ಇನ್ನು ಮುಂದೆ ಹೊಯ್ಸಳ ಪೊಲೀಸರಿಗೆ ಬಂದೂಕು ಕಡ್ಡಾಯ: ಕಾರಣ ಇಲ್ಲಿದೆ

| Updated By: ಗಣಪತಿ ಶರ್ಮ

Updated on: Mar 21, 2024 | 9:36 AM

ಹೊಯ್ಸಳ ಪೊಲೀಸ್ ಸಿಬ್ಬಂದಿಯನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾತ್ರ ಇಟ್ಟಿದ್ದು, ಇನ್ನು ಮುಂದೆ ಹೊಯ್ಸಳ ಸಿಬ್ಬಂದಿ ಬಳಿ ಬಂದೂಕು ಇರಲೇಬೇಕು ಎಂದು ಆದೇಶ ಹೊರಡಿಸಿದೆ. ಅಪರಾಧ ಕೃತ್ಯಗಳ ಸಂದರ್ಭದಲ್ಲಿ ಮಾರಕಸ್ತ್ರಗಳ ಸಹಿತ ಇರುವ ಆರೋಪಿಗಳನ್ನು ವಶಕ್ಕೆ ಪಡೆಯಲು ಇದರಿಂದ ಪೊಲೀಸರಿಗೆ ಸುಲಭವಾಗಲಿದೆ.

ಇನ್ನು ಮುಂದೆ ಹೊಯ್ಸಳ ಪೊಲೀಸರಿಗೆ ಬಂದೂಕು ಕಡ್ಡಾಯ: ಕಾರಣ ಇಲ್ಲಿದೆ
ಹೊಯ್ಸಳ ಪೊಲೀಸ್
Follow us on

ಬೆಂಗಳೂರು, ಮಾರ್ಚ್​ 21: ಬೆಂಗಳೂರಿನಲ್ಲಿ (Bengaluru) ಗಸ್ತು ಕಾರ್ಯಾಚರಣೆ ನಡೆಸುವ ಹೊಯ್ಸಳ ಪೊಲೀಸ್ (Hoysala Police) ಸಿಬ್ಬಂದಿಗೆ ಬಂದೂಕು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ. ಹೊಯ್ಸಳ ತಂಡದ ಎಎಸ್​ಐ ಬಳಿ ಗನ್ ಕಡ್ಡಾಯವಾಗಿ ಇರಬೇಕು ಎಂದು ಸೂಚನೆ ನೀಡಲಾಗಿದೆ. ಸಾಮಾನ್ಯವಾಗಿ ಯಾವುದೇ ಅಪರಾಧ ಕೃತ್ಯ ಅಥವಾ ಇತರ ಘಟನೆಗಳು ಸಂಭವಿಸಿದಾಗ ಮೊದಲು ಸ್ಥಳಕ್ಕೆ ತಲುಪುವುದು ಹೊಯ್ಸಳ ಸಿಬ್ಬಂದಿ. ಕೃತ್ಯ ನಡೆಯುವ ಸ್ಥಳದಲ್ಲಿ ಆರೋಪಿಗಳ ಕೈಯಲ್ಲಿ ಮಾರಕಸ್ತ್ರಗಳು ಅಥವಾ ಇತರ ಆಯುಧಗಳಿದ್ದರೆ ಅವರನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಈ ಕಾರಣಕ್ಕೆ ಬಂದೂಕು ಕಡ್ಡಾಯಗೊಳಿಸಲಾಗಿದೆ.

ಘಟನಾ ಸ್ಥಳದಲ್ಲಿರುವ ಆರೋಪಿಗಳ ಬಳಿ ಮಾರಕಾಸ್ತ್ರಗಳಿದ್ದಲ್ಲಿ ಅವರು ಪೊಲೀಸರ ಮೇಲೆ ಕೂಡ ದಾಳಿ ನಡೆಸುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಅವರನ್ನು ಬಂಧಿಸುವುದು ಪೊಲೀಸರಿಗೆ ಸಾಧ್ಯವಾಗದೆ ಹೋಗಬಹುದು. ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸರ ಬಳಿ ಆಯುಧಯ ಇರಲೇಬೇಕಾಗುತ್ತದೆ. ಈ ಕಾರಣಕ್ಕೆ ಗನ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸುವೆ.

ಇತ್ತೀಚೆಗೆ ಕೋಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಭರಣ ಅಂಗಡಿಯೊಂದರಲ್ಲಿ ದರೋಡೆ ನಡೆದಿತ್ತು. ಆ ಸಂದರ್ಭ ಹೊಯ್ಸಳ ಪೊಲೀಸರು ಮೊದಲು ಸ್ಥಳಕ್ಕೆ ತಲುಪಿದ್ದರು. ಆರೋಪಿಗಳ ಕೈಯಲ್ಲಿ ಮಾರಕಾಸ್ತ್ರಗಳಿದ್ದವು. ಇಂಥ ಸಂದರ್ಭಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಅಟ್ಯಾಕ್ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ. ಈ ಘಟನೆಯು ಪೊಲೀಸ್ ಇಲಾಖೆಯಲ್ಲಿ ಜಾಗೃತಿ ಮೂಡಿಸಲು ಕಾರಣವಾಗಿದೆ. ಪರಿಣಾಮವಾಗಿ ಬಂದೂಕು ಕಡ್ಡಾಯಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.

ಇದನ್ನೂ ಓದಿ: ಬೆಂಗಳೂರು; ಜ್ಯುವೆಲ್ಲರಿ ಶಾಪ್​ಗೆ ನುಗ್ಗಿ ಗುಂಡು ಹಾರಿಸಿದ ದುಷ್ಕರ್ಮಿಗಳು, ಮಾಲೀಕ ಸೇರಿ ಇಬ್ಬರಿಗೆ ಗಾಯ

ಬೆಂಗಳೂರಿನ ದೇವಿನಗರದಲ್ಲಿರುವ ಲಕ್ಷ್ಮಿ ಜ್ಯುವೆಲ್ಲರಿ ಶಾಪ್​ಗೆ ಇಬ್ಬರು ದುಷ್ಕರ್ಮಿಗಳು ನುಗ್ಗಿ ದರೋಡೆ ಮಾಡಲು ಯತ್ನಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ಆ ಸಂದರ್ಭ ಗುಂಡಿನ ದಾಳಿ ಸಹ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಒಟ್ಟು ಮೂರು ಸುತ್ತು ಗುಂಡು ಹಾರಿಸಲಾಗಿತ್ತು. ದುಷ್ಕರ್ಮಿಗಳು ದರೋಡೆ ಮಾಡುವುದಷ್ಟೇ ಅಲ್ಲದೆ, ಸುಪಾರಿ ಪಡೆದು ಜ್ಯುವೆಲ್ಲರಿ ಅಂಗಡಿ ಮಾಲೀಕನನ್ನು ಕೊಲೆ ಮಾಡಲು ಬಂದಿದ್ದರು ಎಂಬ ಶಂಕೆ ಕೂಡ ವ್ಯಕ್ತವಾಗಿತ್ತು. ಇಂಥ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಆರೋಪಿಗಳನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಹೊಯ್ಸಳ ತಂಡವನ್ನು ಇನ್ನಷ್ಟು ಸದೃಢಗೊಳಿಸಬೇಕಿದೆ. ಆ ನಿಟ್ಟಿನಲ್ಲಿ ಬಂದೂಕು ಕಡ್ಡಾಯಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:35 am, Thu, 21 March 24