ಸೋಷಿಯಲ್ ಮೀಡಿಯಾ ಬಳಕೆಗೂ ವಯೋಮಿತಿ ನಿಗದಿಪಡಿಸಿ: ಕೇಂದ್ರಕ್ಕೆ ಸರ್ಕಾರಕ್ಕೆ ಹೈಕೋರ್ಟ್ ಸಲಹೆ
ಆನ್‌ಲೈನ್ ಗೇಮಿಂಗ್‌ಗೆ ವಯೋಮಿತಿ ನಿಗದಿಪಡಿಸಲಾಗಿದೆ. ಇದೇ ಮಾದರಿ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಬಳಕೆಗೆ ವಯೋಮಿತಿ ನಿಗದಿಪಡಿಸಬೇಕು ಎ೦ದು ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಬೆಂಗಳೂರು ಸೆ.20: ಶಾಲೆಗೆ ಹೋಗುವ ಮಕ್ಕಳೂ ಸಹ ಸಾಮಾಜಿಕ ಜಾಲತಾಣಗಳಿಗೆ (Social Media) ದಾಸರಾಗಿರುವ ಕಾರಣ ಮತದಾನಕ್ಕೆ 21 ವರ್ಷ ನಿಗದಿ ಮಾಡಿರುವ ಮಾದರಿಯಲ್ಲೇ ಸಾಮಾಜಿಕ ಜಾಲತಾಣ ಬಳಕೆಗೂ ವಯೋಮಿತಿ ನಿಗದಿ ಮಾಡುವುದು ಸೂಕ್ತ. ಈ ಬಗ್ಗೆ ಚಿಂತನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ (Union Government) ಹೈಕೋರ್ಟ್ (High Court) ಸೆ.19 ರಂದು ಮೌಖಿಕವಾಗಿ ಸಲಹೆ ನೀಡಿದೆ.
ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ 2021ರ ಫೆ.ಮತ್ತು 2022ರ ಅವಧಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಆಕ್ಷೇಪಿಸಿ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್ (ಹಿಂದಿನ ಟ್ವಿಟರ್) ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠ ಸಾಮಾಜಿಕ ಜಾಲತಾಣ ನಿರ್ಬಂಧಿಸಿ ನೋಡಿ ಸಾಕಷ್ಟು ಒಳ್ಳೆಯದಾಗುತ್ತದೆ ಎಂದಿದೆ.
ಆನ್‌ಲೈನ್ ಗೇಮಿಂಗ್‌ಗೆ ವಯೋಮಿತಿ ನಿಗದಿಪಡಿಸಲಾಗಿದೆ. ಇದೇ ಮಾದರಿ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಬಳಕೆಗೆ ವಯೋಮಿತಿ ನಿಗದಿಪಡಿಸಬೇಕು ಎ೦ದು ನ್ಯಾಯಾಲಯದ ಹೇಳಿತು. ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲ ಎಂ.ಎನ್. ಕುಮಾರ್, ಕೆಲವು ಆನ್ ಲೈನ್ ಗೇಮ್ ಆಡಲು ಕಾನೂನಿನ ಪ್ರಕಾರ ಈಗ ಆಧಾರ್ ಮತ್ತು ಇತರ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಸರ್ಕಾರ ಕ್ರಮ; ಸಚಿವ ಪ್ರಿಯಾಂಕ್ ಖರ್ಗೆ
ಹಾಗಾದರೆ ಆ ಕ್ರಮಗಳನ್ನು ಸಾಮಾಜಿಕ ಮಾಧ್ಯಮ ಬಳಕೆ ಮಾಡುವವರಿಗೆ ಏಕೆ ವಿಸ್ತರಿಸಿಲ್ಲ? ಈಗ ಎಲ್ಲದಕ್ಕೂ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 17 ಅಥವಾ 18 ವಯೋಮಿತಿಯ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಪೂರಕ ಯಾವುದು ಮಾರಕ ಯಾವುದು ಎಂಬುದನ್ನು ನಿರ್ಧರಿಸುವ ಪ್ರೌಢಿಮೆ ಇದೆಯೇ? ಮತದಾನಕ್ಕೆ ಕನಿಷ್ಠ 21 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅದೇ ಮಾದರಿಯಲ್ಲಿ ಸಾಮಾಜಿಕ ಮಾಧ್ಯಮ ಬಳಕೆ ಮಾಡಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎಂದು ವಯೋಮಿತಿ ನಿಗದಿಪಡಿಸುವುದು ಒಳಿತು ಎಂದು ನ್ಯಾಯಪೀಠ ಹೇಳಿದೆ.
ಅಂತಿಮವಾಗಿ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂಬ ಎಕ್ಸ್‌ಕಾರ್ಪ್ ಸಂಸ್ಥೆಯ ಮಧ್ಯಂತರ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಬುಧವಾರ ಪ್ರಕಟಿಸುವುದಾಗಿ ಹೇಳಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.
ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69A ಅಡಿಯಲ್ಲಿ ಫೆಬ್ರವರಿ 2, 2021 ಮತ್ತು ಫೆಬ್ರವರಿ 28, 2022 ರ ನಡುವೆ 1,474 ಖಾತೆಗಳು, 175 ಟ್ವೀಟ್‌ಗಳು, 256 URL ಗಳು ಮತ್ತು ಒಂದು ಹ್ಯಾಶ್‌ಟ್ಯಾಗ್ ಅನ್ನು ನಿರ್ಬಂಧಿಸುವಂತೆ ಸರ್ಕಾರ 10 ಆದೇಶಗಳನ್ನು ಹೊರಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:50 am, Wed, 20 September 23