6 ನಿಗಮಗಳಿಗೆ ನಿರ್ದೇಶಕರ ನೇಮಿಸಿ ಆದೇಶ ಹೊರಡಿಸಿದ ಸರ್ಕಾರ
ಚುನಾವಣೆ ಘೋಷಣೆಗೆ ಒಂದು ತಿಂಗಳು ಬಾಕಿ ಇರುವಂತೆಯೇ 6 ನಿಗಮಗಳಿಗೆ ಒಟ್ಟು 11 ನಿರ್ದೇಶಕರ ನೇಮಕ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೇಮಕಾತಿ ಆದೇಶಿಸಲಾಗಿದೆ.
ಬೆಂಗಳೂರು: ಚುನಾವಣೆ ಘೋಷಣೆಗೆ ಒಂದು ತಿಂಗಳು ಬಾಕಿ ಇರುವಂತೆಯೇ 6 ನಿಗಮಗಳಿಗೆ ಒಟ್ಟು 11 ನಿರ್ದೇಶಕರ ನೇಮಕ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ (Backward Classes Welfare Department) ನೇಮಕಾತಿ ಆದೇಶಿಸಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯ 11 ಜನರನ್ನು ನಿರ್ದೇಶಕರಾಗಿ ನೇಮಕ ಮಾಡಿದೆ. ಅದರಲ್ಲಿಯೂ ಶಿಗ್ಗಾಂವಿ ವ್ಯಾಪ್ತಿಯ 6 ಜನರಿಗೆ ಸ್ಥಾನ ನೀಡಲಾಗಿದೆ. ದೇವರಾಜ ಅರಸು ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಮರಾಠಾ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಮತ್ತು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಗಳಿಗೆ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.
ತರಾತುರಿ ಟೆಂಡರ್ ಕರೆದ ಸರ್ಕಾರ
ಸರ್ಕಾರದ ಅವಧಿ ಕೆಲವೇ ದಿನಗಳಿರುವುದರಿಂದ ಎಲ್ಲಾ ಇಲಾಖೆಗಳಲ್ಲಿ ತರಾತುರಿಯಾಗಿ ಟೆಂಡರ್ ಕರೆಯುತ್ತಿದೆ. 500 ಕೋಟಿ ರೂ ಟೆಂಡರ್ ಅನ್ನು 1000 ಕೋಟಿಗೆ ಮಾರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಟೆಂಡರ್ ಗೋಲ್ಮಾಲ್ನಲ್ಲಿ ತೊಡಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ವಿವಿಧ ಇಲಾಖೆಗಳಲ್ಲಿ ಟೆಂಡರ್ ಗೋಲ್ಮಾಲ್ ಹೇಗೆ ನಡೆಯುತ್ತಿದೆ ಎಂಬ ವಿವರ ನೀಡಿದ್ದಾರೆ.
ಇದನ್ನೂ ಓದಿ: HD Kumaraswamy: ಪಂಚರತ್ನ ಯಾತ್ರೆಯಿಂದ ಬಿಜೆಪಿ, ಕಾಂಗ್ರೆಸ್ಗೆ ಆತಂಕ; ಹೆಚ್ಡಿ ಕುಮಾರಸ್ವಾಮಿ
ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರುತ್ತದೆ. ಬಜೆಟ್ ಸೆಷನ್ ಮುಗಿದ ಮೇಲೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಹೀಗಾಗಿ ಜಲಸಂಪನ್ಮೂಲ, ಇಂಧನ, ಆರೋಗ್ಯ ಸೇರಿ ಎಲ್ಲಾ ಇಲಾಖೆಗಳಲ್ಲಿ ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಎರಡು ಪಟ್ಟು ಹೆಚ್ಚು ಮೊತ್ತಕ್ಕೆ ಎಸ್ಟಿಮೇಟ್ ಮಾಡುತ್ತಿದ್ದಾರೆ. ಏಳು ದಿನ ಮಾತ್ರ ಟೈಂ ಕೊಟ್ಟು, ಗುತ್ತಿಗೆದಾರರನ್ನು ಸೆಟ್ ಮಾಡಲು ಶಾಸಕರಿಗೆ ಹಂಚಿಬಿಟ್ಟಿದ್ದಾರೆ. ಬೀದಿಯಲ್ಲಿ ನಿಂತು ಅವರು ಬನ್ನಿ ಬನ್ನಿ ಎಂದು ಕರೆಯುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಈ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮಂತ್ರಿ ಮಾಡದೇ ಇರುವವರಿಗೆ 2-3 ಸಾವಿರ ಕೋಟಿ ಕೆಲಸ ಅಂತ ಟೆಂಡರ್ ಹಂಚಿಕೆ ಮಾಡುತ್ತಾ ಇದ್ದಾರೆ. ನಮಗೆ ಅದೇ ಶಾಸಕರು ಮಾಹಿತಿ ಕೊಡುತ್ತಿದ್ದಾರೆ. ಸಾವಿರಾರು ಕೋಟಿ ರೂ ಮೊತ್ತದ ಹಳೆಯ ಕೆಲಸದ ಬಿಲ್ ಬಾಕಿ ಉಳಿದುಕೊಂಡಿದ್ದರೂ ಹೊಸ ಟೆಂಡರ್ಗಳನ್ನು ಹಂಚಲಾಗುತ್ತಿದೆ. ಯಾರು ಮುಂಚಿತವಾಗಿ ಹಣ ತಲುಪಿಸುತ್ತಾರೋ ಅವರಿಗೆ ಕೆಲಸದ ಹಂಚಿಕೆ ಮಾಡುತ್ತಿದ್ದಾರೆ. ಯಾವುದೂ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದರು.
ಸಿಎಂ ಬೊಮ್ಮಾಯಿ ಕಾರಣ ಎಂದ ಸಿದ್ದರಾಮಯ್ಯ
ಸರ್ಕಾರದಿಂದ ಟೆಂಡರ್ ಗೋಲ್ಮಾಲ್ ನಡೆದಿದೆ ಎನ್ನುವ ಆರೋಪವನ್ನು ಸಿದ್ದರಾಮಯ್ಯ ಕೂಡ ಮಾಡಿದ್ದು, ಇದಕ್ಕೆ ಸಿಎಂ ಬೊಮ್ಮಾಯಿ ಕಾರಣ ಎಂದು ದೂಷಿಸಿದ್ದಾರೆ. ಡಿಕೆ ಶಿವಕುಮಾರ್ ನಿವಾಸದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಾವು ಈ ಹಗರಣವನ್ನು ಇಲ್ಲಿಗೇ ಬಿಡದೇ ಕೋರ್ಟ್ ಮೊರೆ ಹೋಗುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಟೆಂಡರ್ ರದ್ದು ಮಾಡುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದನ್ನು ಸಿದ್ದರಾಮಯ್ಯ ಕೂಡ ಪುನರುಚ್ಚರಿಸಿದ್ದಾರೆ. ಸರ್ಕಾರದಿಂದ ಒಂದೇ ದಿನ 18 ಸಾವಿರ ಕೋಟಿ ರೂ ಟೆಂಡರ್ ಆಗಿದೆ. ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ತನಿಖಾ ಸಮಿತಿ ರಚನೆ ಮಾಡಿ ಹಗರಣ ಬಯಲಿಗೆಳೆಯುತ್ತೇವೆ. ಯಾರ ಮೇಲಾದರೂ ಆರೋಪ ಇದ್ದರೂ ಎಲ್ಲವನ್ನೂ ತನಿಖೆಗೆ ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಸಚಿವ ಸೋಮಣ್ಣ ಮುನಿಸು ಶಮನಕ್ಕೆ ಸಿಎಂ ಬೊಮ್ಮಾಯಿ ಯತ್ನ; ಸೋಮಣ್ಣ ನಡೆ ಇನ್ನೂ ನಿಗೂಢ
ಇದೆಲ್ಲವೂ ಎಲೆಕ್ಷನ್ ಫಂಡ್ ರೇಸ್ ಆಗಿದೆ. ಚುನಾವಣೆಗೆ 6 ಸಾವಿರ ಕೋಟಿ ರೂ ಕೊಡುತ್ತೇವೆ ಎಂದು ಹೇಳ್ತಾರೆ. ಇಷ್ಟರಮಟ್ಟಿಗೆ ರಾಜ್ಯವನ್ನು ಹಾಳುಮಾಡಲು ಹೊರಟಿದ್ದಾರೆ ಎಂದು ಖೇದ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಬೋರ್ಡ್ ಮೀಟಿಂಗ್ಗಳೆಲ್ಲಾ ಸಿಎಂ ಬೊಮ್ಮಾಯ ನೇತೃತ್ವದಲ್ಲೇ ನಡೆಯೋದು. ಟೆಂಡರ್ ಮೊತ್ತ ಎಷ್ಟು ಹೆಚ್ಚಿಸಬೇಕು ಎಂದು ಅವರೇ ಹೇಳಿರುತ್ತಾರೆ. ಇದಕ್ಕೆಲ್ಲಾ ಬೊಮ್ಮಾಯಿಯೇ ಕಾರಣ ಎಂದು ಆರೋಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:11 pm, Thu, 9 March 23