
ಬೆಂಗಳೂರು, ಜನವರಿ 8: ಕೋಗಿಲು ಲೇಔಟ್ (Kogilu Layout) ಅಕ್ರಮವಾಸಿಗಳಿಗೆ ಮನೆ ಭಾಗ್ಯ ಸಿಗುವ ಕಾಲ ಸನ್ನಿಹಿತವಾಗುತ್ತಿದೆ. ಬಿಜೆಪಿ ನಾಯಕರ ವಿರೋಧದ ನಡುವೆಯೂ ಸರ್ಕಾರ ಅಕ್ರಮವಾಸಿಗಳಿಗೆ ಮನೆ ಹಂಚಲು ನಿರ್ಧರಿಸಿದೆ. ಇಂದೇ 26 ಮನೆಗಳ ಹಂಚಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸುಳಿವು ನೀಡಿರುವ ವಸತಿ ಸಚಿವ ಜಮೀರ್ ಅಹ್ಮದ್ (Zameer Ahmed), 26 ಮನೆಗಳನ್ನು ಕೊಡಬಹುದು. ಉಳಿದ ಅರ್ಜಿಗಳ ಪರಿಶೀಲನೆಯಾಗುತ್ತಿದೆ ಎಂದಿದ್ದಾರೆ. ಹಾಗೆಯೇ ಅರ್ಜಿ ಹಾಕಿದ ಎಲ್ಲರಿಗೂ ಕೊಡಲ್ಲ. ಹೊರಗಿನವರಿಗಂತೂ ಮನೆ ಕೊಡುವುದೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಹೀಗಾಗಿಯೇ ವಸತಿ ಸಚಿವ ಜಮೀರ್ ಅಹ್ಮದ್, ಹೊರಗಿನವ್ರಿಗೆ ಮನೆ ಕೊಡಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ಬಿಜೆಪಿ ನಾಯಕರು ಮಾತ್ರ ಬಾಂಗ್ಲಾದವರಿಗೆ ಮನೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೋಗಿಲು ಲೇಔಟ್‌ನಲ್ಲಿ ಸರ್ವೆ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳು ಅರ್ಹರ ಪಟ್ಟಿ ಸಿದ್ಧಪಡಿಸಿದ್ದಾರೆ. ಯಾವ ಭಾಷೆಯ ಎಷ್ಟೆಷ್ಟು ಕುಟುಂಬವಿದೆ ಎಂದು ಪಟ್ಟಿ ತಯಾರಿಸಿದ್ದು, ಅದನ್ನು ಸರ್ಕಾರ ರಿಲೀಸ್ ಮಾಡಿದೆ. ಸರ್ಕಾರ ರಿಲೀಸ್ ಮಾಡಿರುವ ನಿರಾಶ್ರಿತರ ಪಟ್ಟಿ ‘ಟಿವಿ9’ಗೆ ಲಭ್ಯವಾಗಿದೆ.
ಸರ್ಕಾರವೇನೋ ಪಟ್ಟಿ ಸಿದ್ಧ ಮಾಡಿದೆ. 26 ಮನೆಗಳ ಹಂಚಿಕೆಗೆ ಸಿದ್ಧತೆ ಮಾಡಿಕೊಂಡಿದೆ. ಆದರೆ, ಕೋಗಿಲು ನಿವಾಸಿಗಳು ಮಾತ್ರ ಬೇರೆ ಯಾರಿಗೋ ಮನೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಐದಾರು ಜನಕ್ಕೆ ಕರೆ ಬಂದಿದೆ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ: ಕೋಗಿಲು ಲೇಔಟ್: ಅಕ್ರಮ ಮನೆಗೆ 1 ರಿಂದ 2 ಲಕ್ಷ ರೂ. ವಸೂಲಿ, ಸರ್ಕಾರಿ ಭೂಮಿ ಕಬಳಿಸಿ ತನ್ನದೇ ಹೆಸರಿಟ್ಟಿದ್ದ ಆರೋಪಿ!
ಮತ್ತೊಂದೆಡೆ, ಕೋಗಿಲು ಲೇಔಟ್‌ನ 20ಕ್ಕೂ ಹೆಚ್ಚು ನಿವಾಸಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯಾವಾಗ ಬಂದಿದ್ದಿರಿ, ಯಾರಿಗೆ ಎಷ್ಟು ದುಡ್ಡು ಕೊಟ್ಟಿದ್ದಿರಿ, ಕರೆಂಟ್ ಹೇಗೆ ಬಂತು ಎಂದೆಲ್ಲ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ಸೈಟ್ ಅತಿಕ್ರಮ ಮಾಡಿದ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.