ಸಿಎಂ ಅಂಕಲ್ ನಮ್ಗೆ ಸ್ಕೂಲ್​ಗೆ ಹೋಗಲು ಬಸ್ ಕೊಡಿ: ಸಿದ್ದರಾಮಯ್ಯಗೆ ಪತ್ರ ಬರೆದ ಬಾಲಕಿ

| Updated By: Rakesh Nayak Manchi

Updated on: Feb 25, 2024 | 10:05 AM

ಬೆಂಗಳೂರು ನಗರದಿಂದ ಸುಮಾರು 25 ಕಿಲೋಮಿಟರ್ ದೂರದಲ್ಲಿರುವ ತಾವರೆಕೆರೆ ವ್ಯಾಪ್ತಿಯ ಸೀಗೇಹಳ್ಳಿಯಿಂದ ಬೆಂಗಳೂರಿಗೆ ಸರಿಯಾದ ಸಾರಿಗೆ ಬಸ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಬಾಲಕಿಯೊಬ್ಬಳು ಪತ್ರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಸೆಳೆದಿದ್ದಾಳೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಬಿಎಂಟಿಸಿ ಎಂಡಿಗೂ ಪತ್ರ ಕಳುಹಿಸಿದ್ದಾಳೆ.

ಸಿಎಂ ಅಂಕಲ್ ನಮ್ಗೆ ಸ್ಕೂಲ್​ಗೆ ಹೋಗಲು ಬಸ್ ಕೊಡಿ: ಸಿದ್ದರಾಮಯ್ಯಗೆ ಪತ್ರ ಬರೆದ ಬಾಲಕಿ
ಸಿಎಂ ಅಂಕಲ್ ನಮ್ಗೆ ಸ್ಕೂಲ್​ಗೆ ಹೋಗಲು ಬಸ್ ಕೊಡಿ: ಸಿದ್ದರಾಮಯ್ಯಗೆ ಪತ್ರ ಬರೆದ ಬಾಲಕಿ
Follow us on

ಬೆಂಗಳೂರು, ಫೆ.25: ನಗರದಿಂದ ಸುಮಾರು 25 ಕಿಲೋಮಿಟರ್ ದೂರದಲ್ಲಿರುವ ತಾವರೆಕೆರೆ ವ್ಯಾಪ್ತಿಯ ಸೀಗೇಹಳ್ಳಿಯಿಂದ (Seegehalli) ಬೆಂಗಳೂರಿಗೆ (Bengaluru) ಸರಿಯಾದ ಸಾರಿಗೆ ಬಸ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಬಾಲಕಿಯೊಬ್ಬಳು ಪತ್ರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಗಮನಸೆಳೆದಿದ್ದಾಳೆ.

ಸಿಎಂ ಅಂಕಲ್ ನಮ್ಗೆ ಸ್ಕೂಲ್ ಗೆ ಹೋಗಲು ಬಸ್ ಕೊಡಿ ಎಂದು ಸಿದ್ದರಾಮಯ್ಯ ಅವರಿಗೆ ಭಾವನಾತ್ಮಕ ಪತ್ರ ಬರೆದ ತಾವರಕೆರೆ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿ ವಾಸವಿರುವ 8ನೇ ತರಗತಿ ವಿದ್ಯಾರ್ಥಿನಿ ವಿವೈ ಹರ್ಷಿಣಿ, ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳು ಪರದಾಡಾಡುತ್ತಿದ್ದಾರೆ. ಬಸ್ ಗಳಿಲ್ಲದೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾಳೆ.

ಸೀಗೇಹಳ್ಳಿ ನಗರದಿಂದ ಸುಮಾರು 25 ಕಿಲೋಮಿಟರ್ ದೂರವಿದೆ. ಹತ್ತಿರದಲ್ಲೇ ಬಿಎಂಟಿಸಿ ವಾಯುವ್ಯ ವಿಭಾಗದ ಡಿಪೋ ಇದೆ. ಇಲ್ಲಿಂದ ಅನೇಕ ಕಡೆ ಬಸ್​ಗಳ ವ್ಯವಸ್ಥೆಯನ್ನು ಬಿಎಂಟಿಸಿ ಕಲ್ಪಿಸಿದೆ. ಅಕ್ಕಪಕ್ಕದಲ್ಲಿರುವ ವನಗನಹಟ್ಟಿ, ಚನ್ನೇನಹಳ್ಳಿ, ಜಟ್ಟಿಪಾಳ್ಯ, ಸೀಗೆಹಳ್ಳಿಯಿಂದ ಬೆಂಗಳೂರಿಗೆ ಬಸ್​ಗಳ ವ್ಯವಸ್ಥೆಯೇ ಇಲ್ಲ. ಇದರಿಂದ ಬೆಂಗಳೂರಿನಲ್ಲಿರುವ ಶಾಲಾ—ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಪತ್ರದಲ್ಲಿ ಹರ್ಷಿಣಿ ಅಳಲು ತೋಡಿಕೊಂಡಿದ್ದಾಳೆ.

ಇದನ್ನೂ ಓದಿ: ಉಚಿತ ಬಸ್ ದುರುಪಯೋಗ? ಅಪ್ರಾಪ್ತ ಹೆಣ್ಣು ಮಕ್ಕಳು ಮನೆ ಬಿಟ್ಟು ಆಧಾರ್ ಕಾರ್ಡ್ ಸಮೇತ ಊರು ಬಿಟ್ಟ ಕಹಿ ಪ್ರಸಂಗ

ಈ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಮಾತ್ರವಲ್ಲದೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಬಿಎಂಟಿಸಿ ಎಂಡಿ ರಾಮಚಂದ್ರನ್ ಆರ್ ಅವರಿಗೆ ಕಳುಹಿಸಿದ್ದಾಳೆ.

ಪತ್ರದಲ್ಲೇನಿದೆ?

ನಾನು ಮತ್ತು ನನ್ನ ತಾಯಿ ಹಲವು ಬಾರಿ ತಮ್ಮ ಸಂಸ್ಥೆಯ ಅಧಿಕಾರಿಗಳಿಗೆ ತಾವರೆಕೆರೆಯಿಂದ ಮಾಗಡಿ ರಸ್ತೆಯ ಮುಖಾಂತರ ಶ್ರೀನಗರ ಬಸ್ ನಿಲ್ದಾಣಕ್ಕೆ ಸಾರಿಗೆ ಸಂಸ್ಥೆಯ ಬಸ್ ಬಿಡಬೇಕೆಂದು ಮನವಿ ಮಾಡಿಕೊಂಡಿರುತ್ತೇವೆ. ಈ ಪತ್ರಕ್ಕೆ ಸಂಸ್ಥೆಯ ಅಧಿಕಾರಿಗಳು ಯಾವುದೇ ಉತ್ತರವನ್ನು ನೀಡಿರುವುದಿಲ್ಲ. ಆದರೆ, ಪ್ರತಿ ಗುರುವಾರ ಹಾಗೂ ಭಾನುವಾರ ಸುಮ್ಮನಹಳ್ಳಿಯಿಂದ ಕಡಬಗೆರೆ ಮಾರ್ಗವಾಗಿ ರಾಯರ ಕಾಮದೇನು ದೇವಾಲಯಕ್ಕೆ ಪ್ರತಿಗಂಟೆಗೆ ಬಸ್ ಬಿಡಲಾಗುತ್ತಿದೆ.

ನಮಗೆ ದೇವಾಲಯದ ತೀರ್ಥಪ್ರಸಾದ ಬೇಡ, ನಮಗೆ ಉನ್ನತ ಶಿಕ್ಷಣಕ್ಕಾಗಿ ಸಂಸ್ಥೆಯ ಸಾರಿಗೆ ವಾಹನಗಳು ಬೇಕಾಗಿರುತ್ತದೆ. ಈ ದೇಶದ ರಾಷ್ಟ್ರಪತಿ ಮಹಿಳೆಯಾಗಿರುತ್ತಾರೆ. ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಸುರಕ್ಷಿತ ಸಿಗುವಂತೆ ಮಾಡಿರುವುದು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶೀರ್ವಾದವಾಗಿರುತ್ತದೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಬಾಲಕಿ ಹರ್ಷಿಣಿ ಬರೆದ ಪತ್ರ

ಬಾಬಾಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಪ್ರತಿ ಜಿಲ್ಲೆ ಮತ್ತು ತಾಲೂಕು ಹಳ್ಳಿಯ ಶಾಲಾ ಮಕ್ಕಳಿಗೆ ವಿಶೇಷ ಸಾರಿಗೆ ಬಸ್​ಗಳನ್ನು ಆರಂಭಿಸಬೇಕಾಗಿ ತಮ್ಮಲ್ಲಿ ಕಳಕಳಿಯವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹರ್ಷಿಣಿ ಪತ್ರದಲ್ಲಿ ಬರೆದಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 am, Sun, 25 February 24