಧನವಾಗಬಾರದು. ಈ ಅಕ್ರಮ ಕಡಿತದಿಂದಾಗಿ ಆರ್ಥಿಕ ಸಂಕಷ್ಟ್ಯದಲ್ಲಿರುವ ಬಡ ಮಹಿಳೆಯರು ತೀವ್ರ ಕಂಗಾಲಾಗಿದ್ದು, ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ಉಂಟಾಗುತ್ತಿದೆ. ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ಪರಿಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಸಭೆಗಳಲ್ಲೂ ಜಿಲ್ಲಾಡಳಿತಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, “ಗೃಹಲಕ್ಷ್ಮಿ ಹಣವನ್ನು ಯಾವುದೇ ಕಾರಣಕ್ಕೂ ಸಾಲದ ಕಂತು ಅಥವಾ ಬಡ್ತಿಗೆ ಮುಟ್ಟುಗೋಲು ಹಾಕಿಕೊಳ್ಳಬಾರದು” ಎಂದು ಎಚ್ಚರಿಕೆ ನೀಡಿರುವುದು ವರದಿಯಾಗಿದೆ ಎಂದವರು ತಿಳಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.